ಬೆಳಕಿನ ಹಬ್ಬ ಸಂಭ್ರಮದಿಂದ ಸ್ವಾಗತಿಸಿದ ಜನರು

KannadaprabhaNewsNetwork |  
Published : Oct 21, 2025, 01:00 AM IST
ದೀಪಾವಳಿ ಹಬ್ಬದ ಪೂಜೆಗೆ ಬಾಳೆ ದಿಂಡು ಖರೀದಿಸುತ್ತಿರುವ ಮಹಿಳೆಯರು. | Kannada Prabha

ಸಾರಾಂಶ

ಮಹಾಲಕ್ಷ್ಮೀ ಪೂಜೆಗೆ ಬೇಕಾದ ಕಬ್ಬು, ಬಾಳೆದಿಂಡು, ಚೆಂಡು ಹೂವುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಜತೆಗೆ ಗುಲಾಬಿ, ಮಲ್ಲಿಗೆ, ಸೇವಂತಿಗೆ, ವಿವಿಧ ಬಗೆಯ ಹಣ್ಣುಗಳು, ಪ್ಲಾಸ್ಟಿಕ್ ಹೂವುಗಳು, ಅಲಂಕಾರಿಕ ವಸ್ತುಗಳಿಂದ ಮಾರುಕಟ್ಟೆ ತುಂಬಿಹೋಗಿದೆ.

ಮಹೇಶ ಛಬ್ಬಿ

ಗದಗ: ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಬೆಳಕಿನ ಹಬ್ಬ ದೀಪಾವಳಿಯನ್ನು ಜಿಲ್ಲಾದ್ಯಂತ ಜನರು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ನಿರಂತರ ಮಳೆ, ಅತಿವೃಷ್ಟಿ, ಬೆಳೆ ಹಾನಿಯಿಂದ ಕಂಗಾಲಾದ ರೈತರಲ್ಲಿ ಅಷ್ಟಾಗಿ ಉತ್ಸಾಹ ಇಲ್ಲದಿದ್ದರೂ ಸಂಪ್ರದಾಯ ಬಿಡಲು ಮನಸ್ಸು ಒಪ್ಪುತ್ತಿಲ್ಲ. ಹೀಗಾಗಿ ನಗರದ ಪ್ರಮುಖ ಮಾರುಕಟ್ಟೆಗಳು, ಬಟ್ಟೆ, ಬಂಗಾರದ ಅಂಗಡಿಗಳಿಗೆ ಹಬ್ಬದ ಖರೀದಿಗೆ ಜನತೆ ಮುಗಿಬಿದ್ದಿದ್ದಾರೆ.

ನಗರದ ಬ್ಯಾಂಕ್ ರಸ್ತೆ, ಸ್ಟೇಷನ್ ರಸ್ತೆ, ಟಾಂಗಾಕೂಟ, ನಾಲ್ವಾಡದಲ್ಲಿ ಬಟ್ಟೆ ಅಂಗಡಿಗಳು, ಮಾಲ್‌ಗಳು, ಸರಾಫ್ ಬಜಾರ, ಬಸವೇಶ್ವರ ವೃತ್ತಗಳಲ್ಲಿ, ಹುಡ್ಕೋ ಅಂಬಾಭವಾನಿ ದೇವಸ್ಥಾನ ಹತ್ತಿರ ಹಾಗೂ ಬೆಟಗೇರಿ ಮಾರುಕಟ್ಟೆ ಭಾಗದಲ್ಲಿ ಹಬ್ಬದ ಖರೀದಿಗೆ ಜನರು ಆಗಮಿಸಿದ್ದಾರೆ. ಈ ಪ್ರದೇಶಗಳಲ್ಲಿ ಜನಜಂಗುಳಿ ಹೆಚ್ಚಾಗಿದೆ. ಹಬ್ಬದ ಅಗತ್ಯ ವಸ್ತುಗಳ ಖರೀದಿಯಲ್ಲಿ ಸಾರ್ವಜನಿಕರು ನಿರತರಾಗಿದ್ದಾರೆ.

ಮಹಾಲಕ್ಷ್ಮೀ ಪೂಜೆಗೆ ಬೇಕಾದ ಕಬ್ಬು, ಬಾಳೆದಿಂಡು, ಚೆಂಡು ಹೂವುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಜತೆಗೆ ಗುಲಾಬಿ, ಮಲ್ಲಿಗೆ, ಸೇವಂತಿಗೆ, ವಿವಿಧ ಬಗೆಯ ಹಣ್ಣುಗಳು, ಪ್ಲಾಸ್ಟಿಕ್ ಹೂವುಗಳು, ಅಲಂಕಾರಿಕ ವಸ್ತುಗಳಿಂದ ಮಾರುಕಟ್ಟೆ ತುಂಬಿಹೋಗಿದೆ.

ಹಬ್ಬದ ಆಫರ್‌: ದೀಪಾವಳಿ ಎಂದರೆ ದೀಪ ಬೆಳಗುವುದು, ಅಲಂಕಾರ, ಹೊಸ ಉಡುಪು ಧರಿಸುವುದು. ಹೀಗಾಗಿ ವ್ಯಾಪಾರಸ್ಥರು ಜನರನ್ನು ಆಕರ್ಷಿಸಲು ಹೊಸ ಆಲೋಚನೆಗಳನ್ನು ಮಾಡುತ್ತಾರೆ. ಬಟ್ಟೆ ಅಂಗಡಿಗಳಲ್ಲಿ ಆಫರ್‌, ಡಿಸ್ಕೌಂಟ್‌ ಘೋಷಿಸಿದ್ದಾರೆ. ಕೆಲವು ವ್ಯಾಪಾರಸ್ಥರು ಉಡುಗೊರೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ.

ದೀಪದ ಹಬ್ಬದ ಹಿನ್ನೆಲೆ ವಿವಿಧ ತರಹದ ಹಣತೆಗಳು ಮಾರುಕಟ್ಟೆಗೆ ಬಂದಿದ್ದು, ಇದರೊಟ್ಟಿಗೆ ವಿದ್ಯುತ್ ಚಾಲಿತ ಪ್ಲಾಸ್ಟಿಕ್ ಹಣತೆಗಳೂ ಲಗ್ಗೆ ಇಟ್ಟಿವೆ. ಆದರೆ ಜನರು ಮಾತ್ರ ಮಣ್ಣಿನ ಹಣತೆಗಳನ್ನೇ ಖರೀದಿಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಸಾದಾ ಹಣತೆಗೆ ₹10-20ರಿಂದ ಪ್ರಾರಂಭವಾದರೆ, ವಿವಿಧ ವಿನ್ಯಾಸ ಹೊಂದಿರುವ ಹಾಗೂ ಆಕರ್ಷಕ ಹಣತೆಗಳು ₹100ರಿಂದ ₹150ಕ್ಕೆ 4ರಂತೆ ಮಾರಾಟವಾಗುತ್ತಿವೆ.

ಬಲು ದುಬಾರಿ: ಹಬ್ಬದ ಖರೀದಿಗೆ ಬೇಕಾದ ಹಣ್ಣು, ಹೂವುಗಳ ಬೆಲೆ ಗಗನಕ್ಕೇರಿದ್ದು, ಪೂಜೆಗೆ ಮುಖ್ಯವಾಗಿ ಬೇಕಾಗುವ 5 ಬಗೆಯ ಹಣ್ಣುಗಳು ₹100ರಿಂದ 150- 200ರ ವರೆಗೆ ಮಾರಾಟವಾಗುತ್ತಿವೆ. ಬಾಳೆಹಣ್ಣು ಡಜನ್‌ಗೆ ₹40-50, ಸೇಬು ಕೆಜಿಗೆ ₹120-150, ಮೂಸಂಬಿ ₹100-120, ಪೇರಲ ಹಣ್ಣು ₹50- 60 ಕೆಜಿ, ದಾಳಿಂಬೆ ಕೆಜಿಗೆ ₹160 ಇದೆ.

ಚೆಂಡು ಹೂವು ಕೆಜಿಗೆ ₹100- 150, ಮಾರಿಗೆ ₹50ಕ್ಕೆ ಮಾರಾಟವಾಗುತ್ತಿದೆ. ಜೋಡಿ ಕಬ್ಬಿಗೆ ₹50- 60, ಬಾಳೆ ದಿಂಡು ₹50- 60 ಜೋಡಿಗೆ, ಸೂಜಿ ಮಲ್ಲಿಗೆ ಮಾರಿಗೆ ₹150, ಕಾಕಡ ಮಾರಿಗೆ ₹100 ಬೆಲೆ ಇದ್ದು, ಗ್ರಾಹಕರು ದೀಪಾವಳಿ ಬಲು ದುಬಾರಿ ಎನ್ನುತ್ತಲೆ ಖರೀದಿಸುತ್ತಿದ್ದಾರೆ.

ವಿವಿಧ ವಿನ್ಯಾಸದ ಆಕಾಶಬುಟ್ಟಿ: ನಗರದ ಬ್ಯಾಂಕ್‌ ರಸ್ತೆ, ಟಾಂಗಾಕೂಟ, ಸ್ಟೇಷನ್ ರಸ್ತೆಗಳಲ್ಲಿ ಮಾರಾಟಕ್ಕಿಟ್ಟಿರುವ ಬಣ್ಣ ಬಣ್ಣದ ಆಕಾಶ ಬುಟ್ಟಿಗಳು ಎಲ್ಲರನ್ನು ಆಕರ್ಷಿಸುತ್ತಿವೆ. ಸಾಧಾರಣ ಆಕಾಶ ಬುಟ್ಟಿಗಳು ₹50ರಿಂದ 300ರ ವರೆಗೆ ಮಾರಾಟವಾದರೆ, ವಿವಿಧ ವಿನ್ಯಾಸ ಹೊಂದಿದ ದೊಡ್ಡ ಆಕಾಶಬುಟ್ಟಿಗಳು ₹500ರಿಂದ ₹1000ರ ವರೆಗೆ ಮಾರಾಟವಾಗುತ್ತಿವೆ. ತಮ್ಮ ಅಂಗಡಿ, ಮನೆ ಎದುರು ಆಕಾಶಬುಟ್ಟಿ ಅಳವಡಿಸಿ, ಬಣ್ಣ-ಬಣ್ಣದ ದೀಪಾಲಂಕಾರಗಳಿಂದ, ಚೆಂದದ ರಂಗೋಲಿ, ತಳಿರು- ತೋರಣ ಕಟ್ಟಿ ಅಲಂಕರಿಸಿ, ಶ್ರದ್ಧಾ-ಭಕ್ತಿಯಿಂದ ಮಹಾಲಕ್ಷ್ಮೀ, ಸರಸ್ವತಿಯನ್ನು ಪೂಜಿಸಲು ಸಿದ್ಧತೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌