ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಜಿಲ್ಲೆಯ ಜನರು ತೋರಿಸುತ್ತಿರುವ ಪ್ರೀತಿ, ವಿಶ್ವಾಸ ನನ್ನ ಆತ್ಮಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಚಾರಕ್ಕೆ ಹೋದಕಡೆ ನನ್ನನ್ನು ಮನೆ ಮಗನಂತೆ ಬರಮಾಡಿಕೊಳ್ಳುತ್ತಿದ್ದಾರೆ. ಅವರ ಬೆಂಬಲವೇ ನನಗೆ ಶ್ರೀರಕ್ಷೆ ಎಂದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಆತ್ಮವಿಶ್ವಾಸ ವ್ಯಕ್ತಪಡಿಸಿದರು.ಪಟ್ಟಣದ ವಿವಿಧೆಡೆ ಚುನಾವಣಾ ಪ್ರಚಾರ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಈ ಜಿಲ್ಲೆಯ ಮಣ್ಣಿನ ಮಗ. ಜನರಿಗೆ ಒಳಿತು ಮಾಡಲು ರಾಜಕಾರಣಕ್ಕೆ ಬಂದಿದ್ದೇನೆ. ಜಿಲ್ಲೆಯನ್ನು ಅಭಿವೃದ್ಧಿ ಮಾಡಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ನೂರಕ್ಕೆ ನೂರರಷ್ಟು ಜನ ನನ್ನ ಕೈ ಹಿಡಿಯಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ನನ್ನ ಗೆಲುವಿಗೆ ಸಹಕಾರಿಯಾಗಲಿವೆ. ಜೊತೆಗೆ ಸಮಾಜದ ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಹೊರಡಿಸಿರುವ 25 ಭರವಸೆಗಳನ್ನು ಒಳಗೊಂಡ ನ್ಯಾಯಪತ್ರಕ್ಕೆ ಜನಮನ್ನಣೆ ಸಿಗಲಿದ್ದು ಜನ ಕೈ ಹಿಡಿಯಲಿದ್ದಾರೆ ಎಂದರು.ವಿವಿಧ ಗ್ರಾಮಗಳಲ್ಲಿ ಪ್ರಚಾರ:
ತಾಲೂಕಿನ ಬಸ್ತಿಪುರ, ಹುಲಿಕೆರೆ , ಹೊಂಡವಾಡಿ, ಕೆ. ಆರ್. ಎಸ್, ಮಜ್ಜಿಗೆಪುರ , ಬೆಳಗೋಳ, ಹೊಸ ಆನಂದೂರು, ಮೊಗರಹಳ್ಳಿ, ಪಿ.ಹೊಸಹಳ್ಳಿ, ಪಾಲಹಳ್ಳಿ, ನಗುವನ ಹಳ್ಳಿ, ಚಂದಗಾಲು, ಹೊಸೂರು, ಮೇಳಾಪುರ, ಹೆಬ್ಬಾಡಿ ಹುಂಡಿ, ಹೆಬ್ಬಾಡಿ, ಹಂಪಾಪುರ, ಹುರುಳಿ ಕ್ಯಾತನಹಳ್ಳಿ, ಚಿಕ್ಕಂಕನಹಳ್ಳಿ, ತರಿಪುರ, ಚನ್ನಹಳ್ಳಿ, ಬಿದರಳ್ಳಿ, ಮಹದೇವಪುರ ಬೋರೆ, ಮಹದೇವಪುರ, ಮಂಡ್ಯ ಕೊಪ್ಪಲು, ಗೆಂಡೆ ಹೊಸಳ್ಳಿ ಗ್ರಾಮಗಳಲ್ಲಿ ಮತಪ್ರಚಾರ ನಡೆಸಿದರು.ರಸ್ತೆ ಬದಿ ಕುಳಿತು ಊಟ ಸೇವನೆ:ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ರಸ್ತೆ ಬದಿಯಲ್ಲೇ ಕುಳಿತು ಊಟ ಮಾಡುವ ಮೂಲಕ ಸರಳತೆ ಮೆರೆದರು. ಪಾಲಹಳ್ಳಿಯಲ್ಲಿ ಮತಪ್ರಚಾರ ನಡೆಸಿ ಅರಳಿಕಟ್ಟೆಯಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮತ್ತು ಕಾರ್ಯಕರ್ತರ ಜೊತೆ ಕುಳಿತು ಮೊಸರನ್ನ ಸೇವಿಸಿ ಎಲ್ಲರ ಗಮನ ಸೆಳೆದರು. ಚಿಕ್ಕ ಅಂಕನಹಳ್ಳಿಯಲ್ಲಿ ಗ್ರಾಮಸ್ಥರೊಂದಿಗೆ ಟೀ ಕುಡಿದು, ಬನ್ ಬಿಸ್ಕತ್ತು ತಿಂದರು.
ದೇಗುಲಗಳಲ್ಲಿ ಪೂಜೆ, ಬೈಕ್ ರ್‍ಯಾಲಿ:ತಾಲೂಕಿನ ಬಸ್ತಿಪುರದ ಶ್ರೀ ಬಸವೇಶ್ವರ ದೇವಸ್ಥಾನ, ಹುಲಿಗೆರೆ ಗ್ರಾಮದ ಶ್ರೀ ಪ್ರಸನ್ನ ವೀರಾಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕೆ.ಆರ್.ಎಸ್ ನ ರಾಘವೇಂದ್ರ ಮಠಕ್ಕೆ ಭೇಟಿ, ಅಖಿಲ ಭಾರತ ವೀರಶೈವ ಲಿಂಗಾಯತ ಮತ್ತು ಕ್ರಾಂತಿಯೋಗಿ ಬಸವಣ್ಣ ಜಂಟಿ ಪ್ರಚಾರ ಸಮಿತಿ ಮುಖಂಡರ ಭೇಟಿ ಬೆಂಬಲ ನೀಡುವಂತೆ ಮನವಿ ಮಾಡಿದರು.
ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡಗೆ ಜೈಕಾರ ಕೂಗಿ ಬೈಕ್ ರ್‍ಯಾಲಿ ನಡೆಸಿದರು.ನಂತರ ಬೈಕ್ ರ್‍ಯಾಲಿ ಹುಲಿಕೆರೆ, ಹೂಂಡವಾಡಿ, ಕೆ.ಆರ್.ಎಸ್., ಮಜ್ಜಿಗೆಪುರ, ಬೆಳಗೋಳ ಮಾರ್ಗವಾಗಿ ನಾನಾ ಗ್ರಾಮಗಳಿಗೆ ಸಾಗಿತು. ಕಾಂಗ್ರೆಸ್ ಟೋಪಿ, ಶಾಲು ಧರಿಸಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಾಂಗ್ರೆಸ್ ಬಾವುಟವನ್ನು ಹಿಡಿದುಕೊಂಡು ರಸ್ತೆಯುದ್ದಕ್ಕೂ ಕಾಂಗ್ರೆಸ್ ಗೆ ಜೈಕಾರ ಹಾಕುತ್ತ ಸಾಗಿದರು.ಈ ವೇಳೆ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿತ್ರ ರಮೇಶ್, ಪ್ರಕಾಶ್ , ಮುಖಂಡರಾದ ಎಂ.ಎಸ್ .ಚಿದಂಬರ್ , ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.