ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಹನೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಜನ ನನ್ನನ್ನು ಬೆಂಬಲಿಸಿದ್ದಾರೆ, ಹಾಗಾಗಿ ಅವರ ನಿರೀಕ್ಷೆ ಖಂಡಿತ ಹುಸಿಗೊಳಿಸಲ್ಲ, ಅಭಿವೃದ್ಧಿ ಮಾಡಿಯೇ ತೀರುತ್ತೇನೆ. ಈ ನಿಟ್ಟಿನಲ್ಲಿ ಸಾಗಿದ್ದೇನೆ ಎಂದು ಹನೂರು ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.ಕ್ಷೇತ್ರ ವ್ಯಾಪ್ತಿಯ ಶಿವನಸಮುದ್ರದ ಸಮೂಹ ದೇವಾಲಯದಲ್ಲಿ ದಾನಿಗಳ ಸಹಕಾರದೊಂದಿಗೆ ರಂಗನಾಯಕಿ ಅಮ್ಮನವರ ದೇಗುಲ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ರಂಗನಾಯಕಿ ಅಮ್ಮನವರ ದೇಗುಲ ನವೀಕರಣ ಕಾಮಗಾರಿಯನ್ನು ದಾನಿಗಳೇ ಸ್ವತಃ ಕೈಗೊಂಡಿದ್ದಾರೆ, ಎಎಂಆರ್ ಇಂಡಿಯಾ ಸಂಸ್ಥೆಯ ದಾನಿಗಳು ಈ ದೇಗುಲ ಅಭಿವೃದ್ಧಿಗೆ ತಾವೇ ಅಂದಾಜು ತಯಾರಿಸಿದ್ದು ಅವರೇ ಹಣ ಭರಿಸುತ್ತಿದ್ದಾರೆ, ಮುಂದೆ ಇನ್ನು ಅಗತ್ಯವಿರುವ ಹಣವನ್ನು ಮುಜರಾಯಿ ಇಲಾಖೆಯಿಂದ ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
6 ತಿಂಗಳಲ್ಲಿ ದರ್ಶನಕ್ಕೆ ಅವಕಾಶ: ಮಧ್ಯರಂಗನಾಥಸ್ವಾಮಿಯ ಕಾಮಗಾರಿ ಈಗಾಗಾಲೇ ಮುಕ್ತಾಯದ ಹಂತದಲ್ಲಿದೆ. ಇಂದು ದಾನಿಗಳ ಸಹಕಾರದೊಂದಿಗೆ ಚಾಲನೆ ನೀಡಲಾದ ಕಾಮಗಾರಿ ಸಹ ಆರು ತಿಂಗಳೊಳಗೆ ಮುಗಿಯಲಿದೆ. ಹಾಗಾಗಿ ರಂಗನಾಯಕಿ ಅಮ್ಮನವರು ಮತ್ತು ಮಧ್ಯರಂಗನಾಥಸ್ವಾಮಿಯ ದರ್ಶನಕ್ಕೆ ಇನ್ನು ಆರು ತಿಂಗಳೊಳಗೆ ಭಕ್ತರಿಗೆ ಅವಕಾಶ ಮಾಡಲಾಗುವುದು. ಈ ನಿಟ್ಟಿನಲ್ಲಿ ಭಕ್ತ ಸಮೂಹ ಸಹಕರಿಸಬೇಕು ಎಂದರು.ಈ ವೇಳೆ ಜಿಲ್ಲಾಧಿಕಾರಿ ಶಿಲ್ಪಾನಾಗ್, ಉಪವಿಭಾಗಾಧಿಕಾರಿ ಮಹೇಶ್, ಸಮೂಹ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಸುರೇಶ್, ದಾನಿ ಮಹೇಶ ಕುಮಾರ ರೆಡ್ಡಿ, ಗ್ರಾಪಂ ಅದ್ಯಕ್ಷ ಕೆಂಪರಾಜು, ಉಪಾಧ್ಯಕ್ಷೆ ಸುವರ್ಣ, ಶಾಸಕರ ಆಪ್ತ ಕಾರ್ಯದರ್ಶಿ ಮುರುಗೇಶ ಇನ್ನಿತರರಿದ್ದರು. ಕ್ಷೇತ್ರವನ್ನು ಸಮಗ್ರ ಪ್ರಗತಿಯತ್ತ ಕೊಂಡೊಯ್ಯಬೇಕೆಂಬುದು ನನ್ನ ಕನಸು. ಅದನ್ನು ಈಡೇರಿಸುವಲ್ಲಿ ಹಂತ ಹಂತವಾಗಿ ಸ್ಪಂದಿಸುತ್ತಿದ್ದೇನೆ, ಕುಟುಂಬ ರಾಜಕಾರಣಕ್ಕೆ ಮೀಸಲಾದ ಹನೂರು ಕ್ಷೇತ್ರದಲ್ಲಿ ಅಭಿವೃದ್ಧಿ ನಿರೀಕ್ಷಿಸಿ. ಜನತೆ ನನಗೊಂದು ಅವಕಾಶ ನೀಡಿದ್ದಾರೆ. ಹಾಗಾಗಿ ಜನರ ನಿರೀಕ್ಷೆ ಹುಸಿ ಗೊಳಿಸಲ್ಲ, ಸದ್ದಿಲ್ಲದೆ ಸರ್ಕಾರದಿಂದ ಹಣ ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ.
-ಎಂ.ಆರ್.ಮಂಜುನಾಥ್, ಶಾಸಕರು