ಕನ್ನಡಪ್ರಭ ವಾರ್ತೆ ಮಂಡ್ಯ
ಮನುಷ್ಯನಿಗೆ ಯಾವುದಾದರೂ ಒಂದು ನ್ಯೂನತೆಗಳು ಸಹಜ. ಮಾನಸಿಕವಾಗಿ ಕುಗ್ಗದೇ ವಿಕಲಚೇತನರು ಸಾಧನೆಯ ಹಾದಿಯಿಂದ ಹಿಂದೆ ಸರಿಯದೇ ಮುನ್ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಅಲಿಂಕೋ ಸಂಸ್ಥೆ, ಗ್ರಾಮೀಣ ಪುನರ್ವಸತಿ ಯೋಜನೆ ಮತ್ತು ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಮಾತನಾಡಿದರು.
ವಿಶೇಷ ವಿಕಲಚೇತನರನ್ನು ಯಾರು ಕೂಡ ಅಂಗವಿಕಲರು ಎಂದು ಕರೆಯಬಾರದು. ಪ್ರತಿಯೊಬ್ಬರಿಗೂ ಕೂಡ ದೈಹಿಕ ಮತ್ತು ಮಾನಸಿಕವಾಗಿ ನ್ಯೂನತೆ ಎಂಬುದು ಇದ್ದೇ ಇರುತ್ತದೆ. ಅದರಲ್ಲಿ ದೈಹಿಕವಾಗಿ ನ್ಯೂನತೆ ಇರುವವರೇ ವಿಶೇಷ ವಿಕಲಚೇತನರು. ಆದ್ದರಿಂದ ಅವರನ್ನು ಅಂಗವಿಕಲರು ಎನ್ನದೇ ವಿಶೇಷಚೇತನರು ಎಂದು ಗೌರವ ನೀಡಿ ಎಂದರು.ದೈಹಿಕವಾಗಿ ಚೆನ್ನಾಗಿ ಇದ್ದು ಮಾನಸಿಕವಾಗಿ ಕುಗ್ಗಿರುವವರು ಕೂಡ ಒಂದು ರೀತಿಯಲ್ಲಿ ವಿಕಲಚೇತನರೇ. ಹಾಗಾಗಿ ಯಾವುದೇ ಕಾರಣಕ್ಕೂ ವಿಶೇಷ ವಿಕಲಚೇತನರು ಸಾಧನೆಯ ಹಾದಿಯಿಂದ ಇಂದೇ ಸರಿಯಬಾರದು ಎಂದರು.
ನೀವು ಕೂಡ ಪ್ರತಿಯೊಬ್ಬರಂತೆ ಜೀವಿಸುವ ಹಕ್ಕಿದೆ. ವಿಕಲಚೇತನರು ಕೂಡ ಬಲಶಾಲಿಗಳೇ. ನಾವು ಏನು ಬೇಕಾದರೂ ಸಾಧನೆ ಮಾಡುತ್ತೇವೆ ಎಂಬ ಆತ್ಮಸ್ಥೈರ್ಯವನ್ನು ಮನದಟ್ಟು ಮಾಡಿಕೊಂಡು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ನಿಮಗಾಗಿ ಸರ್ಕಾರದಿಂದ ಬಂದಂತಹ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಯಾವುದೋ ಒಂದು ನ್ಯೂನತೆ ನಮ್ಮನ್ನು ಆವರಿಸಿಕೊಂಡಿದೆ ಎಂದು ಅದೇ ಬೇಸರದಲ್ಲಿ ಜೀವನ ಕಳೆಯುವುದಕ್ಕಿಂತ ಅದೇ ನ್ಯೂನತೆಯನ್ನು ಮೆಟ್ಟಿ ನಿಂತು ನಿಮ್ಮಲ್ಲಿರುವ ಚೈತನ್ಯವನ್ನು ಬಳಸಿಕೊಂಡು ಮುಂದೆ ಬಂದು ಸಾಧನೆ ಮಾಡಬೇಕು ಎಂದರು.
ವಿಶೇಷ ವಿಕಲಚೇತನರಿಗೆ ಭವಿಷ್ಯ ಹಾಗೂ ಜೀವನ ಕಟ್ಟಿಕೊಳ್ಳುವದಕ್ಕೆ ವಿವಿಧ ಸಂಘ ಸಂಸ್ಥೆಗಳು ಸಾಕಷ್ಟು ಸಹಾಯಗಳನ್ನು ಮಾಡುತ್ತಿವೆ. ಅಂತಹ ಸಂಘ ಸಂಸ್ಥೆಗಳ ಶ್ರಮ ನಿಜಕ್ಕೂ ಶ್ಲಾಘನೀಯವಾದದ್ದು. ವಿಶೇಷ ವಿಕಲಚೇತನರಿಗೆ ಅನುಕಂಪಕ್ಕೆ ಮಾತ್ರ ಸೀಮಿತ ಮಾಡದೇ ಬದಲಾಗಿ ಅವಕಾಶಗಳನ್ನು ನೀಡಬೇಕು ಎಂದರು.ವಿಕಲಚೇತರನ್ನು ಬೇರೆಯವರಂತೆ ಕಾಣದೇ ಅವರು ಕೂಡ ನಮ್ಮಂತಯೇ ಎನ್ನುವಂತೆ ಭಾವಿಸಿ ಅವರಿಗೆ ಅವರಲ್ಲಿರುವ ವಿಶೇಷ ಶಕ್ತಿಯ ಬಗ್ಗೆ ಅರಿವು ಮೂಡಿಸಿ ಅವರಿಗೆ ವಿವಿಧ ಸಹಕಾರ ಮತ್ತು ಸೌಲಭ್ಯಗಳನ್ನು ನೀಡಬೇಕು ಎಂದರು.
ಬೆಂಗಳೂರು ಅಲಿಂಕೋ ಸಂಸ್ಥೆಯ ವತಿಯಿಂದ ಮಂಡ್ಯ ಜಿಲ್ಲೆಯ ವಿಶೇಷ ವಿಕಲಚೇತನರಿಗಾಗಿ ಒಟ್ಟು 90 ಲಕ್ಷ ರು. ವೆಚ್ಚದಲ್ಲಿ ಅವಶ್ಯವಿರುವ ವಿವಿಧ ಸಾಧನಗಳನ್ನು ಮಂಡ್ಯ ಮತ್ತು ಮದ್ದೂರು ಎರಡು ತಾಲೂಕುಗಳ ವಿಶೇಷ ವಿಕಲಚೇತನರಿಗೆ 33 ಲಕ್ಷ ರು. ಗಳ ವೆಚ್ಚದಲ್ಲಿ 556 ಜನರಿಗೆ ವೀಲ್ ಚೇರ್, ನಡಿಗೆ ಕೋಲು, ಶ್ರವಣ ಸಾಧನ ಸೇರಿದಂತೆ ವಿಕಲಚೇತನರಿಗೆ ಅವಶ್ಯವಿರುವ ವಿವಿಧ ಸಾಧನಗಳನ್ನು ವಿತರಣೆ ಮಾಡಲಾಯಿತು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಯೊಬ್ಬರೂ ಭಾಗಿಯಾಗಬೇಕು. ಈ ಸಮ್ಮೇಳನವು ಜಿಲ್ಲೆಯ ಸಮ್ಮೇಳನವಲ್ಲ ಪ್ರತಿಯೊಬ್ಬ ಕನ್ನಡಿಗರ ಮನ ಮನೆಯ ಹಬ್ಬದಂತೆ ಆಚರಣೆ ಮಾಡಬೇಕು ಎಂದರು.
ವಿಶ್ವ ವಿಕಲಚೇತನರ ದಿನಾಚರಣೆಯ ದಿನದಂದು ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅವರಿಗಾಗಿ ವಿವಿಧ ಸಾಧನ ಸಲಕರಣೆಗಳನ್ನು ವಿತರಣೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಯಾರೊಬ್ಬ ವಿಕಲಚೇತನರು ಸಾಧನೆಯಿಂದ ಸರಿಯದೆ ನಾವು ಏನನ್ನಾದರೂ ಸಾಧಿಸುತ್ತೇವೆ ಎಂಬ ಛಲದಿಂದ ಮುಂದೆ ಬರಬೇಕು ಎಂದರು.ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ವಿಶೇಷ ಸಾಧನೆ ಮಾಡಿರುವ ವಿಕಲಚೇತನರಿಗೆ ಸನ್ಮಾನ ಮಾಡಿ ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ನಡೆದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್.ರಾಜಮೂರ್ತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್, ಬೆಂಗಳೂರು ಅಲಿಂಕೋ ಸಂಸ್ಥೆ ಅಧ್ಯಕ್ಷ ಲಿತಿನ್ ಸರ್ಕಾರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಉಪಸ್ಥಿತರಿದ್ದರು.