ಪ್ರಾಚೀನ ಸ್ಮಾರಕ ಸುತ್ತ ಕಟ್ಟಡಕ್ಕೆ ಅನುಮತಿ ಕಡ್ಡಾಯ: ಹೈಕೋರ್ಟ್

KannadaprabhaNewsNetwork |  
Published : Jun 05, 2025, 01:38 AM IST
ಹೈಕೋರ್ಟ್  | Kannada Prabha

ಸಾರಾಂಶ

ರಾಜ್ಯದಲ್ಲಿ ಪ್ರಾಚೀನ ಸ್ಮಾರಕಗಳ ಸುತ್ತಲಿನ ನಿಷೇಧಿತ ಜಾಗದಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಅನುಮತಿ ನೀಡುವುದನ್ನು ನಿರ್ಬಂಧಿಸಬೇಕು ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸುವ ಸುತ್ತೋಲೆ ಹೊರಡಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಗೆ ಹೈಕೋರ್ಟ್‌ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಪ್ರಾಚೀನ ಸ್ಮಾರಕಗಳ ಸುತ್ತಲಿನ ನಿಷೇಧಿತ ಜಾಗದಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಅನುಮತಿ ನೀಡುವುದನ್ನು ನಿರ್ಬಂಧಿಸಬೇಕು ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸುವ ಸುತ್ತೋಲೆ ಹೊರಡಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಗೆ ಹೈಕೋರ್ಟ್‌ ಆದೇಶಿಸಿದೆ.

ಮಂಗಳೂರಿನಲ್ಲಿ ಪ್ರಾಚೀನ ಹಾಗೂ ಸಂರಕ್ಷಿತ ಪ್ರದೇಶವಾದ ಮಂಗಳಾದೇವಿ ದೇವಾಲಯ ಈಶಾನ್ಯ ಭಾಗದ ನಿಷೇಧಿತ 150 ಮೀಟರ್‌ನಲ್ಲಿ ವಸತಿ ಕಟ್ಟಡ ನಿರ್ಮಿಸಲು ತನಗೆ ಅನುಮತಿ ನಿರಾಕರಿಸಿದ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕರ ಆದೇಶ ರದ್ದು ಕೋರಿ ಡೆನಿಸ್‌ ಕ್ರಾ ಎಂಬುವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಸಂರಕ್ಷಿತ ಸ್ಮಾರಕಗಳ ಸುತ್ತಲಿನ ಜಾಗದಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅಧಿಕಾರಿಗಳು ಅನುಮತಿ ನೀಡುವುದನ್ನು ನಿರ್ಬಂಧಿಸಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಸುತ್ತೋಲೆ ಹರಡಿಸಬೇಕು. ಒಂದು ವೇಳೆ ಕಾನೂನಿಗೆ ವಿರುದ್ಧವಾಗಿ ಅನುಮತಿ ನೀಡುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು. ಇಲಾಖಾ ವಿಚಾರಣೆ ನಡೆಸಲಾಗುವುದು. ಕಾನೂನಿಗೆ ಅನುಗುಣವಾಗಿ ಯಾವುದೇ ಅನುಮತಿ ನೀಡಬೇಕಾದರೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯಗೊಳಿಸಬೇಕು ಎಂಬುದಾಗಿ ಸುತ್ತೋಲೆಯಲ್ಲಿ ತಿಳಿಸಬೇಕು ಎಂದು ಆದೇಶದಲ್ಲಿ ಹೈಕೋರ್ಟ್‌ಗೆ ತಿಳಿಸಿದೆ.ಪ್ರಾಚೀನ ಸ್ಮಾರಕಗಳು, ಸ್ಥಳಗಳು, ಅವಶೇಷಗಳ ಕಾಯ್ದೆ- 1958, ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಅವಶೇಷಗಳ ಕಾಯ್ದೆ (ತಿದ್ದುಪಡಿ ಮತ್ತು ಮೌಲ್ಯೀಕರಣ) ಕಾಯ್ದೆ-2010ರ ನಿಬಂಧನೆಗಳ ಪ್ರಕಾರ ಸಂರಕ್ಷಿತ ಸ್ಮಾರಕಗಳ ಸುತ್ತಲೂ ಈ ಹಿಂದೆ ಅಸ್ತಿತ್ವದಲ್ಲಿರುವ ಕಟ್ಟಡದ ದುರಸ್ತಿ ಅಥವಾ ನವೀಕರಣಕ್ಕೆ ಮಾತ್ರ ಅವಕಾಶವಿದೆ. ಆದರೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಲ್ಲಿಸಿರುವ ವರದಿ ಪ್ರಕಾರ ಅರ್ಜಿದಾರರು ಪ್ರಾಚೀನ ಸ್ಮಾರಕವಿರುವ ಸುತ್ತಲಿನ ನಿಷೇಧಿತ ಪ್ರದೇಶದಿಂದ 64 ಮೀಟರ್‌ ಒಳಗೆ ಮನೆ ನಿರ್ಮಾಣಕ್ಕೆ ಅನುಮತಿ ಕೋರಿದ್ದಾರೆ. ಪುರಾತನ ಸ್ಮಾರಕಗಳು, ಸ್ಥಳಗಳು ಮತ್ತು ವಸ್ತುಗಳ ರಕ್ಷಣೆ ರಾಷ್ಟ್ರೀಯ ಪ್ರಾಮುಖ್ಯತೆ ವಿಚಾರ ಎಂದು ಸಂವಿಧಾನದ ಪರಿಚ್ಛೇದ 49 ಹೇಳುತ್ತದೆ. ಪ್ರತಿಯೊಂದು ಐತಿಹಾಸಿಕ ಸ್ಮಾರಕ ರಕ್ಷಿಸುವುದು ರಾಜ್ಯದ ಜವಾಬ್ದಾರಿ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಇನ್ನು ಪ್ರಕರಣದಲ್ಲಿ ಮಂಗಳಾದೇವಿ ದೇವಾಲಯ ನಿಷೇಧಿತ ಪ್ರದೇಶದಲ್ಲಿ ಹೊಸ ಕಟ್ಟಡ ನಿರ್ಮಿಸಲು ಅರ್ಜಿದಾರರಿಗೆ ಮಂಗಳೂರು ನಗರ ಪಾಲಿಕೆ ಹೇಗೆ ಅನುಮತಿ ನೀಡಿದೆ ಎಂಬುದೇ ಅರ್ಥವಾಗುತ್ತಿಲ್ಲ. ಅದರಲ್ಲೂ ಭಾರತೀಯ ಪುರಾತತ್ವ ಸವೇಕ್ಷಣಾ ಇಲಾಖೆಯನ್ನು ಈ ವಿಚಾರದಲ್ಲಿ ಪರಿಗಣನೆಗೆ ತೆಗೆದುಕೊಂಡಿಲ್ಲ. ಇದು ತೀರಾ ಆತಂಕದ ಸಂಗತಿ. ನಿಷೇಧಿತ ಪ್ರದೇಶ ಕುರಿತ ತಿಳಿವಳಿಕೆ ಕೊರತೆ ಮತ್ತು ಉದಾಸೀನತೆಯಿಂದ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಪ್ರಕರಣದಲ್ಲಿ ನಿಷೇಧಿತ ಪ್ರದೇಶದಲ್ಲಿ ಮನೆ ನಿರ್ಮಿಸಲು ಅರ್ಜಿದಾರರಿಗೆ ಅನುಮತಿ ನೀಡಿರುವ ಪಾಲಿಕೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿದೆ.

ಆಸ್ತಿಪಾಲಿನಿಂದ ಅರ್ಜಿದಾರರಿಗೆ ಬಂದಿದ್ದ ಜಾಗದಲ್ಲಿ ಮನೆ ನಿರ್ಮಿಸಲು 2023ರ ಡಿ.21ರಂದು ಮಂಗಳೂರು ನಗರ ಪಾಲಿಕೆಗೆ ಅನುಮತಿ ನೀಡಿತ್ತು. ಆದರೆ, ಸಂರಕ್ಷಿತ ಮಂಗಳಾದೇವಿ ದೇವಾಲಯ ಸುತ್ತಲಿನ ನಿಷೇಧಿತ ಜಾಗದಿಂದ 64 ಮೀಟರ್‌ ಒಳಗೆ ಮನೆ ನಿರ್ಮಿಸಲಾಗುತ್ತಿದೆ. ಇದರಿಂದ ಕಾಮಗಾರಿ ನಿಲ್ಲಿಸುವಂತೆ ಪುರಾತತ್ವ ಇಲಾಖೆಯು ಅರ್ಜಿದಾರರಿಗೆ 2025ರ ಜ.28ರಂದು ನೋಟಿಸ್‌ ಜಾರಿ ಮಾಡಿತ್ತು. ಅದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

PREV

Recommended Stories

ಕೊಡಗಿನಲ್ಲಿ ಮಳೆಯಬ್ಬರ: ಹಲವು ಕಡೆ ಮನೆಗಳಿಗೆ ಹಾನಿ
ಗ್ರಾಮ ಆಡಳಿತ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಸ್ಪಂದನೆ ಅವಶ್ಯ: ಕೃಷ್ಣ ಬೈರೇಗೌಡ