ಕನ್ನಡಪ್ರಭ ವಾರ್ತೆ ಕುಶಾಲನಗರ
ಕಾವೇರಿ ಜಲ ವಿವಾದ ಶಾಶ್ವತವಾಗಿ ಬಗೆಹರಿಸಲು ಮಾತೆ ಕಾವೇರಿಯಿಂದ ಮಾತ್ರ ಸಾಧ್ಯ ಎಂದು ಮೈಸೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ತಲಕಾವೇರಿ ಕ್ಷೇತ್ರದಲ್ಲಿ ಕಾವೇರಿ ನದಿ ರಕ್ಷಣಾ ಸಮಿತಿ ಆಶ್ರಯದಲ್ಲಿ ನಡೆದ ಸಂಕಲ್ಪ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾವೇರಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರಗಳು ನಿರಂತರವಾಗಿ ಪ್ರಯತ್ನ ಮಾಡುತ್ತಿವೆ. ಜೀವನದಿ ಕಾವೇರಿಯ ನೀರಿನ ಮೂಲಕ ದಕ್ಷಿಣ ಭಾರತದ ರಾಜ್ಯಗಳ ರೈತರು ತಮ್ಮ ಜೀವನ ಅವಲಂಬಿಸಿದ್ದಾರೆ. ನೀರಿನ ಕೊರತೆ ಎದುರಾದಾಗ ಎರಡು ರಾಜ್ಯಗಳ ನಡುವೆ ಗೊಂದಲ ಏರ್ಪಟ್ಟು ಇದರಿಂದ ಜನರ ಬದುಕು ಏರುಪೇರು ಆಗುತ್ತಿದೆ ಎಂದರು.ಉದ್ವೇಗ ಉಲ್ಬಣಗೊಳ್ಳುವ ಮೂಲಕ ಸಮಸ್ಯೆಗಳು ಆಗಾಗ್ಗೆ ಎದುರಾಗುತ್ತಿರುವುದು ಸಾಮಾನ್ಯ. ಈ ನಿಟ್ಟಿನಲ್ಲಿ ಸಮಸ್ಯೆಯನ್ನು ಕಾವೇರಿ ಮಾತೆಗೆ ಸಮರ್ಪಣೆ ಮಾಡುವ ಮೂಲಕ ಪರಿಹಾರಕ್ಕೆ ಸಾಮೂಹಿಕ ಪ್ರಾರ್ಥನೆ ಅಗತ್ಯ ಎಂದರು.
ರಾಜ್ಯ ರಾಜ್ಯಗಳ ನಡುವೆ ಉಂಟಾಗುತ್ತಿರುವ ಸಮಸ್ಯೆಗಳ ಶಾಶ್ವತ ಪರಿಹಾರ ಚರ್ಚೆಗೆ ಸಂಬಂಧಿಸಿದಂತೆ ಕಾವೇರಿ ನದಿ ರಕ್ಷಣಾ ಸಮಿತಿ ಸ್ಥಾಪಿಸಲಾಗಿದೆ ಎಂದು ತಿಳಿಸಿದ ಸಮಿತಿ ಅಧ್ಯಕ್ಷ ಎಚ್.ಕೆ.ರಾಮು, ಸಮಿತಿಯಲ್ಲಿ ನಾಡಿನ ಮಠಮಾನ್ಯರು, ನಿವೃತ್ತ ನ್ಯಾಯಾಧೀಶರು, ಹಿರಿಯ ನಿವೃತ್ತ ಅಧಿಕಾರಿಗಳು, ಪ್ರಮುಖರು ಇದ್ದಾರೆ. ಈ ಸಮಿತಿಯ ಪ್ರಮುಖರು ಮೂಲ ಕಾವೇರಿಯಲ್ಲಿ ಪೂಜೆ ಸಲ್ಲಿಸಿ ಕಾವೇರಿ ನದಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಹಿರಿಯರ ಮಾರ್ಗದರ್ಶನದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.ಕಳೆದ ಒಂದು ನೂರು ವರ್ಷಗಳಿಂದ ಕಾವೇರಿ ನದಿ ನೀರು ಹಂಚಿಕೆ ವಿಷಯ ಎರಡು ರಾಜ್ಯಗಳ ನಡುವೆ ರೈತರ ಮತ್ತು ಸರ್ಕಾರದ ಜ್ವಲಂತ ಸಮಸ್ಯೆಯಾಗಿದೆ. ಮಳೆ ಅಭಾವ ಸಂದರ್ಭದಲ್ಲಿ ಎರಡು ರಾಜ್ಯಗಳ ಜನರ ನಡುವೆ ಗೊಂದಲ ಉಂಟಾಗುತ್ತಿದೆ. ಶಾಶ್ವತ ಪರಿಹಾರವನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಚಿಂತನ ಮಂಥನ ಮಾಡಲಾಗುವುದು ಎಂದರು.
ಮಠಾಧೀಶರು, ಸಮಿತಿಯ ಪದಾಧಿಕಾರಿಗಳು ಕ್ಷೇತ್ರದಲ್ಲಿ ಪವಿತ್ರ ಕುಂಡಿಕೆ ಬಳಿ ವಿಶೇಷ ಪೂಜೆಯೊಂದಿಗೆ ಪ್ರಾರ್ಥನೆ ಸಲ್ಲಿಸಿದರು.ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ, ಅಮ್ಮತ್ತಿ ಕನ್ನಡ ಮಠ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಕಾವೇರಿ ಆಶ್ರಮದ ಶ್ರೀ ಅಪ್ಪಯ್ಯ ಸ್ವಾಮಿ , ಹಾಸನದ ವಿಜಯಕುಮಾರ ಸ್ವಾಮೀಜಿ, ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಕ್ಷೇತ್ರದ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಸಮಿತಿ ಗೌರವಾಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ ಎಸ್ ವೀರಯ್ಯ, ಎ ದೇವೇಗೌಡ, ಖಜಾಂಚಿ ಸಿ. ಜಗದೀಶ್, ಉಪಾಧ್ಯಕ್ಷ ಯಶೋಧ ರಾಜಣ್ಣ, ಮಂಜುಳಾ ಗೋಪಾಲ್ , ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ ಎನ್ ಚಂದ್ರಮೋಹನ್, ಮತ್ತು ಕಾವೇರಿ ನದಿ ರಕ್ಷಣಾ ಸಮಿತಿ ಪದಾಧಿಕಾರಿಗಳು ಇದ್ದರು.
ಸಮಿತಿ ಸದಸ್ಯರು ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಭಾಗಮಂಡಲ ಸಂಗಮದಲ್ಲಿ ನದಿಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು.