ಬಸವರಾಜ ಹಿರೇಮಠಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಜನಪದ ಕಲಾ ತಂಡಗಳು ಉತ್ಸವ, ಜಾತ್ರೆ, ಸಭೆ ಸಮಾರಂಭಗಳಲ್ಲಿ ಕಲಾ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿವೆ.ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ ಎಂಬ ಮಾತಿನಂತೆ ತಾಲೂಕಿನ ಬೇರೆ ಬೇರೆ ಗ್ರಾಮಗಳಲ್ಲಿ ಜನಪದ ಕಲಾವಿದರಿರುವರು. ಆದರೆ ಸಂಘಟನೆ ಮೂಲಕ ಜನರ ಬಳಿ ಬಂದವರು ಮುಗಳಿ, ಚಿಕ್ಕಮಣಕಟ್ಟಿ ಹಾಗೂ ಕಬನೂರು ಗ್ರಾಮದ ಕಲಾವಿದರು. ಬೇರೆ ಊರಿನ ಕಲಾವಿದರಿಗೂ ತಮ್ಮ ತಂಡಗಳಲ್ಲಿ ಅವಕಾಶ ನೀಡಿ ಬದುಕು ರೂಪಿಸಿಕೊಂಡಿರುವರು. ಇದು ತಾಲೂಕಿನ ಹೆಮ್ಮೆಯೂ ಹೌದು.
ಮುಗಳಿ ಗ್ರಾಮದ ಕಲ್ಮೇಶ್ವರ ಜಾನಪದ ಕಲಾ ತಂಡದ ಬಸವರಾಜ ಗೊಬ್ಬಿ ಕಳೆದ ೩೬ ವರ್ಷಗಳಿಂದ ಜನಪದ ಕಲೆಯೊಳಗೆ ತಮ್ಮನ್ನು ಅರ್ಪಿಸಿಕೊಂಡಿರುವರು. ಒಂದು ಅವಧಿಗೆ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಸದಸ್ಯರೂ ಆಗಿದ್ದರು. ಕೋಲಾಟ, ಹಾಡು, ಜಾನಪದ ನೃತ್ಯ, ಬೀದಿ ನಾಟಕ, ಸಣ್ಣಾಟ ಸೇರಿದಂತೆ ೧೯೯೦ರ ದಶಕದಲ್ಲಿ ಅಖಂಡ ಧಾರವಾಡ ಜಿಲ್ಲೆಯಲ್ಲಿ ಜರುಗಿದ ಸಾಕ್ಷರತಾ ಆಂದೋಲನಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು. ಅದೇ ಕಲಾ ಸ್ವಾದದಲ್ಲಿ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದರು. ತಂಡದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ಇದ್ದು, ಕಿತ್ತೂರು ಉತ್ಸವ, ಅಂಕೋಲಾ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮತ್ತು ಗಡಿ ನಾಡು ಉತ್ಸವಗಳಲ್ಲಿ ಪಾಲ್ಗೊಂಡಿರುವರು.ಇದೇ ಗ್ರಾಮದ ಮಲ್ಲಿಕಾರ್ಜುನ ಜಾನಪದ ಕಲಾ ತಂಡದ ಗುರಪ್ಪ ಹುಬ್ಬಳ್ಳಿ ಕಳೆದ ೧೮ ವರ್ಷಗಳಿಂದ ಜನಪದ ಕಲೆಯಲ್ಲಿ ಸಾಧನೆಯತ್ತ ಸಾಗಿರುವರು. ಬೀದಿ ನಾಟಕಗಳ ಮೂಲಕ ಎಚ್.ಐ.ವಿ. (ಏಡ್ಸ್), ಸ್ವಚ್ಛ ಭಾರತ ಆಂದೋಲನ, ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳನ್ನು ಜನರಿಗೆ ತಲುಪಿಸಲು ಶ್ರಮಿಸುತ್ತಿರುವರು. ಹಾಡುಗಾರಿಕೆ, ಅಭಿನಯ ಹಾಗೂ ಹೋರಾಟದ ಹಾಡುಗಳು ಇವರಲ್ಲಿ ಸಿದ್ಧಿಸಿವೆ.ಕಬನೂರು ಗ್ರಾಮದ ಅಲ್ಲಿಕೇರಿ ಬಸವೇಶ್ವರ ಸಾಂಸ್ಕೃತಿಕ-ಕ್ರೀಡಾ ಯುವ ಸಂಘ ಕಳೆದ ೧೨ ವರ್ಷಗಳಿಂದ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ತೊಡಗಿದೆ. ತಂಡದ ಮುಖ್ಯಸ್ಥ ಗದಿಗಯ್ಯ ಹಿರೇಮಠ ೧೭ ಕಲಾವಿದರ ಜತೆಗೆ ರಾಜ್ಯಮಟ್ಟದ ಜನಪದ ಜಾತ್ರೆಯಲ್ಲಿ ಪಾಲ್ಗೊಂಡಿರುವರು. ರಾಜಸ್ಥಾನದ ಜೈಪುರದಲ್ಲಿ ಜರುಗಿದ ರಾಷ್ಟ್ರೀಯ ಲೋಕ ರಂಗೋತ್ಸವದಲ್ಲಿ ಜೋಗತಿ ನೃತ್ಯ ಪ್ರದರ್ಶಿಸಿರುವರು. ಹಾಡುಗಾರಿಕೆ, ನೃತ್ಯ ಮತ್ತು ಅಭಿನಯ ಇವರ ಆದ್ಯತೆಯಾಗಿದೆ.ಚಿಕ್ಕಮಣಕಟ್ಟಿಯ ಜೋಡಿ ಬಸವೇಶ್ವರ ಜಾನಪದ ಕಲಾ ತಂಡದ ಬಸವರಾಜ ಕರಡಿ ಅವರು ಹಾಡುಗಾರಿಕೆ, ವಾದ್ಯ, ತಮಟೆ ಬಾರಿಸುವ ಮೂಲಕ ೧೬ ವರ್ಷಗಳಿಂದ ಜನಮಾನಸದಲ್ಲಿರುವರು. ಹಂಪಿ ಉತ್ಸವ, ಮೈಸೂರಿನ ದಸರಾ ಉತ್ಸವ ಸೇರಿದಂತೆ ನಾಡಿನ ಪ್ರಮುಖ ಉತ್ಸವಗಳಲ್ಲಿ ಮತ್ತು ಸರ್ಕಾರದ ಯೋಜನೆಗಳನ್ನು ಪರಿಚಯಿಸುತ್ತಿದ್ದಾರೆ.ಡೊಳ್ಳು, ಗಾರುಡಿಗ ಗೊಂಬೆ, ಝಾಂಜ್ ಮೇಳ, ಜೋಗತಿ ನೃತ್ಯ, ಬೀದಿ ನಾಟಕ ನನ್ನ ಜೀವನೋಪಾಯಕ್ಕೆ ಅನುಕೂಲ ಕಲ್ಪಿಸಿದೆ. ಮೂಲ ಕಲೆ ಉಳಿಸುವ ಕಾರಣಕ್ಕೆ ಕರೋಕೆ ಅಥವಾ ಅಶ್ಲೀಲ ಸಾಹಿತ್ಯವನ್ನು ನಿರ್ಲಕ್ಷಿಸಿದ್ದೇನೆ. ಕಲೆಯಿಂದ ಬೆಲೆ ಇದೆ ಎಂಬುದಕ್ಕೆ ನನಗೆ ಅಭಿಮಾನವಿದೆ ಎಂದು ಮುಗಳಿಯ ಕಲ್ಮೇಶ್ವರ ಜಾನಪದ ಕಲಾ ತಂಡದ ಮುಖ್ಯಸ್ಥ ಬಸವರಾಜ ಗೊಬ್ಬಿ ಹೇಳಿದರು.