ಪಾಲಿಕೆಯ 870 ಪೌರಕಾರ್ಮಿಕರ ಕಾಯಂಗೊಳಿಸಿ

KannadaprabhaNewsNetwork |  
Published : Nov 07, 2024, 12:02 AM IST
6ಡಿಡಬ್ಲೂಡಿ6ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 870 ಪೌರಕಾರ್ಮಿಕರನ್ನು ಖಾಯಂಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಬುಧವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದೀಪಾ ಚೋಳನ್‌ ಅವರಿಗೆ ಪೌರಕಾರ್ಮಿಕರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಈ ವರೆಗೂ ನಾಲ್ಕು ವಿಶೇಷ ನೇರನೇಮಕಾತಿ ಅಧಿಸೂಚನೆ ಹೊರಡಿಸಿದೆ. ಮೊದಲನೇ ಹಂತದಲ್ಲಿ134, ಎರಡನೇ ಹಂತದಲ್ಲಿ 157, ಮೂರನೇ ಹಂತದಲ್ಲಿ 252, ನಾಲ್ಕನೇ ಹಂತದಲ್ಲಿ 327 ಹೀಗೆ ಒಟ್ಟು 870 ಹುದ್ದೆಗಳನ್ನು ನೇರನೇಮಕಾತಿ ಮಾಡಿಕೊಳ್ಳಬೇಕಾಗಿದೆ.

ಧಾರವಾಡ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೇರಪಾವತಿಯ 870 ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು ಹಾಗೂ ಪಾಲಿಕೆಯ ಸಾಮಾನ್ಯ ಸಭೆಯ ಠರಾವು ಅನ್ವಯ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರವೇತನ ಪಾವತಿಸಬೇಕು ಎಂದು ಆಗ್ರಹಿಸಿ ಬುಧವಾರ ಪೌರಕಾರ್ಮಿಕ ಸಂಘದಿಂದ ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದೀಪಾ ಚೋಳನ್‌ ಅವರಿಗೆ ಮನವಿ ಸಲ್ಲಿಸಲಾಯಿತು.ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಈ ವರೆಗೂ ನಾಲ್ಕು ವಿಶೇಷ ನೇರನೇಮಕಾತಿ ಅಧಿಸೂಚನೆ ಹೊರಡಿಸಿದೆ. ಮೊದಲನೇ ಹಂತದಲ್ಲಿ134, ಎರಡನೇ ಹಂತದಲ್ಲಿ 157, ಮೂರನೇ ಹಂತದಲ್ಲಿ 252, ನಾಲ್ಕನೇ ಹಂತದಲ್ಲಿ 327 ಹೀಗೆ ಒಟ್ಟು 870 ಹುದ್ದೆಗಳನ್ನು ನೇರನೇಮಕಾತಿ ಮಾಡಿಕೊಳ್ಳಬೇಕಾಗಿದೆ. ಆದರೆ, ಪಾಲಿಕೆಯಲ್ಲಿ ಮೊದಲನೇ ಹಂತದ ನೇಮಕಾತಿ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ 60 ಅರ್ಹ ನೇರಪಾವತಿ ಪೌರಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರ ಅವಲಂಬಿತರಿಗೆ ಯಾವುದೇ ಪರಿಹಾರವಿಲ್ಲ. ಈ ಕೂಡಲೇ ನಾಲ್ಕು ವಿಶೇಷ ನೇರನೇಮಕಾತಿ ಅಧಿಸೂಚನೆಯನ್ನು ಏಕಕಾಲಕ್ಕೆ ಹೊರಡಿಸಿ 870 ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಪಾಲಿಕೆ 2020ರಲ್ಲಿ 1001 ಪೌರಕಾರ್ಮಿಕರನ್ನು ನೇರವೇತನ ಪಾವತಿ ಅಡಿ ನೇಮಕಗೊಳಿಸಿದೆ. ಇನ್ನುಳಿದ 799 ಗುತ್ತಿಗೆ ಪೌರಕಾರ್ಮಿಕರನ್ನು ಸರ್ಕಾರದ ಆದೇಶವನ್ನು ಧಿಕ್ಕರಿಸಿ ಗುತ್ತಿಗೆ ಪದ್ಧತಿಯಲ್ಲಿ ಮುಂದುವರಿಸಿದ್ದಾರೆ. ಈ ಬಗ್ಗೆ ಸಂಘವು ನಿರಂತರ ಹೋರಾಟ ನಡೆಸಿ ಮೈಸೂರು ಮಹಾನಗರ ಪಾಲಿಕೆ ಮಾದರಿಯಲ್ಲಿ ಗುತ್ತಿಗೆ ಪೌರಕಾರ್ಮಿಕರಿಗೆ ನೇರವೇತನ ಪಾವತಿಸಬೇಕು ಎಂದು ಮನವರಿಕೆ ಮಾಡಲಾಯಿತು. ಬಳಿಕ ಪಾಲಿಕೆ ಸಾಮಾನ್ಯ ಸಭೆಯಲ್ಲಿ 2023ರ ಅ. 30ರಂದು 799 ಪೌರಕಾರ್ಮಿಕರಿಗೆ ನೇರವೇತನ ಪಾವತಿಸುವಂತೆ ಠರಾವು ಪಾಸ್ ಮಾಡಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಅನುಮೋದನೆಗೆ ಸಲ್ಲಿಸಿದ್ದಾರೆ. ಒಂದು ವರ್ಷ ಗತಿಸಿದರೂ ಸರ್ಕಾರದ ಅನುಮೋದನೆ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜತೆಗೆ ಪಾಲಿಕೆ ಸಾಮಾನ್ಯ ಸಭೆಯ ಠರಾವಿನ ಅನ್ವಯ ಪಾಲಿಕೆ ಆವರಣದಲ್ಲಿ ಸಂಘಕ್ಕೆ ಕೊಠಡಿ, ಕನಿಷ್ಠ ವೇತನ ವ್ಯತ್ಯಾಸ ಬಾಕಿ, ಹೆರಿಗೆ ಸೌಲಭ್ಯ, ಮಹಿಳಾ ಪೌರಕಾರ್ಮಿಕರಿಗೆ ಮೆಡಿಕಲ್ ಬೋನಸ್, ಸಂಕಷ್ಟ ಭತ್ಯೆ, ತುಟ್ಟಿಭತ್ಯೆ, ಬಿಬಿಎಂಪಿ ಮಾದರಿಯಲ್ಲಿ ಮೃತಪಟ್ಟ ಪೌರಕಾರ್ಮಿಕರ ಅವಲಂಬಿತರಿಗೆ ₹10 ಲಕ್ಷ ಪರಿಹಾರ, ತೆರವಾದ ಸ್ಥಳಕ್ಕೆ ಅವಲಂಬಿತರಿಗೆ ಕೆಲಸ, ಮೃತರ ಅಂತ್ಯಸಂಸ್ಕಾರಕ್ಕೆ ₹ 25 ಸಾವಿರ ಪರಿಹಾರ, ನಿವೃತ್ತಿ ಹೊಂದಿದ ಪೌರಕಾರ್ಮಿಕರಿಗೆ ₹10 ಲಕ್ಷ ಹಾಗೂ ಮಾಸಿಕ ₹ 5 ಸಾವಿರ ವೇತನ ಪಾವತಿಸಬೇಕೆಂದು ಇದೇ ವೇಳೆ ದೀಪಾ ಚೋಳನ್‌ ಸೇರಿದಂತೆ ಸರ್ಕಾರಕ್ಕೆ ನೀಡಿರುವ ಮನವಿಯಲ್ಲಿ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಹಾಗೂ ಪೌರಕಾರ್ಮಿಕರು ಆಗ್ರಹಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ