ಕನ್ನಡಪ್ರಭ ವಾರ್ತೆ ಮಂಡ್ಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷದ ನಂತರ ಜನವಿರೋಧಿ ಅಲೆಯನ್ನು ಕಾಣುತ್ತೇವೆ. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನೂರೇ ದಿನಗಳಲ್ಲಿ ಅವರ ಪಕ್ಷದ ಶಾಸಕರಿಂದಲೇ ವಿರೋಧಿ ಅಲೆ ಎದುರಾಗಿತ್ತು ಎಂದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಕಾಂಗ್ರೆಸ್ ಪಕ್ಷದ 20 ಜನ ಶಾಸಕರ ಸಹಿಯುಳ್ಳ ಪತ್ರವನ್ನು ಸರ್ಕಾರ ವಿರುದ್ಧ ಬರೆದು ಮುಖ್ಯಮಂತ್ರಿಗಳಿಗೆ ತಲುಪಿಸಿದ್ದು ಜನ ಇನ್ನೂ ಮರೆತಿಲ್ಲ. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರಿಗೆ ಸಂಪುಟ ಸ್ಥಾನಮಾನ ನೀಡಿ ಶಮನ ಮಾಡಿದ್ದರು ಎಂದರು.60 ಪರ್ಸೆಂಟ್ ಸರ್ಕಾರ:
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರು.ಲೂಟಿ ಮಾಡಿದ್ದಾರೆ. ಇದಕ್ಕೆ ಅಮಾಯಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿ ಹೋರಾಟ ನಡೆಸಿದ ನಂತರ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದು ಸದನದಲ್ಲಿ 187 ಕೋಟಿ ಅಲ್ಲ. 97 ಕೋಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಆದರೆ, ವಾಲ್ಮೀಕಿ ನಿಗಮದ ಅಧ್ಯಕ್ಷ ಬಸವರಾಜ ದದ್ದಲ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಇಂಧನ ಇಲಾಖೆಯಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲು 15,568 ಕೋಟಿ ಹಗರಣ ನಡೆದಿರುವ ಶಂಕೆ ಇದೆ. ಹಿಂದೆ 450 ರಿಂದ 750 ರು.ಗಳಿಗೆ ಮೀಟರ್‌ಗಳು ದೊರೆಯುತ್ತಿದ್ದವು. ಆದರೆ, ಇಂದು 15 ರಿಂದ 16 ಸಾವಿರ ರು. ನೀಡಬೇಕಾಗಿದೆ. ಈ ಪ್ರಮಾಣದಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಸರಣಿ ಕೊಲೆಗಳು, ಸುಲಿಗೆಗಳು ಹೆಚ್ಚುತ್ತಲೇ ಇವೆ. ರಾಜ್ಯ ಸರ್ಕಾರದ ಧೋರಣೆಯಿಂದ ರೋಸಿ ಹೋಗಿರುವ ಅಧಿಕಾರಿ ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್, ಬೆಳಗಾವಿಯಲ್ಲಿ ಪ್ರಥಮ ದರ್ಜೆ ಗುಮಾಸ್ತ ರುದ್ರಣ್ಣ ಯಡವಣ್ಣನವರ್, ಪೊಲೀಸ್ ಅಧಿಕಾರಿ ಪರಶುರಾಮ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಅವರ ಕಿರುಕುಳದಿಂದ ಬೇಸತ್ತು ವಿನಯ್, ಪ್ರಿಯಾಂಕ ಖರ್ಗೆ ಅವರ ಆಪ್ತ ಸಚಿನ್ ಸೇರಿದಂತೆ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ಕೊಡುವುದಾಗಿ ಹೇಳುವ ಸಿದ್ದರಾಮಯ್ಯ ಸರ್ಕಾರ ಇದುವರೆಗೂ ನೀಡಿಲ್ಲ. ರೈತರಿಗೆ 860 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಗ್ರಾಹಕರಿಗೆ 9 ರು. ಬರೆ ಎಳೆದಿದೆ. ಈ ಹಿಂದೆ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ನೀಡುತ್ತಿದ್ದ 4 ಸಾವಿರ ನಿಲ್ಲಿಸಲಾಗಿದೆ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರಾಜ್ಯ ಕಾರ್‍ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮುಖಂಡರಾದ ವಿವೇಕ್, ಸಿ.ಟಿ.ಮಂಜುನಾಥ್, ನಾಗಾನಂದ, ರಮೇಶಾಚಾರ್, ವೆಂಕಟೇಶ್ ಇದ್ದರು.