ಕಾಂಗ್ರೆಸ್ ವಿರುದ್ಧ ಜನರೇ ದಂಗೆ ಏಳಬೇಕು: ಎಚ್‌ಡಿಕೆ

KannadaprabhaNewsNetwork |  
Published : Jun 17, 2024, 01:38 AM ISTUpdated : Jun 17, 2024, 11:05 AM IST
೧೬ಕೆಎಂಎನ್‌ಡಿ-೩ನಾಗಮಂಗಲ ತಾಲೂಕು ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕ್ಷೇತ್ರದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಕುಶಲೋಪರಿ ವಿಚಾರಿಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿರುವ ಕಾಂಗ್ರೆಸ್ ದುರಾಡಳಿತದ ವಿರುದ್ಧ ಜನರೇ ದಂಗೆ ಏಳಬೇಕು. ಜನರು ಎಚ್ಚರಿಸದಿದ್ದರೆ ಈ ದುರಾಡಳಿತ ಮುಂದೆ ಇನ್ನೂ ಹೆಚ್ಚಾಗುತ್ತದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

  ನಾಗಮಂಗಲ:  ರಾಜ್ಯದಲ್ಲಿರುವ ಕಾಂಗ್ರೆಸ್ ದುರಾಡಳಿತದ ವಿರುದ್ಧ ಜನರೇ ದಂಗೆ ಏಳಬೇಕು. ಜನರು ಎಚ್ಚರಿಸದಿದ್ದರೆ ಈ ದುರಾಡಳಿತ ಮುಂದೆ ಇನ್ನೂ ಹೆಚ್ಚಾಗುತ್ತದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಭಾನುವಾರ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಸಾಲುತ್ತಿಲ್ಲ. ಅವುಗಳನ್ನು ಮುಂದುವರೆಸಲು ಸರ್ಕಾರ ಹಣವಿಲ್ಲದೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿದ್ದಾರೆ ಎಂದು ಟೀಕಿಸಿದರು.

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ-ಜೆಡಿಎಸ್ ಪ್ರತಿಭಟನೆ ಮಾಡುವುದಕ್ಕಿಂತ ಸರ್ಕಾರದ ವಿರುದ್ಧ ಜನರೇ ರೊಚ್ಚಿಗೇಳಬೇಕು. ಜನರು ಸಿಡಿದೆದ್ದಾಗ ಮಾತ್ರ ಸರ್ಕಾರ ಜಾಗೃತಗೊಳ್ಳುತ್ತದೆ. ಗ್ಯಾರಂಟಿ ಯೋಜನೆಗಳನ್ನು ನಡೆಸಲಾಗದಿದ್ದ ಮೇಲೆ ನಿಲ್ಲಿಸಲಿ. ಜನರಿಂದಲೇ ಹಣ ವಸೂಲಿ ಮಾಡಿ, ಜನರಿಗೆ ನೀಡುವುದು ಎಷ್ಟರಮಟ್ಟಿಗೆ ಸರಿ. ಹಣಕಾಸು ಖಾತೆ ನಿಭಾಯಿಸಿರುವ ಮುಖ್ಯಮಂತ್ರಿಗಳಿಗೆ ಈಗಿನ ರಾಜ್ಯದ ಆರ್ಥಿಕ ಪರಿಸ್ಥಿತಿಯ ಅರಿವಿಲ್ಲವೇ. ಅರಿವಿದ್ದೂ ಜನರಿಗೆ ಬರೆ ಎಳೆಯುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಆದಿಚುಂಚನಗಿರಿಗೆ ಭೇಟಿ ನೀಡಿ ಶ್ರೀ ಕಾಲಭೈರವನ ದರ್ಶನ ಮಾಡಿ ಆಶೀರ್ವಾದ ಪಡೆದಿದ್ದೇನೆ. ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುವಂತೆ, ಒಕ್ಕಲಿಗ ಸಮಾಜ ಹಾಗೂ ರಾಜ್ಯಕ್ಕೆ ಗೌರವ ತರುವಂತೆ ಕೆಲಸ ಮಾಡಲು ಶಕ್ತಿ ಕೊಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.ಕೇಂದ್ರ ಸರ್ಕಾರದಲ್ಲಿ ೨ ಕಠಿಣ ಇಲಾಖೆಗಳನ್ನು ನಿಭಾಯಿಸುವ ಹೊಣೆಗಾರಿಕೆ ಸಿಕ್ಕಿದೆ. 

ಜೊತೆಗೆ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡುವ ಅವಕಾಶವೂ ದೊರಕಿದೆ. ಸಿಕ್ಕಿರುವ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡು ರಾಜ್ಯ ಮತ್ತು ಜಿಲ್ಲೆಗೆ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ನೀಡುವ ಭರವಸೆ ನೀಡಿದರು.ಎಚ್.ಡಿ. ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಿಖಿಲ್ ಸ್ಪರ್ಧಿಸುವರೇ ಎಂಬ ಪ್ರಶ್ನೆಗೆ ಅದಕ್ಕಿನ್ನೂ ಟೈಂ ಇದೆ ಬನ್ನಿ ಎಂದಷ್ಟೇ ಉತ್ತರಿಸಿದರು. ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕ ಕೆ.ಸುರೇಶ್‌ಗೌಡ ಇತರರಿದ್ದರು.

PREV

Recommended Stories

ಡಿಕೆ ಮಹದಾಯಿ ಹೇಳಿಕೆಗೆ ಗೋವಾ ಸಿಎಂ ಆಕ್ರೋಶ
ಎಸ್ಸೆಸ್ಸೆಲ್ಸಿ ಪಾಸ್‌ಗೆ 33% ಅಂಕ: ಮಿಶ್ರ ಪ್ರತಿಕ್ರಿಯೆ