ಜಾತಿಗಣತಿ ಬಹಿರಂಗಕ್ಕೆ ಪೀಪಲ್ಸ್‌ ಲಾಯರ್ಸ್‌ ಗಿಲ್ಡ್ ಗಡುವು

KannadaprabhaNewsNetwork |  
Published : Oct 31, 2024, 12:53 AM IST
30ಕೆಡಿವಿಜಿ1-ದಾವಣಗೆರೆಯಲ್ಲಿ ಬುಧವಾರ ರಾಜ್ಯ ಸಂಚಾಲಕ, ಹಿರಿಯ ವಕೀಲ ಅನೀಸ್ ಪಾಷ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆಯಲ್ಲಿ ಬುಧವಾರ ರಾಜ್ಯ ಸಂಚಾಲಕ, ಹಿರಿಯ ವಕೀಲ ಅನೀಸ್ ಪಾಷ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

15 ದಿನಗಳ ಒಳಗಾಗಿ ಜಾತಿ ಜನಗಣತಿ ವರದಿಯನ್ನು ಬಹಿರಂಗ ಪಡಿಸದಿದ್ದರೆ ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಪೀಪಲ್ಸ್‌ ಲಾಯರ್ಸ್‌ ಗಿಲ್ಡ್‌ನ ರಾಜ್ಯ ಸಂಚಾಲಕ, ಹಿರಿಯ ವಕೀಲ ಅನೀಸ್ ಪಾಷ ಎಚ್ಚರಿಸಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕಾಂಗ್ರೆಸ್ ಸರ್ಕಾರವು ಜಾತಿ ಜನಗಣತಿ ವರದಿ ತಯಾರಿಸಲು ಸಾರ್ವಜನಿಕರ ₹169 ಕೋಟಿ ರು. ಹಣ ವ್ಯಯ ಮಾಡಿ, ತಯಾರಿಸಿದ ಎಚ್.ಕಾಂತರಾಜು ಆಯೋಗದ ವರದಿಯನ್ನು ಮುಖ್ಯಸ್ಥ ಜಯಪ್ರಕಾಶ ಹೆಗಡೆ ಕಳೆದ ಫೆಬ್ರುವರಿಯಲ್ಲೇ ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದರು.

ಸರ್ಕಾರವು ಜಾತಿಗಣತಿ ವರದಿ ಅಂಗೀಕರಿಸಿ, ಬಹಿರಂಗಪಡಿಸಲು ವಿಳಂಬ ಮಾಡುವುದನ್ನು ಸಹಿಸಲಾಗದು. ಸರ್ಕಾರದ ನಿರ್ದೇಶನದಂತೆ ಆಯೋಗವು ಸವಿಸ್ತಾರ ವರದಿ ಮಂಡಿಸಿದೆ. ಕೆಲ ಸಮುದಾಯಗಳು ಆಯೋಗದ ವರದಿ ಅವೈಜ್ಞಾನಿಕ, ದುರುದ್ದೇಶದಿಂದ ಕೂಡಿದೆ. ಸಮಾಜವನ್ನು ಒಡೆಯುವ ಸಮೀಕ್ಷೆಯೆಂದೆಲ್ಲಾ ವರದಿ ಅಂಗೀಕರಿಸದಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದು, ಅದಕ್ಕೆ ಸರ್ಕಾರ ಸೊಪ್ಪು ಹಾಕಬಾರದು ಎಂದು ಹೇಳಿದರು.

ನಾಡಿನ ಕೆಲ ಮಠಾಧೀಶರು ಸಹ ಜಾತ್ಯತೀತ ರಾಜ್ಯದಲ್ಲಿ ಜಾತಿ ಜನಗಣತಿ ಬೇಡವೆನ್ನುತ್ತಿದ್ದಾರೆ. ಹೀಗೆ ಸಮುದಾಯಗಳು, ಮಠಾಧೀಶರು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ನ್ಯಾಯ ಸಮ್ಮತವಲ್ಲ. ಈಗಾಗಲೇ ಶಿಕ್ಷಣ, ಆರ್ಥಿಕ, ರಾಜಕೀಯ ಸೇರಿದಂತೆ ಪ್ರತಿ ರಂಗದಲ್ಲೂ ಉತ್ತಮ ಸ್ಥಾನ, ಸ್ಥಿತಿಯಲ್ಲಿರುವ ಸಮುದಾಯಗಳು ತುಳಿತಕ್ಕೊಳಗಾದ ಬೇರೆ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡುವ ನಿಟ್ಟಿನಲ್ಲಿ ನಿಲ್ಲಬೇಕೆ ಹೊರತು, ವರದಿ ಜಾರಿಗೆ ವಿರೋಧಿಸುವುದಲ್ಲ ಎಂದು ಅವರು ತಿಳಿಸಿದರು.

ಇವ ನಮ್ಮವ ಇವ ನಮ್ಮ ಎನ್ನುತ್ತಾ ಎಲ್ಲಾ ಜಾತಿ ಸಮುದಾಯಗಳನ್ನು ಒಂದಾಗಿ ಕಂಡು, ಅನುಭವ ಮಂಟಪ ಸ್ಥಾಪಿಸುವ ಮೂಲಕ ಎಲ್ಲರನ್ನೂ ಒಗ್ಗೂಡಿಸಿದ ಬಸವಣ್ಣನವರು ಎಲ್ಲಾ ಜಾತಿ, ದರ್ಮಿಯರಿಗೆ ಸಮಾನತೆ, ಸಾಮಾಜಿಕ ನ್ಯಾಯ ಕೊಡಿಸಲು ನಿರಂತರ ಹೋರಾಡಿದವರು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಸಂವಿಧಾನದ ಆಶಯ ಸಹ ಕೂಡ ಇದೇ ಆಗಿದೆ. ಶೋಷಿತರ ಪರವಾಗಿ ನಿಲ್ಲುವುದೇ ನಿಜವಾದ ಧರ್ಮವಾಗಿದೆ ಎಂದು ಅವರು ಮಾಹಿತಿ ನೀಡಿದರು. ಇನ್ನು15 ದಿನದೊಳಗೆ ಜಾತಿ ಜಣಗಣತಿ ವರದಿ ಬಿಡುಗಡೆ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪೀಪಲ್ಸ್‌ ಲಾಯರ್ಸ್‌ ಗಿಲ್ಡ್‌ನಿಂದ ನೋಟೀಸ್ ಸಹ ಜಾರಿ ಮಾಡಿದ್ದೇವೆ. ಒಂದು ವೇಳೆ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ, ಜಾತಿ ಜಣಗಣತಿ ವರದಿ ಅಂಗೀಕರಿಸಿ, ಬಿಡುಗಡೆ ಮಾಡದಿದ್ದರೆ ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಹೋರಾಟ ನಡೆಸಬೇಕಾದೀತು ಎಂದು ಅವರು ಪುನರುಚ್ಛರಿಸಿದರು.

ಈ ವೇಳೆ ವಕೀಲರಾದ ಜಸ್ಟಿನ್ ಜಯಕುಮಾರ, ಗಿಲ್ಡ್ ನ ರುದ್ರೇಶ, ಪ್ರದೀಪ ಲೋಕಿಕೆರೆ, ಹನೀಫ್ ಸಾಬ್‌, ನಾಗರಾಜ, ಅಂಜಿನಪ್ಪ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ