ಪಿಎಂ ಸೂರ್ಯ ಘರ್‌ನತ್ತ ಜನರ ಚಿತ್ತ!

KannadaprabhaNewsNetwork |  
Published : Jun 25, 2025, 01:18 AM IST
ಪಿಎಂ ಸೂರ್ಯ ಘರ್‌ | Kannada Prabha

ಸಾರಾಂಶ

ಪರ‍್ಯಾಯ ಇಂಧನಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು 2024ರ ಫೆಬ್ರವರಿಯಲ್ಲಿ ಪಿಎಂ ಸೂರ್ಯ ಘರ್‌ ಎಂಬ ಯೋಜನೆಯನ್ನು ಪರಿಚಯಿಸಿತು. ಈ ಯೋಜನೆಯ ಜಾರಿಗೂ ಮೊದಲೂ ಸೌರ್‌ ಶಕ್ತಿ ವಿದ್ಯುತ್‌ ಉತ್ಪಾದನೆ ಆಗುತ್ತಿತ್ತು. ಆದರೆ, ಆಗ ಕನಿಷ್ಠ 10 ಕಿ.ವ್ಯಾ. ಉತ್ಪಾದನೆಯ ಸಾಮರ್ಥ್ಯ ಹೊಂದಿರಬೇಕಿತ್ತು. ಆದರೆ, ಈಗ ಹಾಗಲ್ಲ. 1, 2, 3 ಕಿಲೋ ವ್ಯಾಟ್‌ನಷ್ಟು ವಿದ್ಯುತ್‌ನ್ನು ಉತ್ಪಾದಿಸುವವರೆಗೂ ಸಹ ಸಬ್ಸಿಡಿ ನೀಡಲಾಗುತ್ತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಸೋಲಾರ್‌ ವಿದ್ಯುತ್‌ ಉತ್ಪಾದಿಸಿ; ಆದಾಯ ಗಳಿಸಿ ಎಂಬ ಘೋಷವಾಕ್ಯದೊಂದಿಗೆ ಕೇಂದ್ರ ಸರ್ಕಾರ ಶುರು ಮಾಡಿದ ಪಿಎಂ ಸೂರ್ಯ ಘರ್‌ನತ್ತ ಜನರ ಚಿತ್ತ ನೆಟ್ಟಿದೆ. ಹೆಸ್ಕಾಂಗೆ ಬೇಕಾಗುವ ವಿದ್ಯುತ್‌ನಲ್ಲಿ ಶೇ.1.18ರಷ್ಟು ವಿದ್ಯುತ್‌ನ್ನು ಈ ಯೋಜನೆಯೇ ಪೂರೈಸುತ್ತಿದೆ.

ಪರ‍್ಯಾಯ ಇಂಧನಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು 2024ರ ಫೆಬ್ರವರಿಯಲ್ಲಿ ಪಿಎಂ ಸೂರ್ಯ ಘರ್‌ ಎಂಬ ಯೋಜನೆಯನ್ನು ಪರಿಚಯಿಸಿತು. ಈ ಯೋಜನೆಯ ಜಾರಿಗೂ ಮೊದಲೂ ಸೌರ್‌ ಶಕ್ತಿ ವಿದ್ಯುತ್‌ ಉತ್ಪಾದನೆ ಆಗುತ್ತಿತ್ತು. ಆದರೆ, ಆಗ ಕನಿಷ್ಠ 10 ಕಿ.ವ್ಯಾ. ಉತ್ಪಾದನೆಯ ಸಾಮರ್ಥ್ಯ ಹೊಂದಿರಬೇಕಿತ್ತು. ಆದರೆ, ಈಗ ಹಾಗಲ್ಲ. 1, 2, 3 ಕಿಲೋ ವ್ಯಾಟ್‌ನಷ್ಟು ವಿದ್ಯುತ್‌ನ್ನು ಉತ್ಪಾದಿಸುವವರೆಗೂ ಸಹ ಸಬ್ಸಿಡಿ ನೀಡಲಾಗುತ್ತಿದೆ. ಬ್ಯಾಂಕ್‌ ಸಾಲ ಕೂಡ ಸಲೀಸು ಆಗುತ್ತಿದೆ. ತಮ್ಮ ಮನೆ ಮಾಳಿಗೆ ಮೇಲೆ ಸೋಲಾರ್‌ ಪ್ಯಾನಲ್‌ ಹಾಕಿಕೊಂಡು ವಿದ್ಯುತ್‌ ಉತ್ಪಾದಿಸಬಹುದಾಗಿದೆ. ಇದು ಮಧ್ಯಮ ವರ್ಗವನ್ನು ಗಮನದಲ್ಲಿ ಇಟ್ಟುಕೊಂಡು ಯೋಜನೆ ಜಾರಿಗೊಳಿಸಿತು. ತಮ್ಮ ಮನೆಗೆ ಬೇಕಾದಷ್ಟು ವಿದ್ಯುತ್‌ನ್ನು ಬಳಕೆ ಮಾಡಿ ಉಳಿದ ವಿದ್ಯುತ್‌ನ್ನು ಮಾರಾಟ ಕೂಡ ಮಾಡಬಹುದು.

ಹೇಗಿದು?:

ಆನ್‌ಲೈನ್‌ ಮೂಲಕ ಅರ್ಜಿ ಹಾಕಿ ಸೌಲಭ್ಯ ಪಡೆಯಬಹುದಾಗಿದೆ. ಒಂದು ಕಿಲೋ ವ್ಯಾಟ್‌ ಸಾಮರ್ಥ್ಯದ ಸೌರ್‌ ಶಕ್ತಿ ಉತ್ಪಾದನಾ ಪ್ಯಾನಲ್ಸ್‌ ಹಾಕಿಕೊಂಡರೆ ಖರ್ಚು ₹60 ಸಾವಿರದಿಂದ ₹80 ಸಾವಿರದಷ್ಟು ಆಗಬಹುದು. ಅದಕ್ಕೆ ಕೇಂದ್ರ ಸರ್ಕಾರ ₹30 ಸಾವಿರ ಸಬ್ಸಿಡಿ ನೀಡುತ್ತದೆ. ಇದಕ್ಕಿಂತ ಹೆಚ್ಚು ಕಿವ್ಯಾ ಪ್ಯಾನಲ್‌ ಹಾಕಿಸಿಕೊಂಡರೆ ಸಹಾಯಧನದ ಪ್ರಮಾಣವೂ ಹೆಚ್ಚಾಗಿದೆ.

ಹೆಚ್ಚುವರಿ ವಿದ್ಯುತ್‌ನ್ನು ಎಸ್ಕಾಂಗಳೇ ದುಡ್ಡು ಕೊಟ್ಟು ವಿದ್ಯುತ್‌ ಖರೀದಿಸುತ್ತವೆ. 1 ಕಿ.ವ್ಯಾ.ನ ಗ್ರಾಹಕರಿಂದ ₹2.25, 2 ರಿಂದ 3 ಕಿ.ವ್ಯಾನ ಗ್ರಾಹಕರಿಂದ ₹2.43, 3 ರಿಂದ 10 ಕಿ.ವ್ಯಾ. ವರೆಗೂ ₹2.62 ಗೆ ಪ್ರತಿ ಯುನಿಟ್‌ ವಿದ್ಯುತ್‌ ಖರೀದಿಸಲಾಗುತ್ತಿದೆ. ಸಬ್ಸಿಡಿ ಪಡೆಯದಿದ್ದರೆ ₹3.79 ಗೆ ಪ್ರತಿ ಯುನಿಟ್‌ ವಿದ್ಯುತ್‌ನ್ನು ಎಸ್ಕಾಂಗಳು ಖರೀದಿಸುತ್ತವೆ.

ಎಷ್ಟು ಗ್ರಾಹಕರು?:

ಏಳು ಜಿಲ್ಲೆಗಳ ವ್ಯಾಪ್ತಿಯ ಹೆಸ್ಕಾಂನಲ್ಲಿ ರೂಫ್‌ಟಾಪ್‌ ಮೂಲಕ ಸೌರ್‌ ಶಕ್ತಿ ಉತ್ಪಾದನೆಯಲ್ಲಿ ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಇಲ್ಲಿ 1579 ಉತ್ಪಾದಕರು ಇದ್ದಾರೆ. ಕೊನೆಯ ಸ್ಥಾನದಲ್ಲಿ ಹಾವೇರಿ ಜಿಲ್ಲೆ ಇದ್ದು, ಇಲ್ಲಿ 302 ಉತ್ಪಾಕರು ಇದ್ದಾರೆ. ಬಾಗಲಕೋಟೆ- 645, ಧಾರವಾಡ- 1417, ಗದಗ- 339, ಉತ್ತರ ಕನ್ನಡ- 778, ವಿಜಯಪುರ- 607 ಜನ ಸೇರಿದಂತೆ ಹೆಸ್ಕಾಂ ವ್ಯಾಪ್ತಿಯಲ್ಲಿ 5667 ಉತ್ಪಾದಕರು ಪಿಎಂ ಸೂರ್ಯ ಘರ್‌ನ ಲಾಭ ಪಡೆದಿದ್ದಾರೆ. ಕಳೆದ ಏಪ್ರೀಲ್‌ ತಿಂಗಳಿನಲ್ಲಿ ಲೆಕ್ಕ ಹಾಕಿದರೆ ಶೇ. 1.18ರಷ್ಟು ಸೋಲಾರ್‌ ಮೂಲಕ ವಿದ್ಯುತ್‌ ಉತ್ಪಾದಿಸಿವೆ.

5667 ರೂಫ್‌ ಟಾಪ್‌ನಿಂದ ಪ್ರತಿ ತಿಂಗಳು 18.79 ಮಿಲಿಯನ್‌ ಯುನಿಟ್‌ ವಿದ್ಯುತ್‌ ಜನರೇಟ್‌ ಆಗುತ್ತಿದೆ. ಅದರಲ್ಲಿ ಹೆಸ್ಕಾಂಗೆ 4.10 ಮಿಲಿಯನ್‌ ಯುನಿಟ್‌ ಮಾರಾಟ ಮಾಡಿದ್ದಾರೆ.

ಹೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ತಿಂಗಳಿಗೆ 5427527 ಗ್ರಾಹಕರಿದ್ದಾರೆ. 1588.09 ಮಿಲಿಯನ್‌ ಯುನಿಟ್‌ ಬೇಕಾಗುತ್ತದೆ. ಇದರಲ್ಲಿ ಶೇ. 0.28 ಮಿಲಿಯನ್‌ ಯುನಿಟ್‌ನ್ನು ವಿದ್ಯುತ್‌ ಸೋಲಾರ್‌ ಮೂಲಕ ಪಡೆದಿದೆ ಎಂದು ಹೆಸ್ಕಾಂ ಮೂಲಗಳು ತಿಳಿಸುತ್ತವೆ.

ಹೀಗೆ ಪಿಎಂ ಸೂರ್ಯ ಘರ್‌ ಯೋಜನೆಯು ದಿನದಿಂದ ದಿನಕ್ಕೆ ಖ್ಯಾತಿ ಗಳಿಸುತ್ತಿದ್ದು, ವಿದ್ಯುತ್‌ ಸ್ವಾವಲಂಬಿಯತ್ತ ಜನತೆಯ ಚಿತ್ತ ನೆಟ್ಟಿರುವುದು ವೇದ್ಯವಾಗುತ್ತದೆ.

ಪಿಎಂ ಸೂರ್ಯಘರ್‌ ಯೋಜನೆ ಅತ್ಯುತ್ತಮ ಯೋಜನೆ. ವಿದ್ಯುತ್‌ ಸ್ವಾವಲಂಬಿಗಳಾಗಲು ಈ ಯೋಜನೆ ಅನುಕೂಲಕರವಾಗಿದೆ. ಸದ್ಯಕ್ಕೆ ಜನರಿಂದ ಸ್ಪಂದನೆ ಸಿಗುತ್ತಿದೆ. ಇನ್ನು ಹೆಚ್ಚಾಗಬೇಕು. ಆ ನಿಟ್ಟಿನಲ್ಲಿ ಹೆಸ್ಕಾಂನಲ್ಲಿ ಕೆಲಸ ಮಾಡುತ್ತಿದೆ ಎಂದು ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ