ಶಿಕ್ಷಣಕ್ಕೆ ಬಜೆಟ್‌ನಲ್ಲಿ ಶೇ. 30 ಹಣ ಮೀಸಲಿಡಲು ಎಸ್‌ಎಫ್‌ಐ ಆಗ್ರಹ

KannadaprabhaNewsNetwork | Published : Mar 3, 2025 1:50 AM

ಸಾರಾಂಶ

ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಮಾ. 7ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಬೇಕು.

ಹಾವೇರಿ: ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಶೇ. 30ರಷ್ಟು ಹಣವನ್ನು ಮೀಸಲಿಡಲು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳನ್ನು ಪೂರೈಸಲು ಒತ್ತಾಯಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಮಾ. 7ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಬೇಕು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಶಿಕ್ಷಣತಜ್ಞ ಕೊಠಾರಿ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕನಿಷ್ಠ ಶೇ. 30ರಷ್ಟು ಹಣ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮುಂದುವರಿಯುತ್ತಿದ್ದರೂ ಶಿಕ್ಷಣ ಕ್ಷೇತ್ರಕ್ಕೆ ಪ್ರತಿ ಬಜೆಟ್‌ನಲ್ಲಿ ಹಣ ಕಡಿತ ಮಾಡಿ ಸರಾಸರಿ ಕೇವಲ ಶೇ. 11ರಷ್ಟು ಹಣ ನೀಡುತ್ತಿರುವುದು ಖಂಡನೀಯ ಎಂದರು.ಸರ್ಕಾರಿ ಶಾಲಾ ಕಾಲೇಜು ಹಾಸ್ಟೆಲ್, ವಿಶ್ವವಿದ್ಯಾಲಗಳ ಸಮಗ್ರ ಅಭಿವೃದ್ಧಿಗಾಗಿ ಕನಿಷ್ಠ ಶೇ. 30ರಷ್ಟು ಹಣವನ್ನು ಈ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು. ಆ ಮೂಲಕ ಗ್ಯಾರಂಟಿ ಪಟ್ಟಿಗೆ ಶಿಕ್ಷಣ ಸೇರಿಸಬೇಕು. ಸರ್ಕಾರಿ ಎಂಜಿನಿಯರಿಂಗ್, ಮೆಡಿಕಲ್, ಪ್ಯಾರಮೆಡಿಕಲ್, ನರ್ಸಿಂಗ್, ಹಾವೇರಿ ವಿಶ್ವವಿದ್ಯಾಲಯ ಉಳಿವಿಗಾಗಿ ಸೇರಿದಂತೆ ಶಿಗ್ಗಾಂವಿ ಜಾನಪದ ವಿವಿ, ಹನುಮನಮಟ್ಟಿ ಕೃಷಿ ವಿವಿಗಳು ಸೇರಿದಂತೆ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕು.

ಸರ್ಕಾರಿ ಕಾನೂನು ವಿದ್ಯಾಲಯ ಶೀಘ್ರವಾಗಿ 3 ಮತ್ತು 5 ವರ್ಷ ಕೋರ್ಸ್‌ಗಳನ್ನು ಪ್ರಾರಂಭಿಸಬೇಕು. ಜಿಲ್ಲೆಯ ಪ್ರತಿ ತಾಲೂಕಿಗೊಂದು ಸರ್ಕಾರಿ ಐಟಿಐ ಕಾಲೇಜು, ಸರ್ಕಾರಿ ನರ್ಸಿಂಗ್ ಕಾಲೇಜು, ಸರ್ಕಾರಿ ಡಿಪ್ಲೊಮಾ ಕಾಲೇಜುಗಳು ಹಾಗೂ ಪ್ರತ್ಯೇಕ ವೃತ್ತಿಪರ ಹಾಸ್ಟೆಲ್‌ಗಳು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು. ಈ ವೇಳೆ ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ಗೌತಮ್ ಸಾವಕ್ಕನವರ, ಎಸ್‌ಎಫ್‌ಐ ಮುಖಂಡರಾದ ಕೃಷ್ಣ ನಾಯಕ, ಸುರೇಶ್ ಹಂಡಿ, ಅಶ್ರಫ ನದಾಫ, ಚಂದ್ರಶೇಖರ ಗಿರೇಪ್ಪಗೌಡ್ರ, ಚನ್ನರಾಜಯ್ಯ ಎಚ್.ಎಂ., ಸಂದೀಪ್ ಅಣ್ಣಿಗೇರಿ, ಸಂಜಯ ಎಚ್., ಚೇತನ ಎಂ., ಸುನೀಲ್ ಪತ್ತಾರ, ಅಭಿಷೇಕ ಡಿ., ಉಮೇಶ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಸಿ.ವಿ. ರಾಮನ್ ಸಾಧನೆ ಅಧ್ಯಯನ ಅಗತ್ಯ

ರಾಣಿಬೆನ್ನೂರು: ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಪರಿಚಯಿಸಿದ ಸಿ.ವಿ. ರಾಮನ್ ಸಾಧನೆಯ ಅಧ್ಯಯನ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ ಎಂದು ಮುಖ್ಯೋಪಾಧ್ಯಾಯ ಬಿ.ಪಿ. ಶಿಡೇನೂರ ಹೇಳಿದರು.ಇಲ್ಲಿನ ಮಾರುತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ 17ರಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು. ವೈಜ್ಞಾನಿಕ ಚಿಂತನೆಗಳು ಮಕ್ಕಳಲ್ಲಿ ಸಂಶೋಧನೆಯ ಪ್ರವೃತ್ತಿಯನ್ನು ಹುಟ್ಟು ಹಾಕುತ್ತವೆ ಎಂದರು.ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಕಿ ಪೂರ್ಣಿಮಾ ನೆಗಳೂರುಮಠ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಜ್ವಾಲಾಮುಖಿ ಸ್ಫೋಟ, ಶಾಖೋತ್ಪನ್ನದ ಪರಿಣಾಮ, ವಿದ್ಯುತ್ಕೋಶದ ಮೂಲಕ ವಿದ್ಯುತ್ ಪ್ರವಾಹ ಮುಂತಾದ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು.

ಆರ್.ಬಿ. ಚಲವಾದಿ, ವನಜಾಕ್ಷಿ ಪಾಟೀಲ, ಪ್ರತಿಭಾ ಮೈಲಾರಕಳ್ಳಿಮಠ, ಕೆ.ಎಸ್. ಮ್ಯಾಗೇರಿ, ಶ್ವೇತಾ ಎಚ್.ವಿ. ಮತ್ತಿತರರಿದ್ದರು.

Share this article