ಕೂಡ್ಲಿಗಿ: ಸರ್ಕಾರದ ವೈಫಲ್ಯವನ್ನು ಮುಚ್ಚಿಕೊಳ್ಳಲು ಆರೆಸ್ಸೆಸ್ಸಿನೊಂದಿಗೆ ಸಂಘರ್ಷ ಮಾಡುತ್ತಿರುವ ಪ್ರಿಯಾಂಕ ಖರ್ಗೆಗೆ ಮುಂದಿನ ಚುನಾವಣೆಯಲ್ಲಿ ಕಲುಬುರಗಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೂಡ್ಲಿಗಿ ಪಟ್ಟಣದಲ್ಲಿ ನಡೆದ ಗಣವೇಷಧಾರಿಗಳ ಪಥಸಂಚಲನದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಸಂಘಕ್ಕೆ ತನ್ನದೇ ಆದ ಇತಿಹಾಸವಿದೆ. ಆದರೆ ಕೆಲವರು ವಿನಾಕಾರಣ ಆರೆಸ್ಸೆಸ್ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ . ಸಂಘ ಯಾವತ್ತೂ ದೇಶಕ್ಕಾಗಿ ತ್ಯಾಗ ಬಲಿದಾನ ಸೇರಿದಂತೆ ಯಾವುದಕ್ಕಾದ್ರೂ ಸಿದ್ಧವಿದೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮ ಮಾಡಬಾರದು ಎಂದು ನಿಷೇಧ ಹೇರೋದು ಸರಿಯಲ್ಲ. ಇದಕ್ಕೆ ಅವರ ಕ್ಷೇತ್ರದ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪರೋಕ್ಷವಾಗಿ ಪ್ರಿಯಾಂಕ್ ಖರ್ಗೆಗೆ ಟಾಂಗ್ ನೀಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನಿಯಂತ್ರಣ ಹೇರಿದಷ್ಟು ಮತ್ತಷ್ಟು ಬೆಳೆಯುತ್ತದೆ. ಆರೆಸ್ಸೆಸ್ ನಿಂದ ರಾಷ್ಟ್ರ ಕಟ್ಟುವ ಕಾರ್ಯ ನಿರಂತರವಾಗಿ ಸಾಗುತ್ತಿದೆ ಎಂದರು.ಪ್ರಿಯಾಂಕ ಖರ್ಗೆ ಕೀಳುಮಟ್ಟದ ರಾಜಕಾರಣಕ್ಕಿಳಿದಿದ್ದು, ಚಿತ್ತಾಪುರ ಕ್ಷೇತ್ರದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿಗೆ ಒತ್ತಡ ಹೇರಿದ್ದಾರೆ. ಆದರೆ ಆರೆಸ್ಸೆಸ್ ಇದನ್ನೇ ಸವಾಲಾಗಿ ಸ್ವೀಕರಿಸಿದ್ದು ಅಲ್ಲಿಯೇ ಬೃಹತ್ ಪಥ ಸಂಚಲನ ನಡೆಸಲಿದೆ. ಹಿಂದೂ ವಿರೋಧಿ ರಾಷ್ಟ್ರಪ್ರೇಮದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಆರೆಸ್ಸೆಸ್ ನಿಷೇಧ ಮಾಡುವಂತೆ ಹೇಳಿಕೆ ನೀಡುತ್ತಿರುವುದರಿಂದ ಚುನಾವಣೆಯಲ್ಲಿ ಪ್ರಿಯಾಂಕ ಖರ್ಗೆಗೆ ಹಾಗೂ ಕಾಂಗ್ರೆಸ್ಸಿಗೆ ಜನತೆಯೇ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಪಟ್ಟಣದ ಸಂತೇಮೈದಾನದಿಂದ ಹೊರಟ ಪಥ ಸಂಚಲನದಲ್ಲಿ 300ಕ್ಕೂ ಹೆಚ್ಚು ಗಣವೇಷಧಾರಿಗಳು, ಪಾದಗಟ್ಟೆ ವೃತ್ತ, ಮದಕರಿ ನಾಯಕ ವೃತ್ತದ ಮೂಲಕ ಹಳೆ ಸಂತೆ ಮೈದಾನ ರಸ್ತೆ, ರಾಮನಗರ, ಲಕ್ಷ್ಮಿ ಬಜಾರ್, ಹಿರೇಮಠ ಕಾಲೋನಿ ಮೂಲಕ ಹಿರೇಮಠ ಕಾಲೇಜಿನಲ್ಲಿ ಸಂಪನ್ನಗೊಂಡಿತು.ಪಥ ಸಂಚಲನ ಮಾರ್ಗದಲ್ಲಿ ಮಹಿಳೆಯರು ರಂಗೋಲಿ ಹಾಕಿ ಸ್ವಾಗತ ಕೋರಿದರು. ಗಣವೇಷಧಾರರಿಗೆ ಜನತೆ ಹೂವು ಹಾಕಿ ಸ್ವಾಗತ ಕೋರಿದರು. ಭಾರತ ಮಾತೆ, ಜೈ ಶ್ರೀರಾಮ್ ಘೋಷಣೆ ಮೊಳಗಿತು. ಎಸ್ಪಿ ಜಾಹ್ನವಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಬಿಜೆಪಿ ರಾಜ್ಯ ಎಸ್.ಟಿ.ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು, ಜಿ.ಪಂ.ಮಾಜಿ ಸದಸ್ಯ ಹುರುಳಿಹಾಳ್ ರೇವಣ್ಣ, ರಾಮು ಕಾಟ್ವಾ, ಗ್ಯಾಸ್ ತಿಪ್ಪೇಸ್ವಾಮಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.