ಚುನಾವಣೆಯ ಮತ ಎಣಿಕೆ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಹೊಣೆಗಾರಿಕೆಯಿಂದ ನಿರ್ವಹಿಸುವಂತೆ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡಪ್ರಭವಾರ್ತೆ ಚಾಮರಾಜನಗರ
ಚುನಾವಣೆಯ ಮತ ಎಣಿಕೆ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಹೊಣೆಗಾರಿಕೆಯಿಂದ ನಿರ್ವಹಿಸುವಂತೆ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ನಗರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣಾ ಮತ ಎಣಿಕೆ ಕಾರ್ಯಕ್ಕಾಗಿ ನಿಯೋಜಿತರಾಗಿರುವ ಅಧಿಕಾರಿ, ಸಿಬ್ಬಂದಿಗೆ ಏರ್ಪಡಿಸಲಾಗಿದ್ದ 2ನೇ ಹಂತದ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮತ ಎಣಿಕೆಯು ಜೂ.೪ರಂದು ನಗರದ ನಂಜನಗೂಡು ರಸ್ತೆಯಲ್ಲಿರುವ ಬೇಡರಪುರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಮತ ಎಣಿಕೆ ಕಾರ್ಯವು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ. ಈ ನಿಟ್ಟಿನಲ್ಲಿ ಮತ ಎಣಿಕೆಯನ್ನು ಅಚ್ಚುಕಟ್ಟಾಗಿ ಹಾಗೂ ಜವಾಬ್ದಾರಿಯುತ ಹೊಣೆಗಾರಿಕೆಯಿಂದ ನಿರ್ವಹಿಸಲು ನಿಯೋಜಿತರಾಗಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿ ಶಿಸ್ತು, ಸಂಯಮ ಹಾಗೂ ಸಮಯಪ್ರಜ್ಞೆ, ಏಕಾಗ್ರತೆ ಹೊಂದಿರಬೇಕು ಎಂದರು.ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದವಾಗದಂತೆ ತಹಸೀಲ್ದಾರ್ ಹಂತದಲ್ಲಿ ಸಿದ್ಧತಾ ಪ್ರಕ್ರಿಯೆಗಳನ್ನು ಈಗಾಗಲೇ ವ್ಯವಸ್ಥಿತವಾಗಿ ನಿರ್ವಹಿಸಲಾಗಿದೆ. ಮತ ಎಣಿಕೆ ಕಾರ್ಯಕ್ಕೆ ನಿಯೋಜಿತರಾಗಿರುವವರು ಅಂದು ಬೆಳಗ್ಗೆ 5 ಗಂಟೆಗೆ ಸರಿಯಾಗಿ ಎಣಿಕೆ ಕೇಂದ್ರದ ಬಳಿ ಇರಬೇಕು. 6.30 ಗಂಟೆಯೊಳಗೆ ಎಣಿಕೆ ಕೇಂದ್ರದೊಳಗೆ ಹಾಜರಾಗಬೇಕು. ಎಣಿಕೆ ಕಾರ್ಯದ ಎಲ್ಲಾ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಚುನಾವಣಾಧಿಕಾರಿ ನೀಡಿರುವ ಗುರುತಿನ ಚೀಟಿ ಹಾಗೂ ಆದೇಶ ಪತ್ರದೊಂದಿಗೆ ಎಣಿಕೆ ಕೇಂದ್ರಕ್ಕೆ ಆಗಮಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ನಿಯೋಜಿತರಾಗಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿ ಮತ ಎಣಿಕೆ ಕೇಂದ್ರದೊಳಗೆ ಕಂಪ್ಯೂಟರ್, ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂತಿಲ್ಲ. ಮತ ಎಣಿಕೆ ಕಾರ್ಯದಲ್ಲಿ ಮೊದಲು ಅಂಚೆ ಮತಪತ್ರಗಳ ಎಣಿಕೆ ನಡೆಯಲಿದ್ದು, ಬಳಿಕ ಕಂಟ್ರೋಲ್ ಯೂನಿಟ್ ಯಂತ್ರದಲ್ಲಿನ ಮತ ಎಣಿಕೆ ಪ್ರಾರಂಭವಾಗಲಿದೆ ಎಣಿಕೆ ಕುರಿತು ತಮಗಿರುವ ಸಂಶಯ, ಸಂದೇಹಗಳನ್ನು ಪರಿಹರಿಸಲು ಕಾರ್ಯಾಗಾರ ಆಯೋಜಿಸಲಾಗಿದೆ. ಎಲ್ಲರು ಕಾರ್ಯಾಗಾರದ ಸದುಪಯೋಗವನ್ನು ಪಡೆದು ಎಣಿಕೆ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯಕ್ಕೆ ನೇಮಿಸಲಾಗಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ಅನುಕೂಲವಾಗುವಂತೆ ಆಯಾ ತಾಲೂಕು ಕೇಂದ್ರದಿಂದ ಕೆಎಸ್ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಹೆಚ್.ಡಿ. ಕೋಟೆ ತಾಲೂಕು ಕಚೇರಿಯಿಂದ ಬೆಳಗ್ಗೆ 2.30 ಗಂಟೆಗೆ, ಟಿ.ನರಸೀಪುರ ತಾಲೂಕು ಕಚೇರಿಯಿಂದ ಬೆಳಗ್ಗೆ 4 ಗಂಟೆಗೆ, ನಂಜನಗೂಡು-ವರುಣ ವ್ಯಾಪ್ತಿಗೆ ನಂಜನಗೂಡು ತಾಲೂಕು ಕಚೇರಿಯಿಂದ ಬೆಳಗ್ಗೆ 4 ಗಂಟೆಗೆ, ಹನೂರು ಭ್ರಮರಾಂಭ ಚಿತ್ರಮಂದಿರದಿಂದ ಬೆಳಗ್ಗೆ 3.30 ಗಂಟೆಗೆ, ಗುಂಡ್ಲುಪೇಟೆ ತಾಲೂಕು ಕಚೇರಿಯಿಂದ ಬೆಳಗ್ಗೆ 4 ಗಂಟೆಗೆ ಹಾಗೂ ಕೊಳ್ಳೇಗಾಲ ತಾಲೂಕು ಕಚೇರಿಯಿಂದ ಬೆಳಗ್ಗೆ 3.30 ಗಂಟೆಗೆ ಬಸ್‌ಗಳು ಹೊರಡಲಿವೆ. ಎಲ್ಲಾ ಅಧಿಕಾರಿ, ನೌಕರರು ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಅವರು ತಿಳಿಸಿದರು.
ಚುನಾವಣಾ ತರಬೇತಿ ನೋಡೆಲ್ ಅಧಿಕಾರಿ ಲಿಂಗರಾಜೇ ಅರಸ್ ಅವರು ಕಾರ್ಯಾಗಾರದಲ್ಲಿ ಹಾಜರಿದ್ದ ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ಪವರ್ ಪಾಯಿಂಟ್ ಮೂಲಕ ಎಣಿಕೆ ಕಾರ್ಯದ ವಿವಿಧ ಮಜಲುಗಳು ಹಾಗೂ ಪ್ರಕ್ರಿಯೆಗಳ ಬಗ್ಗೆ ಸುದೀರ್ಘವಾಗಿ ವಿವರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.