ಕಬ್ಬಿಣದ ಅದಿರು ಬೆನಿಫಿಶಿಯೇಷನ್‌ ಪ್ಲಾಂಟ್ ಸ್ಥಾಪನೆಗೆ ಜನರ ಒಪ್ಪಿಗೆ

KannadaprabhaNewsNetwork | Published : Mar 13, 2025 12:51 AM

ಸಾರಾಂಶ

ಹಾರುವನಹಳ್ಳಿಗ್ರಾಮದ ಬಳಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯಿಂದ ಪರಿಸರ ಸಾರ್ವಜನಿಕ ಆಲಿಕೆ ಸಭೆಯು ನಡೆಯಿತು.

ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ಮೇ. ಕುಮಿನೆಕ್ಸ್ ಸ್ಟೀಲ್ಸ್ ಪ್ರೈ.ಲಿ.ಸಂಸ್ಥೆಯು ಬಸವನದುರ್ಗ ಮತ್ತು ಹಾರುವನಹಳ್ಳಿ ಬಳಿ186.45 ಎಕರೆ ಪ್ರದೇಶದಲ್ಲಿ ಕಬ್ಬಿಣದ ಅದಿರು ಬೆನಿಫಿಶಿಯೇಷನ್‌ ಪ್ಲಾಂಟ್ (1x3.0 ಎಂಟಿಪಿಎ) ಮತ್ತು ಪೆಲೆಟ್‌ ಪ್ಲಾಂಟ್ (1x1.5 ಎಂಟಿಪಿಎ) ಒಳಗೊಂಡಿರುವ ಗ್ರೀನ್‌ ಫೀಲ್ಡ್ ಯೋಜನೆ ಸ್ಥಾಪನೆ ಮಾಡುತ್ತಿದೆ. ಈ ಹಿನ್ನೆಲೆ ಇಲ್ಲಿಗೆ ಸಮೀಪದ ಹಾರುವನಹಳ್ಳಿಗ್ರಾಮದ ಬಳಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯಿಂದ ಪರಿಸರ ಸಾರ್ವಜನಿಕ ಆಲಿಕೆ ಸಭೆಯು ನಡೆಯಿತು.

ಸಭೆಯಲ್ಲಿ ಬಹುತೇಕ ಜನರು ಮಾತನಾಡಿ, ಭೂಮಿ ಕೊಟ್ಟ ರೈತರ ಕುಟುಂಬಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ನೀಡಬೇಕು. ಸ್ಥಳೀಯರಿಗೆ ಉದ್ಯೋಗವಕಾಶವನ್ನು ಹೆಚ್ಚಾಗಿ ಕಲ್ಪಿಸಿಕೊಡಬೇಕು. ರೈತರ ಬೆಳೆಗಳಲ್ಲಿ ಧೂಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಈಗಿರುವ ಯಾವುದೇ ಕೆರೆಗಳಿಗೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಬೇಕು. ಕಾರ್ಖಾನೆಗಳು ಬಂದರೆ ಉದ್ಯೋಗಾವಕಾಶಗಳು ಹೆಚ್ಚುವುದರಿಂದ ಕಾರ್ಖಾನೆಗಳಿಗೆ ಪರವಾನಗಿ ನೀಡಬೇಕು ಎಂದು ಒಪ್ಪಿಗೆ ಸೂಚಿಸಿದರು.

ಬಹುತೇಕ ಸಂಘ-​ಸಂಸ್ಥೆಗಳ ಪದಾಧಿಕಾರಿಗಳು ಯೋಜನೆಗೆ ಒಮ್ಮತದ ಬೆಂಬಲ ವ್ಯಕ್ತಪಡಿಸಿದರು.

ಹಾರುವನಹಳ್ಳಿ, ಚಿಲಕನಹಟ್ಟಿ, ಪೋತಲಕಟ್ಟಿ, ತಿಮ್ಮಲಾಪುರ, ಡಣಾಯಕನಕೆರೆ, ಗೊಲ್ಲರಹಳ್ಳಿ, ಬ್ಯಾಲಕುಂದಿ, ಜಿ. ನಾಗಲಾಪುರ, ನಾಗಲಾಪುರ ತಾಂಡ, ಗರಗ ಸೇರಿದಂತೆ ಇತರೆ ಗ್ರಾಮಸ್ಥರು ಹಾಗೂ ಬಹುತೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಚಿಲಕನಹಟ್ಟಿ ಗ್ರಾಪಂ ಸದಸ್ಯರು, ರೈತ ಸಂಘದ ಮುಖಂಡರು, ಮಹಿಳಾ ಜನಪ್ರತಿನಿಧಿಗಳು, ಸ್ವಸಹಾಯ ಸಂಘದ ಮಹಿಳೆಯರು ಯೋಜನೆಗೆ ಸಹಮತ ವ್ಯಕ್ತಪಡಿಸಿದರು.

ವಿಜಯನಗರ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ ಮಾತನಾಡಿ, ಸಾರ್ವಜನಿಕ ಆಲಿಕೆ ಸಭೆಯಲ್ಲಿ ನೂರಾರು ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದು, ಇವುಗಳಲ್ಲಿ ಪರ ಮತ್ತು ವಿರೋಧ ಹೇಳಿಕೆ ಪರಿಶೀಲಿಸಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಿಕೊಡಲಾಗುವುದು. ಕೆಲವರು ಉದ್ಯೋಗಕ್ಕಾಗಿ ಆಧಾರ್ ಕಾರ್ಡ್‌ ಮತ್ತು ಚುನಾವಣಾ ಗುರುತಿನ ಚೀಟಿಗಳನ್ನು ಸಹ ಅರ್ಜಿ ಜೊತೆಯಲ್ಲಿ ಸಲ್ಲಿಸಿದ್ದಾರೆ. ಜನರು ಸ್ವೀಕರಿಸಿದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಪರಿಷ್ಕರಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭ ಹಿರಿಯ ಪರಿಸರ ಅಧಿಕಾರಿ ಬಿ.ಎಸ್. ಮುರಳೀಧರ, ಪರಿಸರ ಅಧಿಕಾರಿ ಮೀನಾಕ್ಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.

Share this article