- ಸಂಗೀತ ನಿರ್ದೇಶಕ ಹಂಸಲೇಖ ಬಣ್ಣನೆ, ಸಂಗೀತ ವಿವಿ
- ಸಂಗೀತ ವಿವಿಯಲ್ಲಿ ಪ್ರದರ್ಶನಕಲೆ ಮತ್ತು ಮಾಧ್ಯಮ- ಸಾಂಸ್ಕೃತಿಕ ದೃಷ್ಟಿಕೋನಗಳು ಕುರಿತ ವಿಚಾರ ಸಂಕಿರಣ ---ಕನ್ನಡಪ್ರಭ ವಾರ್ತೆ ಮೈಸೂರು
ಸಂಗೀತವು ಭಾರತದ ಪರಂಪರೆಯಲ್ಲಿ ಹಿಮಾಲಯದಂತೆ. ಅದು ಗಂಗೆಯಾಗಿ ಗಂಗೂಬಾಯಿಯಾಗಿ ಹರಿಯುತ್ತಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಬಣ್ಣಿಸಿದರು.ನಗರದ ಲಕ್ಷ್ಮೀಪುರಂನ ಕರ್ನಾಟಕ ರಾಜ್ಯ ಡಾ. ಗಂಬೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯವು, ಕರ್ನಾಟಕ ರಾಜ್ಯ ಸಂವಹನ ಮತ್ತು ಪತ್ರಿಕೋದ್ಯಮ ಶಿಕ್ಷಕರ ಸಂಘದವ ಸಹಯೋಗದಲ್ಲಿ ಏರ್ಪಡಿಸಿರುವ ಪ್ರದರ್ಶನ ಕಲೆ ಮತ್ತು ಮಾಧ್ಯಮ: ಸಾಂಸ್ಕೃತಿಕ ದೃಷ್ಟಿಕೋನಗಳು ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ಹಾಗೂ ಪ್ರದರ್ಶಕ ಕಲೆಗಳು ಸಮಾಜಕ್ಕೆ ಶಾಂತಿ– ನೆಮ್ಮದಿ ಕೊಡುತ್ತವೆ. ಶ್ರೇಣಿಕೃತ ಸಮಾಜಕ್ಕೆ ಸಮತೆಯನ್ನು ಕಲೆಗಳ ಮೂಲಕ ಧೈರ್ಯವಾಗಿ ಪ್ರದರ್ಶಿಸುವ ಚೈತನ್ಯ ಪ್ರತಿಯೊಬ್ಬರಿಗೂ ದೊರೆಯಬೇಕು ಎಂದರು.ಶ್ರೇಣಿಕೃತ ವ್ಯವಸ್ಥೆ ಎಂಬುದು ಸ್ಥಾವರ. ಚಲನಾ ಶಕ್ತಿ ಬರಬೇಕೆಂದರೆ ಎಲ್ಲವೂ ಬದಲಾಗಬೇಕು. ಸಾಮಾಜಿಕ ಹೊಣೆಗಾರಿಕೆ ಎಲ್ಲರ ಮೇಲೂ ಇದೆ. ಸಮಾಜದ ಬದಲಾವಣೆಯಲ್ಲಿ ಕಲಾವಿದರ ಪಾತ್ರ ದೊಡ್ಡದಿದೆ ಎಂದರು.
ಸಂಗೀತದ ಜೊತೆ ಪ್ರದರ್ಶಕ ಕಲೆಗಳು ಸೇರಿರುವುದು ಬೃಹತ್ ನದಿಯ ಉಪ ನದಿಗಳಂತೆ. ಸಂಗೀತವು ದೇಶದ ಪರಂಪರೆಯಲ್ಲಿ ಬೆಳೆದ ದೊಡ್ಡ ಹಿಮಾಲಯದಂತೆ. ಇದಕ್ಕೆ ಗುರು ಪರಂಪರೆ ಇದೆ. ಇದು ಗಂಗೆಯಾಗಿ, ಗಂಗೂಬಾಯಿಯಾಗಿ ಮೈಸೂರಿನಲ್ಲಿ ಹರಿಯುತ್ತಿದೆ. ಸಂಗೀತಕ್ಕೆ ಪ್ರದರ್ಶಕ ಕಲೆಗಳನ್ನು ಸಂಯೋಜಿಸಿರುವುದು ದೊಡ್ಡ ಕೆಲಸ. ಯಾವ ಪುಣ್ಯಾತ್ಮರು ಈ ಕೆಲಸ ಮಾಡಿದ್ದಾರೋ. ಇವು ಒಂದೊಕ್ಕೊಂದು ಪೂರಕವಾಗಿವೆ ಎಂದರು.ನಮ್ಮ ಬದುಕು ಆಗಿರುವುದಲ್ಲ, ಆಗುತ್ತಾ ಇರುವುದು. ಇದನ್ನು ತಿಳಿಸಿದ್ದು ಬುದ್ಧ. ನಮ್ಮ ಬದುಕು ಬರುತ್ತಿದೆ, ಇರುತ್ತದೆ ಮತ್ತು ಆಗುತ್ತಿದೆ. ಆದ್ದರಿಂದ ನಾನು ಈ ವಿಚಾರ ಸಂಕಿರಣವನ್ನು ಆಗುವಿಕೆ ಎಂದು ಕರೆಯುತ್ತೇನೆ ಎಂದು ಅವರು ಹೇಳಿದರು.
ಸಂಗೀತ ಮತ್ತು ಪ್ರದರ್ಶಕ ಕಲೆಗಳು ಇಂದು ಮಾಧ್ಯಮದ ಮುಂದೆ ಹೋಗುತ್ತಿದೆ. ಲೆನ್ಸ್ ಮತ್ತು ಸೆನ್ಸ್ ಒಂದಾಗುತ್ತಿದೆ. ಮಾಧ್ಯಮ ಎಲ್ಲಾ ವಿಭಾಗವನ್ನು ಕಬಳಿಸಿದೆ. ಅನೇಕರಿಗೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂಬ ಆಸೆ ಇರುತ್ತದೆ. ಆದರೆ ಮನಸ್ಸಿನಲ್ಲಿ ಸ್ಪಷ್ಟತೆ ಇರುವುದಿಲ್ಲ. ಅವಕಾಶವಿದ್ದರೂ ಅಳುಕು ಇರುತ್ತದೆ ಎಂದು ಅವರು ತಿಳಿಸಿದರು.ಇಲ್ಲಿರುವ ತಾವೆಲ್ಲರೂ (ವಿದ್ಯಾರ್ಥಿಗಳು) ಗಂಗೂಬಾಯಿಗಳಾಗಿ, ವರದಾಚಾರರಾಗಿ ಹಾಡಿ, ಕುಣಿದು, ಬೆಳೆದು ಸಾರ್ವಜನಿಕರಿಂದ ಚಪ್ಪಾಳೆ ಪಡೆದುಕೊಂಡು ಈಗಿನ ಚಪ್ಪಾಳೆಯ ಲೆಕ್ಕವನ್ನು ಚುಕ್ತಮಾಡಿಕೊಳ್ಳಿ ಎಂದು ಹೇಳಿ ಚಪ್ಪಾಳೆ ತಟ್ಟುವಂತೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಕೆ. ರವಿ ಮಾತನಾಡಿ, ಮಾಧ್ಯಮ ಮಾಹಿತಿ, ಶಿಕ್ಷಣದ ಜೊತೆಗೆ ಮನರಂಜನೆಯನ್ನೂ ನೀಡುತ್ತಿದೆ. ಜಾಗತಿಕ ಮಾಧ್ಯಮದಲ್ಲಿ ಭಾರತೀಯ ಮಾಧ್ಯಮಗಳು ಶಕ್ತಿಯುತವಾಗಿ ಬೆಳೆಯಲು ಇಲ್ಲಿನ ಪ್ರತದರ್ಶಕ ಕಲೆಗಳೇ ಕಾರಣ ಎಂದರು.ಅಕ್ಷರ ವಂಚಿತ ಸಮುದಾಯದ ಪ್ರತಿಭೆಗಳಿಗೆ ಮೊದಲೆಲ್ಲ ವೇದಿಕೆಗಳೇ ಸಿಗುತ್ತಿರಲಿಲ್ಲ. ವೈರುಧ್ಯಗಳ ನಡುವೆ ಸಾಧನೆ ಮಾಡಬೇಕಿತ್ತು. ಸಂಗೀತ, ಪ್ರದರ್ಶಕ ಕಲೆಗಳ ಮೂಲ ಪ್ರಕಾರವನ್ನು ಉಳಿಸಿಕೊಳ್ಳುವ ನೈತಿಕ ಜವಾಬ್ದಾರಿ ಮಾಧ್ಯಮದ ಮೇಲಿದೆ ಎಂದು ಅವರು ತಿಳಿಸಿದರು.
ಸಂಗೀತ ವಿವಿ ಕುಲಪತಿ ಪ್ರೊ. ನಾಗೇಶ್ವಿ. ಬೆಟ್ಟಕೋಟೆ ಅಧ್ಯಕ್ಷತೆ ವಹಿಸಿದ್ದರು. ಯುಎಸ್ಎ ವಾಲ್ತಂನ ಬ್ರಾಂಡೈಸ್ ವಿವಿಯ ಪ್ರೊ. ಗೌರಿ ವಿಜಯಕುಮಾರ್ ಮುಖ್ಯ ಭಾಷಣ ಮಾಡಿದರು. ಕುಲಸಚಿವೆ ಕೆ.ಎಸ್. ರೇಖಾ ಸ್ವಾಗತಿಸಿದರು.