ಕನ್ನಡಪ್ರಭ ವಾರ್ತೆ ಗೋಕಾಕ
ನಗರದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಮತ್ತೆ ನೀರು ಬಾರದಂತೆ ಶಾಶ್ವತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಜೊತೆಗೆ ಚರ್ಚಿಸಲಾಗಿದ್ದು, ಆದಷ್ಟು ಬೇಗ ಕಾರ್ಯಗತಗೊಳಿಸಲಾಗುವುದು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹೇಳಿದರು.ನಗರದ ಪ್ರವಾಹ ಪೀಡಿತ ಪ್ರದೇಶಗಳು ಹಾಗೂ ಕಾಳಜಿ ಕೇಂದ್ರಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದರು, ನಗರದ ಲೋಳಸೂರ, ಸೇತುವೆ, ಶಿಂಗಳಾಪುರ ಸೇತುವೆ, ಚಿಕ್ಕೋಳಿ ಸೇತುವೆಗೆ ಭೇಟಿ ನೀಡಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟಪ್ರಭಾ ನದಿ ಪ್ರವಾಹದಿಂದ ನಗರದಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಪ್ರವಾಹಪೀಡಿತ ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ತಾಲೂಕು ಆಡಳಿತ ಮುತುವರ್ಜಿ ವಹಿಸಿ ಕಾರ್ಯಮಾಡುತ್ತಿದೆ. ಈಗಾಗಲೇ ಹಲವು ಸರ್ಕಾರಗಳು ಪ್ರವಾಹ ಪೀಡಿತರಿಗೆ ಪುನರ್ವಸತಿ ಕಲ್ಪಿಸಿದರೂ ಸಹ ಯಾರೂ ಅಲ್ಲಿ ಶಾಶ್ವತವಾಗಿ ವಾಸವಾಗಿಲ್ಲ. ಬದಲಾಗಿ ಪ್ರವಾಹ ಇಳಿಕೆಯಾದ ಕೂಡಲೇ ಮತ್ತೆ ವಾಪಸ್ ಹೋಗುವುದರಿಂದ ಶಾಶ್ವತ ಪುನರ್ವಸತಿ ಕಷ್ಟಸಾಧ್ಯ. ಅದರ ಬದಲಾಗಿ ಆ ಪ್ರದೇಶದಲ್ಲಿ ನೀರು ನುಗ್ಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು, ಲೋಳಸೂರ ಮತ್ತು ಚಿಕ್ಕೋಳಿ ಸೇತುವೆಗಳನ್ನು ಎತ್ತರಿಸಲು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.ತಹಸೀಲ್ದಾರ ಡಾ.ಮೋಹನ ಭಸ್ಮೆ, ಡಿವೈಎಸ್ಪಿ ಡಿ.ಎಚ್. ಮುಲ್ಲಾ, ಸಿಪಿಐ ಗೋಪಾಲ ರಾಠೋಡ, ಇಇ ಉದಯಕುಮಾರ್ ಕಾಂಬ್ಳೆ, ಪೌರಾಯುಕ್ತ ರಮೇಶ ಜಾಧವ, ಎಸ್.ಪಿ. ವರಾಳೆ, ಮುಖಂಡರಾದ ಭೀಮಗೌಡ ಪೊಲೀಸ್ ಗೌಡರ, ಸುರೇಶ ಸನದಿ, ರಾಜೇಂದ್ರ ಗೌಡಪ್ಪಗೋಳ, ಎಸ್.ವಿ. ದೇಮಶೆಟ್ಟಿ, ಮಹಾಂತೇಶ ತಾವಂಶಿ, ಅಬ್ಬಾಸ್ ದೇಸಾಯಿ ಸೇರಿದಂತೆ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.