ನವಲಗುಂದ:
ನಿರಂತರ ಮಳೆಯಿಂದ ಅಪಾರ ಪ್ರಮಾಣದ ಬೆಳೆಹಾನಿ, ಮನೆ ಹಾನಿ, ಸಾವೂ ಸಂಭವಿಸಿದರೂ ರಾಜ್ಯ ಸರ್ಕಾರ ಕಣ್ಣುಚ್ಚಿ ಕುಳಿತಿದೆ ಎಂದು ಕಿಡಿಕಾರಿರುವ ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಗ್ಯಾರಂಟಿ ಯೋಜನೆಗಳ ಮೂಲಕ ಜನರ ಬದುಕನ್ನು ನಶ್ವರಗೊಳಿಸಿದೆ. ಹಗರಣಗಳ ಸರಮಾಲೆಯಲ್ಲಿ ಸಿಲುಕಿರುವ ಕಾಂಗ್ರೆಸ್ಸಿಗೆ ಜನರ ಹಿತ ಬೇಡವಾಗಿದೆ ಎಂದು ಆರೋಪಿಸಿದ್ದಾರೆ.ತಾಲೂಕಿನ ತಿರ್ಲಾಪುರ, ಶಿರಕೋಳ, ಹನಸಿ ಸೇರಿದಂತೆ ಪ್ರವಾಹದಿಂದ ಹಾನಿಗೊಳಗಾದ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು. ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಬೆಣ್ಣೆಹಳ್ಳ, ತುಪ್ಪರಿಹಳ್ಳ, ರಾಡಿ ಹಳ್ಳ, ಹಂದಿಗನ ಹಳ್ಳ, ಮಲ್ಲ ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಸಾಕಷ್ಟು ಪ್ರಮಾಣದ ಬೆಳೆಹಾನಿಯಾಗಿದೆ ಎಂದರು.
₹ 300 ಕೋಟಿ ಹಣ:ತುಪ್ಪರಿ ಹಳ್ಳದ ಯೋಜನೆಗೆ ನಮ್ಮ ಸರ್ಕಾರ ₹ 300 ಕೋಟಿಗೂ ಅಧಿಕ ಹಣ ನೀಡಿದೆ. ಈಗಾಗಲೇ ₹ 150 ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿದೆ. ಈ ಕಾಮಗಾರಿ ಮಾಡದೆ ಹೋಗಿದ್ದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿ ಜತೆಗೆ ಗ್ರಾಮಗಳು ತೀವ್ರ ತೊಂದರೆ ಅನುಭವಿಸುತ್ತಿದ್ದವು ಎಂದು ಹೇಳಿದರು.
ಈಗಾಗಲೇ ಅತಿವೃಷ್ಟಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದರೂ ಸರ್ಕಾರ ಈ ವರೆಗೂ ಬಿಡಿಗಾಸು ಬಿಡುಗಡೆ ಮಾಡಿಲ್ಲ. ನಮ್ಮ ಅವಧಿಯಲ್ಲಿ ಸಾವು ಸಂಬಂಧಿಸಿದ ಒಂದೇ ದಿನದಲ್ಲಿ ₹ 5 ಲಕ್ಷ, ಸಂಪೂರ್ಣ ಮನೆ ಕಳೆದುಕೊಂಡವರಿಗೆ ₹ 5 ಲಕ್ಷ, ಭಾಗಶಃ ಮನೆ ಬಿದ್ದವರಿಗೆ ₹ 3 ಲಕ್ಷ, ಅಲ್ಪ ಪ್ರಮಾಣದಲ್ಲಿ ಹಾನಿಯಾದರೆ ₹ 50 ಸಾವಿರ ಪರಿಹಾರ ನೀಡಿದ್ದೇವೆ. ಆದರೆ, ಈ ಸರ್ಕಾರ ಮಾತ್ರ ಸಂಕಷ್ಟದಲ್ಲಿರುವ ಜನರ ನೆರವಿಗೆ ಬಾರದೆ ಕಣ್ಣುಚ್ಚಿ ಕುಳಿತಿದೆ ಎಂದು ದೂರಿದರು.ಪ್ರತಿಯೊಂದು ವಿಷಯಕ್ಕೂ ಕೇಂದ್ರ ಸರ್ಕಾರದತ್ತ ಬೋಟು ಮಾಡುವ ಸ್ಥಳೀಯ ಶಾಸಕರು, ಇದೀಗ ಅತಿವೃಷ್ಟಿಯಿಂದ ಹಾನಿಯಾಗಿರುವುದಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸಲಿ ಎಂದು ಮುನೇನಕೊಪ್ಪ ಸವಾಲು ಹಾಕಿದರು.
ಈ ವೇಳೆ ಗಂಗಪ್ಪ ಮನಮಿ, ಎ.ಬಿ. ಹಿರೇಮಠ, ಎಸ್.ಬಿ. ದಾನಪ್ಪಗೌಡರ, ರೋಹಿತ ಮಟ್ಟಿಹಳ್ಳಿ, ಸಿದ್ದಲಿಂಗಪ್ಪ ಮದ್ನೂರ, ಬಸವರಾಜ ಆಕಳದ, ಮಹೇಶ ಬಕ್ಕನ್ನವರ, ಬಸವರಾಜ ಬೆಣ್ಣಿ, ಗುರುಸಿದ್ದಪ್ಪ ಮೆಣಸಿನಕಾಯಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.