ಪ್ರವಾಹ ಬಾಧಿತ ಗ್ರಾಮಗಳ ಕಾಯಂ ಸ್ಥಳಾಂತರ: ಸಿಎಂ ಸಿದ್ದರಾಮಯ್ಯ

KannadaprabhaNewsNetwork | Published : Aug 6, 2024 12:32 AM

ಸಾರಾಂಶ

ಪ್ರತಿ ವರ್ಷ ಮಳೆಯಿಂದಾಗಿ ಜುಗೂಳ ಹಾಗೂ ಮಂಗಾವತಿ ಗ್ರಾಮಗಳು ಪ್ರವಾಹಕ್ಕೆ ತುತ್ತಾಗುತ್ತಿರುವ ಹಿನ್ನೆಲೆ ಈ ಗ್ರಾಮಗಳ‌ ಕಾಯಂ ಸ್ಥಳಾಂತರಕ್ಕೆ ಈ ಭಾಗದ ಜನಪ್ರತಿಧಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಪ್ರತಿ ವರ್ಷ ಮಳೆಯಿಂದಾಗಿ ಜುಗೂಳ ಹಾಗೂ ಮಂಗಾವತಿ ಗ್ರಾಮಗಳು ಪ್ರವಾಹಕ್ಕೆ ತುತ್ತಾಗುತ್ತಿರುವ ಹಿನ್ನೆಲೆ ಈ ಗ್ರಾಮಗಳ‌ ಕಾಯಂ ಸ್ಥಳಾಂತರಕ್ಕೆ ಈ ಭಾಗದ ಜನಪ್ರತಿಧಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಸೋಮವಾರ ಕೃಷ್ಣಾ ನದಿ ನೆರೆಯಿಂದ ಬಾಧಿತವಾದ ಜುಗೂಳ ಹಾಗೂ ಮಹಾರಾಷ್ಟ್ರ ಗಡಿ ಗ್ರಾಮವಾದ ಕಿರಗಾಪುರ ಮಧ್ಯೆ ನಿರ್ಮಿಸಿದ ಸೇತುವೆ ಹಾಗೂ ಕೃಷ್ಣಾ ನದಿ ಪರಿಶೀಲಿಸಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಶೇ.62ರಷ್ಟು ಹೆಚ್ಚು ಮಳೆಯಾಗಿದೆ. ಎಲ್ಲ‌ ಜಲಾಶಯಗಳು ತುಂಬಿವೆ. ಮಹಾರಾಷ್ಟ್ರದಿಂದಲೂ ನೀರು ಬರುತ್ತಿರುವುದರಿಂದ ಈ ಮೂರು ಗ್ರಾಮಗಳು ಪ್ರವಾಹದಿಂದ ಮುಳುಗಡೆ ಆಗಿರುವುದರಿಂದ ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಾರೆ. ವಿಶೇಷವಾಗಿ ಜುಗೂಳ, ಶಹಾಪುರ ಹಾಗೂ‌ ಮಂಗಾವತಿ ಗ್ರಾಮಗಳು ಪ್ರವಾಹ ಪೀಡಿತವಾಗುವ ಗ್ರಾಮಗಳಾಗಿದ್ದು, ಈ ಮೂರು ಗ್ರಾಮಗಳಲ್ಲಿ 3 ಸಾವಿರಕ್ಕೂ ಅಧಿಕ ಮನೆಗಳಿದ್ದು, ಪ್ರವಾಹದ ಸಂದರ್ಭದಲ್ಲಿ ತಾತ್ಕಾಲಿಕ ಪರಿಹಾರದ ಬದಲು ಕಾಯಂ ಆಗಿ ಸ್ಥಳಾಂತರಿಸುವುದು ಗ್ರಾಮಸ್ಥರ ಬೇಡಿಕೆಯಾಗಿದೆ. ಕೃಷ್ಣಾ ನದಿ ಪ್ರವಾಹ ಬಂದಾಗ ಅನೇಕ ಅನಾಹುತ ಆಗುತ್ತವೆ. ಈ ಗ್ರಾಮಗಳನ್ನು ಕಾಯಂ ಆಗಿ ಸ್ಥಳಾಂತರ ಮಾಡಲು ಈ ಭಾಗದ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಯೋಗ್ಯವಾದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶೀಘ್ರ ಪರಿಹಾರ ವಿತರಣೆಗೆ ಕ್ರಮ:

ಮಳೆ‌ ಜಾಸ್ತಿಯಾಗಿ ಪ್ರವಾಹ ಬಂದಾಗ ಇಂತಹ ಪರಿಸ್ಥಿತಿಗಳು ಉದ್ಭವವಾಗುತ್ತವೆ. ಸಂತ್ರಸ್ತರಿಗೆ ಸರ್ಕಾರದಿಂದ ಕೂಡಲೇ ಪರಿಹಾರ ನೀಡುವ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಯಾರೂ ಕೂಡ ಆತಂಕ ಪಡಬಾರದು ಎಂದು ಆತ್ಮಸ್ಥೈರ್ಯ ತುಂಬಿದ ಅವರು, ಬೆಳೆಹಾನಿ ಕುರಿತಂತೆ ಸಮೀಕ್ಷೆ‌ ನಡೆಸಿ ವಿಪತ್ತು ನಿರ್ವಹಣೆ ಮಾರ್ಗಸೂಚಿಯನ್ವಯ ಪರಿಹಾರ ವಿತರಿಸಲು ಕ್ರಮ ಜರುಗಿಸಲಾಗುವುದು ಎಂದು‌ ತಿಳಿಸಿದರು.

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷ ರಾಜು ಕಾಗೆ ಮಾತನಾಡಿ, ಮಂಗಾವತಿ, ಶಹಾಪುರ ಹಾಗೂ ಜುಗೂಳ ಗ್ರಾಮಸ್ಥರು ಪ್ರವಾಹದಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿಸ್ತ್ರತವಾಗಿ ತಿಳಿಸಲಾಗಿದ್ದು, ಗ್ರಾಮದ ಬಹುಮುಖ್ಯ ಬೇಡಿಕೆಯಾದ ಗ್ರಾಮಗಳ ಸ್ಥಳಾಂತರ ಮಾಡಲು ವಿನಂತಿ ಮಾಡಿದ್ದು ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಸರ್ಕಾರದ ದೆಹಲಿ ವಿಶೇಷ‌ ಪ್ರತಿನಿಧಿ-2 ಪ್ರಕಾಶ ಹುಕ್ಕೇರಿ ಮಾತನಾಡಿ, 2017ರಲ್ಲಿ ಐದು ಸೇತುವೆ ಮಂಜೂರಾಗಿದ್ದು, ಇವುಗಳ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿದಲ ಪ್ರವಾಹ ಸಂದರ್ಭದಲ್ಲಿ ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ ಲಕ್ಷ್ಮಣ ಸವದಿ, ಮಹಾಂತೇಶ ಕೌಜಲಗಿ, ಬುಡಾ ಅಧ್ಯಕ್ಷ ಲಕ್ಷ್ಮಣ ಚಿಂಗಳೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲನಿ ರಜನೀಶ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೇರಿದಂತೆ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಶಾಶ್ವತ ಪುನರ್ವಸತಿ ಕಲ್ಪಿಸಲು ಮನವಿ:

ಪ್ರತಿವರ್ಷ ಮಳೆಗಾಲದಲ್ಲಿ ಪ್ರವಾಹ ಬರುವುದೇ ನಮಗೆ ಪ್ರತಿವರ್ಷ ತೊಂದರೆ ಆಗುತ್ತದೆ. ಅದಕ್ಕಾಗಿ ನಮಗೆ ಶಾಸ್ವತ ಪುನರ್ವಸತಿ ಕಲ್ಪಿಸಿ ಕೊಡುವಂತೆ ಗ್ರಾಮ ಪಂಚಾಯತಿ ಅಧ್ಯಕ್ಷ ಕಾಕಾ ಪಾಟೀಲ, ದೂಧಗಂಗಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಣ್ಣಾಸಾಹೇಬ ಪಾಟೀಲ, ಮುಖಂಡರಾದ ಅನೀಲ ಕಡೋಲಿ, ಉಮೇಶ ಪಾಟೀಲ, ರವೀಂದ್ರ ವ್ಹಾಂಟೆ, ದುರೇಶ ಪಾಟೀಲ, ಅವಿನಾಶ ಪಾಟೀಲ ಸೇರಿದಂತೆ ಜುಗೂಳ, ಮಂಗಾವತಿ, ಶಹಾಪುರ ಗ್ರಾಮಸ್ಥರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Share this article