ಕೆಲಸ ಅರಸಿ ನಮ್ಮ ಊರ್ ಬಿಟ್ಟ ಹೊಂಟೇವ್ ನಾವು

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ಪ್ರಸ್ತುವ ವರ್ಷದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟು ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದೆ ಇದೀಗ ಕೆಲಸವನ್ನರಸಿ ಊರೂರು ತಿರುಗುವಂತಾಗಿದೆ. ಅಫಜಲ್ಪುರ ತಾಲೂಕಿನ ಕೃಷಿ ಕಾರ್ಮಿಕರು ಕೆಲಸವಿಲ್ಲದೇ ಇಟ್ಟಂಗಿ ಭಟ್ಟಿಗಳತ್ತ ಮುಖ ಮಾಡಿ ಗುಳೆ ಹೋಗುತ್ತಿದ್ದಾರೆ. ಇನ್ನಾದರೂ ತಡಮಾಡದೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿಯು ಎಚ್ಚೆತ್ತು ಉದ್ಯೋಗ ಖಾತ್ರಿ ಯೋಜನೆಯಡಿ ದುಡಿವ ಕೈಗಳಿಗೆ ಸಮರ್ಪಕ ಕೆಲಸ ಒದಗಿಸುವ ಕೆಲಸ ಮಾಡಬೇಕಿದೆ.

ರಾಹುಲ ದೊಡ್ಮನಿ ಬಡದಾಳ

ಕನ್ನಡಪ್ರಭ ವಾರ್ತೆ ಚವಡಾಪುರ

ಊರ್ ಮ್ಯಾಲ್‌ ಇದ್ದು, ಹೊಲ ಮನಿ ಕೂಲಿ ಕೆಲಸ ಮಾಡ್ಕೊಂಡಿರಬೇಕಂದ್ರ ಮಳಿ ಬರಲಾರದಕ್ಕ ಹೊಲ್ದಾಗ ಬೆಳಿ ಇಲ್ಲ, ರೈತರ ಮಾರಿ ಮ್ಯಾಲ ಕಳಿ ಇಲ್ಲ. ಇನ್ನ ನಮಗೆಲ್ಲಿ ಕೆಲಸ ಸಿಗಬೇಕ್ರಿ? ಬಾಹತ್ತರ ಬರಗಾಲದಂಗ ಆಗ್ಯಾದ್, ಕುಡಿಲಿಕ್ ಬಗಸಿ ನೀರ್ ಸಿಗವಲ್ದು, ದನಕರಗೋಳಿಗೆ ಮೇವಿಲ್ಲ, ಹಿಂಗಾಗಿ ಹೆಂಡರ ಮಕ್ಕಳ ಕಟಗೊಂಡು ಕೆಲಸ ಬಗಸಿ ಬಯಸಿ ಊರ್ ಬಿಟ್ಟ ಹೊಂಟೇವ್ ನಾವು.

ಇವು ಬರಗಾಲದ ಹೊಡೆತಕ್ಕೆ ನಲುಗಿದ ಅಫಜಲ್ಪುರ ತಾಲೂಕಿನ ರೈತರು, ಕೂಲಿ ಕಾರ್ಮಿಕರು ಊರು ತೊರೆದು ಗುಳೆ ಹೊರಟಾಗ ಆಡಿದ ಮಾತುಗಳು.

ಅಫಜಲ್ಪುರ ತಾಲೂಕಿನ ಬಡದಾಳ, ಬಳೂರ್ಗಿ, ಚಿಂಚೋಳಿ, ರೇವೂರ (ಬಿ), ಗೌಡಗಾಂವ, ಅಂಕಲಗಿ, ಅರ್ಜುಣಗಿ, ಮಲ್ಲಾಬಾದ, ಆನೂರ ಸೇರಿ ಬಹುತೇಕ ಗ್ರಾಮಗಳ ರೈತರು, ಕೂಲಿ ಕಾರ್ಮಿಕರ ಕುಟುಂಬಗಳು ಬರಗಾಲ ಆವರಿಸಿದ್ದರ ಪರಿಣಾಮದಿಂದ ನೀರು, ಕೆಲಸ ಇರುವ ಜಾಗ ಅರಸಿ ಊರು ತೊರೆಯುತ್ತಿದ್ದಾರೆ. ಬಡದಾಳ ಗ್ರಾಮವೊಂದರಲ್ಲೇ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ಊರು ತೊರೆದು ಮಹಾರಾಷ್ಟ್ರದ ಪುಣೆ, ಸಾಂಗ್ಲಿ, ಸಾತಾರ, ಸೊಲ್ಲಾಪುರ, ಮೊಹಳ, ಬಾರಾಮತಿ, ಖೋಪೋಲಿ, ರಾಜ್ಯದ ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ ಸೇರಿ ಅನೇಕ ಕಡೆಗಳಲ್ಲಿರುವ ಇಟ್ಟಂಗಿ ಭಟ್ಟಿಗಳಿಗೆ ದುಡಿಯಲು ತೆರಳಿದ್ದಾರೆ.

ಮಕ್ಕಳಿಗೂ ಶಾಲೆ ಬಿಡಿಸಿದ ಪಾಲಕರು:

ನಿತ್ಯ ಶಾಲೆಗಳಿಗೆ ಹೋಗಿ ಆಟ, ಪಾಠದಲ್ಲಿ ತಲ್ಲಿನರಾಗಿರುತ್ತಿದ್ದ ಮಕ್ಕಳಿಗೂ ಕೂಡ ಶಾಲೆ ಬಿಡಿಸಿ ಇಟ್ಟಂಗಿ ಭಟ್ಟಿಗಳಿಗೆ ಕರೆದುಕೊಂಡು ಹೋಗಲಾಗುತ್ತಿದೆ. ಬರಗಾಲದ ಕೆಟ್ಟ ಹೊಡೆತದಿಂದ ಮಕ್ಕಳ ಶೈಕ್ಷಣಿಕ ಭವಿಷ್ಯ ಉಜ್ವಲವಾಗಿ ಬೆಳಗುವ ಸಮಯದಲ್ಲಿ ಕಮರುವ ಹಾದಿ ಹಿಡಿದಿದೆ.

ಖಾತ್ರಿ ಕೆಲಸ ಪರಿಣಾಮಕಾರಿ ಅನುಷ್ಠಾನದಿಂದ ತಪ್ಪಿಸಬಹುದಿತ್ತು ಗುಳೆ:

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಕೆಲಸ ಮಾಡಿದ 15 ದಿನಗಳೊಳಗೆ ಕೂಲಿ ಹಣ ಪಾವತಿಸಬೇಕೆಂಬ ನಿಯಮವಿದೆ. ಆದರೆ ಕೆಲಸ ಮಾಡಿ 2 ತಿಂಗಳು ಗತಿಸಿದರೂ ಕೂಲಿ ಪಾವತಿಯಾಗುತ್ತಿಲ್ಲ. ಇದರಿಂದಾಗಿ ರೋಷಿ ಹೋದ ಕಾರ್ಮಿಕರು ಖಾತ್ರಿ ಕೆಲಸದಿಂದ ವಿಮುಖರಾಗಿ ಇಟ್ಟಂಗಿ ಭಟ್ಟಿಗಳತ್ತ ವಾಲುವಂತಾಗಿದೆ. ಬರಗಾಲದ ಹೊಡೆತಕ್ಕೆ ನಲುಗಿದ ಜನ ಊರು ಬಿಟ್ಟು ಕೆಲಸ ಅರಸಿ ಇಟ್ಟಂಗಿ ಭಟ್ಟಿಗಳತ್ತ ಒಲವು ತೋರುತ್ತಿರುವುದು ಒಂದು ಕಡೆಯಾದರೆ, ಮಾಡಿದ ಕೆಲಸಕ್ಕೆ ಸಕಾಲಕ್ಕೆ ವೇತನ ಪಾವತಿಯಾಗದ್ದರಿಂದ ಖಾತ್ರಿ ಕೆಲಸದ ಸಹವಾಸವೇ ಬೇಡವೆಂದು ಗುಳೆ ಹೋಗುವವರ ಸಂಖ್ಯೆಯೂ ತಾಲೂಕಿನಲ್ಲಿ ಹೆಚ್ಚಾಗಿದೆ.

ಕೂಡಲೇ ಸಂಬಂಧ ಪಟ್ಟವರು ಸಮರ್ಪಕವಾಗಿ ಖಾತ್ರಿ ಯೋಜನೆಯಲ್ಲಿ ಎಲ್ಲರಿಗೂ ಕೆಲಸ ನೀಡುವುದರ ಜೊತೆಗೆ ಸಕಾಲಕ್ಕೆ ವೇತನ ಪಾವತಿ ಮಾಡಿ ಗುಳೆ ಹೋಗುವುದನ್ನು ತಪ್ಪಿಸಬೇಕಾಗಿದೆ. ಅಲ್ಲದೆ ಗುಳೆಯಿಂದಾಗಿ ಮಕ್ಕಳ ಶೈಕ್ಷಣಿಕ ಭವಿಷ್ಯ ಅಧಃ ಪತನದತ್ತ ಸಾಗಿದ್ದು, ಅದನ್ನು ಕೂಡ ತಪ್ಪಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.ಖಾತ್ರಿ ಯೋಜನೆ ಅಡಿಯಲ್ಲಿ ಎಲ್ಲರಿಗೂ ಕೆಲಸ ನೀಡಲಾಗುತ್ತಿದೆ. ಗುಳೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

- ಬಾಬುರಾವ್ ಜ್ಯೋತಿ ಪ್ರಭಾರಿ ಇಒ ತಾಪಂ ಅಫಜಲ್ಪುರಅಫಜಲ್ಪುರ ತಾಲೂಕಿಗೆ ಈ ವರ್ಷ 6.40 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದ್ದು, ಈ ಪೈಕಿ ಈಗಾಗಲೇ 4.50 ಲಕ್ಷ ಮಾನವ ದಿನಗಳ ಗುರಿ ತಲುಪಲಾಗಿದೆ. ಇನ್ನುಳಿದ ಮಾನವ ದಿನಗಳಿಗಾಗಿ ಒಂದು ತಿಂಗಳು ಕೆಲಸ ನೀಡಿದರೂ ಸಾಕಾಗುತ್ತದೆ. ಹೀಗಾಗಿ ಸರ್ಕಾರ 100 ದಿನಗಳಿದ್ದ ಮಾನವ ದಿನಗಳ ಗುರಿಯನ್ನು 150 ದಿನಗಳಿಗೆ ಹೆಚ್ಚಿಸಬೇಕೆಂಬ ಬೇಡಿಕೆ ಇದ್ದು, 150 ದಿನಗಳ ವರೆಗೆ ಹೆಚ್ಚಳ ಮಾಡಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಖಾತ್ರಿ ಯೋಜನೆ ಅನುಷ್ಠಾನಗೊಳಿಸಿ ಜನರಿಗೆ ಕೂಲಿ ಕೆಲಸ ನೀಡಿ ಗುಳೆ ತಪ್ಪಿಸಲು ಅನುಕೂಲವಾಗಲಿದೆ.

- ರಮೇಶ ಪಾಟೀಲ್, ತಾಪಂ ಎಡಿತಾಲೂಕಿನಾದ್ಯಂತ ಎಷ್ಟು ಮಕ್ಕಳು ಶಾಲೆ ತೊರೆದು ತಮ್ಮ ಪಾಲಕರೊಂದಿಗೆ ಹೋಗಿದ್ದಾರೆನ್ನುವ ಮಾಹಿತಿ ಪಡೆದು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ. ಬಳಿಕ ಇಲಾಖೆ ನಿರ್ದೇಶನದಂತೆ ಶಾಲೆ ತೊರೆದ ಮಕ್ಕಳಿಗಾಗಿ ಏನೆಲ್ಲಾ ವ್ಯವಸ್ಥೆ ಕೈಗೊಳ್ಳಬಹುದೆಂದು ಸೂಚನೆ ಬರುತ್ತದೋ ಅದರಂತೆ ಕ್ರಮ ಕೈಗೊಳ್ಳಲಾಗುತ್ತದೆ.

- ಹಾಜಿಮಲಂಗ ಇಂಡಿಕರ್‌ ಬಿಇಒ ಅಫಜಲ್ಪುರ

Share this article