ಕೊಪ್ಪಳ: ಜನರು ಎಚ್ಚರಿಕೆಯಿಂದ ವಾಹನ ಚಲಾಯಿಸುವುದರ ಜತೆಗೆ ಸರ್ಕಾರದ ನಿಯಮ ಪಾಲನೆ ಮಾಡಬೇಕು. ನಿರ್ಲಕ್ಷ್ಯ ವಹಿಸಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುತ್ತವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಹೇಳಿದರು.
ಕಾನೂನು ಉಲ್ಲಂಘನೆಯಿಂದಲೇ ಬಹಳಷ್ಟು ರಸ್ತೆ ಅಪಘಾತಗಳು ಸಂಭವಿಸುತ್ತವೆ. ಮನೆಯಲ್ಲಿ ಒಬ್ಬರು ಅಥವಾ ಇಬ್ಬರು ದುಡಿಯುವವರು ಇರುತ್ತಾರೆ. ಅವರಿಗೆ ಅಪಘಾತವಾದಲ್ಲಿ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ. ಕಾನೂನುಗಳು ಇರುವುದು ನಮ್ಮ ಸುರಕ್ಷತೆಗೆ. ಹಾಗಾಗಿ ನಾವೆಲ್ಲರೂ ಕಾನೂನು ಪಾಲಿಸಬೇಕು. 18 ವರ್ಷದೊಳಗಿನ ಮಕ್ಕಳಿಗೆ ದ್ವಿಚಕ್ರ ಸೇರಿದಂತೆ ಇತರೆ ಯಾವುದೇ ವಾಹನಗಳ ಚಾಲನೆಗೆ ಕೊಡಬಾರದು. ಕೆಲವು ಪೋಷಕರು ತಮ್ಮ ಮಕ್ಕಳಿಗೆ ವಾಹನ ಚಲಾಯಿಸಲು ಕೊಟ್ಟು ನಮ್ಮ ಮಗ ಅಥವಾ ಮಗಳು ಚಿಕ್ಕ ವಯಸ್ಸಿನಲ್ಲಿ ವಾಹನ ಚಲಾಯಿಸುತ್ತಾರೆ ಎಂದು ಖುಷಿಪಡುತ್ತಾರೆ. ಅದು ಸರಿಯಲ್ಲ ಎಂದರು.
ವಾಹನಗಳ ಮಾಲೀಕರು ತಮ್ಮ ವಾಹನಗಳ ಮಾರಾಟ ಮಾಡಿದ ತಕ್ಷಣ ಅದನ್ನು ವಾಹನ ಖರೀದಿಸಿದವರ ಹೆಸರಿಗೆ ವರ್ಗಾಯಿಸಬೇಕು. ಇಲ್ಲದಿದ್ದರೆ ಏನಾದರೂ ಅಪಘಾತವಾದರೆ ವಾಹನ ತಮ್ಮ ಹೆಸರಲ್ಲಿ ಇರುವುದರಿಂದ ತಮ್ಮನ್ನೆ ಹೊಣೆಗಾರರನ್ನಾಗಿ ಮಾಡುತ್ತಾರೆ. ರಸ್ತೆ ನಿಯಮ ಎಲ್ಲರೂ ಪಾಲನೆ ಮಾಡುವುದರ ಜತೆಗೆ ಸೀಟ್ ಬೆಲ್ಟ ಉಪಯೋಗಿಸಿಕೊಂಡು ವಾಹನ ಚಲಾಯಿಸಬೇಕು ಎಂದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತಕುಮಾರ ಮಾತನಾಡಿ, ನಮ್ಮ ದೇಶದಲ್ಲಿ ಅಪಘಾತಗಳಿಂದಲೇ ಸಾಯುವವರ ಸಂಖ್ಯೆ ಹೆಚ್ಚಿದೆ. ಪ್ರತಿ ದಿನ 480 ರಿಂದ 500 ಜನರು ನಮ್ಮ ದೇಶದಲ್ಲಿ ಅಪಘಾತಗಳಿಂದ ಮೃತಪಡುತ್ತಾರೆ. ಜನರಲ್ಲಿ ಅರಿವಿದೆ ಆದರೆ ರಸ್ತೆ ನಿಯಮ ಪಾಲಿಸುವುದಿಲ್ಲ. ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿದೆ. ಹಾಗಾಗಿ ನಾವು ರಸ್ತೆ ಸಂಚಾರಿ ನಿಯಮ ಪಾಲಿಸುವ ಮೂಲಕ ವಾಹನ ಚಲಾಯಿಸಬೇಕು ಎಂದು ಹೇಳಿದರು.
ಪ್ರಾದೇಶಿಕ ಸಾರಿಗೆ ಇಲಾಖೆಯ ಹಿರಿಯ ಮೋಟಾರ ವಾಹನ ನಿರೀಕ್ಷಕ ವಿಜಯಕುಮಾರ್, ಮೃತ್ಯುಂಜಯ ವನಕೇರಿ, ಮೋಟಾರ ವಾಹನ ನಿರೀಕ್ಷಕ ಮಂಜುನಾಥ, ವಿಜಯೇಂದ್ರ ಸೇರಿದಂತೆ ಸಾರಿಗೆ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಸುರೇಶ ಕುಂಬಾರ ಸ್ವಾಗತಿಸಿದರು. ಆನಂದ ಹಳ್ಳಿಗುಡಿ ನಿರೂಪಿಸಿ ವಂದಿಸಿದರು.