ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಮರ್ಶನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಕರ್ತವ್ಯದ ಬಗ್ಗೆ ಶ್ರದ್ಧೆಯಿರಲಿ. ಗುಣಮಟ್ಟದ ತನಿಖೆಯಿಂದ ಮಾತ್ರ ಶಿಕ್ಷೆಯ ಪ್ರಮಾಣ ಹಾಗೂ ಕಾನೂನುಬಾಹಿರ ಕೃತ್ಯ ಎಸಗುವ ಗುಂಪುಗಳು, ರೌಡಿ ಆಸಾಮಿಗಳಿಗೆ ಶಿಕ್ಷೆ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಉಪಟಳ ನೀಡುವವರ ವಿರುದ್ಧ ಕ್ರಮ ಕೈಗೊಂಡಂತೆಯೂ ಆಗುತ್ತದೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆಯ ಪ್ರಾಥಮಿಕ ಮತ್ತು ನಿಜವಾದ ಕೆಲಸವೆಂದರೆ, ಕಾನೂನು-ಸುವ್ಯವಸ್ಥೆ ಕಾಪಾಡುವುದಾಗಿದೆ. ಜೊತೆಗೆ ನೊಂದವರಿಗೆ ನೆರವು, ಸಾರ್ವಜನಿಕರ ಸೇವೆಗೆ ಸದಾ ಲಭ್ಯವಿರುವುದು, ಸಮುದಾಯದತ್ತ ಇಲಾಖೆಯನ್ನು ಕೊಂಡೊಯ್ಯುವುದು, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವುದು ಹಾಗೂ ತಡೆಯುವುದು ಎಂದು ತಿಳಿಸಿದರು.ಗಾಂಜಾ ಮಟ್ಟ ಹಾಕಿ: ಮಾದಕ ದ್ರವ್ಯದ ಕುರಿತು ತಳಮಟ್ಟದ ಮಾಹಿತಿಯನ್ನು ಸಂಗ್ರಹಿಸಿ. ಗಾಂಜಾ ಬೆಳೆಯುವವರು, ಸೇವನೆ ಮಾಡುವವರು, ಮಾರಾಟ ಮಾಡುವವರು, ಸಂಗ್ರಹಣೆ ಮಾಡುವವರು ಮತ್ತು ಸಾಗಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ. ಕಾನೂನು ರೀತಿಯ ನಿರ್ದ್ಯಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ಶಿವಮೊಗ್ಗ ಪೊಲೀಸ್ ಇಲಾಖೆ ಬಗ್ಗೆ ಮೆಚ್ಚುಗೆ: ಶಿವಮೊಗ್ಗ ಜಿಲ್ಲೆ ಒಂದು ಸೂಕ್ಷ್ಮ ಜಿಲ್ಲೆಯಾಗಿದೆ. ಪೊಲೀಸ್ ಕಾರ್ಯವೈಖರಿಯಿಂದ ಜಿಲ್ಲೆಯಲ್ಲಿ ಕಾನೂನು-ಸುವ್ಯವಸ್ಥೆ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜಿಲ್ಲೆಯು ಭೌಗೋಳಿಕವಾಗಿ ಮಾತ್ರವಲ್ಲದೆ, ಪ್ರಕರಣಗಳ ವರದಿಯಲ್ಲೂ ಸಹ ದೊಡ್ಡ ಜಿಲ್ಲೆಯಾಗಿದೆ. ಯಾವುದೇ ಒಂದು ಪ್ರದೇಶದಲ್ಲಿ ಜರುಗುವ ಅಪರಾಧ ಕೃತ್ಯಗಳು, ಇತರೆ ಕೃತ್ಯಗಳಿಗೆ ದಾರಿ ಮಾಡಿಕೊಡುತ್ತವೆ. ಆದ್ದರಿಂದ ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಮಟ್ಟ ಹಾಕುವಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಜಿಲ್ಲೆಯ ಪೊಲೀಸರಿಗೆ ಸಲಹೆ ನೀಡಿದರು.
---
ಎಂ.ಎ. ಸಲೀಂ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು