ಬ್ಯಾಡಗಿ: ಕಳಪೆ ಮೆಣಸಿನಕಾಯಿ ಬೀಜ ಪೂರೈಸಿದ ಖಾಸಗಿ ಕಂಪನಿಯಿಂದ ಭಾನುವಾರ ಸಂಜೆಯೊಳಗೆ ರೈತರಿಗೆ ಪರಿಹಾರ ಘೋಷಣೆ ಮಾಡದಿದ್ದಲ್ಲಿ ಸೋಮವಾರದಿಂದ(ಮೇ 26) ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಪಾಲ್ಗೊಳ್ಳಲು ಬಿಡುವುದಿಲ್ಲವೆಂದು ರಾಜ್ಯ ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.ತಾಲೂಕಿನ ಹಿರೇಹಳ್ಳಿ, ಬಡಮಲ್ಲಿ ಗ್ರಾಮಗಳ ಕಳಪೆ ಬಿತ್ತನೆ ಬೀಜ ಪೂರೈಸಿದ ಕಂಪನಿಯಿಂದ ಪರಿಹಾರ ಕೊಡಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಬುಧವಾರ ಶಾಸಕರ ಕಾರ್ಯಾಲಯ ಎದುರು ಮೂರನೇ ದಿನದ ಪ್ರತಿಭಟನೆಯಲ್ಲಿ ಮಾತನಾಡಿದರು.ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹೈದ್ರಾಬಾದ್ ಖಾಸಗಿ ಬೀಜ ಕಂಪನಿ ಮೆಣಸಿನಕಾಯಿ ಹಾಗೂ ಕ್ಯಾಬೀಜ್ ಕಳಪೆ ಬೀಜಗಳನ್ನು ಮಾರಾಟ ಮಾಡುವ ಮೂಲಕ ರೈತರಿಗೆ ಮೋಸವೆಸಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು, ತೋಟಗಾರಿಕೆ ಉಪನಿರ್ದೇಶಕರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಬಳಿಕ ತಹಸೀಲ್ದಾರ್ ಕಾರ್ಯಾಲಯ ಎದುರು ಹಾಗೂ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿದ ರೈತರ ಅಂಗಡಿಗೆ ಬೀಜ ಹಾಕಿ ಪ್ರತಿಭಟನೆ ನಡೆಸಿದ್ದೇವೆ. ಆದರೆ ನಷ್ಟಗೊಂಡ ರೈತರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ ಮಾರಾಟ ಅಂಗಡಿಯವರು ಹಾಗೂ ಕಂಪನಿ ವ್ಯವಸ್ಥಾಪಕರು ರೈತರ ವಿರುದ್ಧ ತಿರುಗಿಬಿದ್ದಿದ್ದು, ಹೋರಾಟ ತೀವ್ರವಾಗಿ ನಡೆಯುತ್ತಿದ್ದರೂ ಅಂಜಿಕೆಯಿಲ್ಲದೆ ಕಳಪೆ ಬೀಜಗಳನ್ನು ಮಾರಲಾಗುತ್ತಿದೆ ಎಂದರು.
ರೈತಸಂಘದ ಗಂಗಣ್ಣ ಎಲಿ, ಚಿಕ್ಕಪ್ಪ ಛತ್ರದ, ಜಾನ್ ಪುನೀತ್, ಫಕೀರೇಶ ಅಜಗೊಂಡ್ರ, ಮೌನೇಶ ಕಮ್ಮಾರ, ಪ್ರಕಾಶ ಕೋಡಿಹಳ್ಳಿ, ಕೆ.ವಿ. ದೊಡ್ಡಗೌಡ್ರ, ವೀರೇಶ ದೇಸಾಯಿ ಇತರರಿದ್ದರು.