ಕನ್ನಡಪ್ರಭ ವಾರ್ತೆ ಮೈಸೂರು
ಬರ ಪರಿಸ್ಥಿತಿ ಉಲ್ಬಣಗೊಳ್ಳುತಿದ್ದು, ಕುಡಿಯುವ ನೀರಿನ ಅಭಾವ ಕಂಡುಬರುತ್ತಿರುವ ಜಿಲ್ಲೆಯ 108 ಸಮಸ್ಯಾತ್ಮಕ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚಿಸಿದರು.ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳು, ಗ್ರಾಪಂ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆಯ ಎಂಜಿನಿಯರುಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಜಲ ಮೂಲಗಳ ಸಂರಕ್ಷಣೆ, ನಿರ್ವಹಣೆ ಹಾಗೂ ದುರಸ್ಥಿ ಕಾರ್ಯಗಳನ್ನು ಕೈಗೊಂಡು ಜನ, ಜಾನುವಾರುಗಳಿಗೆ ನೀರು ಒದಗಿಸಬೇಕು ಎಂದು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ರಂಜಿತ್ ಮಾತನಾಡಿ, ನೀರಿನ ಕೊರತೆ ಇರುವ ಕಡೆ 9 ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆಗೆ ತೆಗೆದುಕೊಳ್ಳಲಾಗಿದೆ. ಹಾಗೂ ಕೆಲವು ಹಳ್ಳಿಗಳಿಗೆ ಹಬ್ಬಗಳ ಸಂದರ್ಭದಲ್ಲಿ ಟ್ಯಾಂಕರ್ ನೀರು ಕೊಡಲಾಗಿದೆ. ಪಿರಿಯಾಪಟ್ಟಣದಲ್ಲಿ ಮಾತ್ರ 9 ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ ಎಂದರು.ಜಿಲ್ಲೆಯಲ್ಲಿ ಬೇಕಾಬಿಟ್ಟಿಯಾಗಿ ಕೊಳವೆಬಾವಿಗಳನ್ನ ತೋಡಿಸಲಾಗುತ್ತದೆ ಎಂಬ ಮಾಹಿತಿ ಇದ್ದು, ಸಂಬಂಧಿಸಿದ ಪ್ರಾಧಿಕಾರಗಳ ಅನುಮತಿ ಇಲ್ಲದೆ ಬೋರ್ ವೆಲ್ ಕೊರೆಸುವಂತಿಲ್ಲ. ಗ್ರಾಮ ಪಂಚಾಯತಿ, ಸ್ಥಳೀಯ ಸಂಸ್ಥೆಗಳಿಗೆ 25 ದಿನ ಮುಂಚಿತವಾಗಿ ಅನುಮತಿ ತೆಗೆದುಕೊಳ್ಳಬೇಕು ಹಾಗೂ ಖಾಸಗಿಯವರು ತೋಡಿಸುವ ಕೊಳವೆ ಬಾವಿಗಳು ಸಾರ್ವಜನಿಕ ಕೊಳವೆ ಬಾವಿಗಳಿಗಿಂತ 500 ಮೀ ಅಂತರದಲ್ಲಿ ಇರಬೇಕಾದುದು ಕಡ್ಡಾಯ ಎಂದು ಅವರು ಹೇಳಿದರು.
ವಿಫಲ ಕೊಳವೆ ಬಾವಿ ಮುಚ್ಚಿವಿಫಲ ಕೊಳವೆ ಬಾವಿಗಳನ್ನು ತಕ್ಷಣ ಮುಚ್ಚಲು ಕ್ರಮ ವಹಿಸಿ. ವಿಜಯಪುರದಲ್ಲಿ ಆದಂತಹ ಘಟನೆಗಳು ಎಲ್ಲಿಯೂ ಮರುಕಳಿಸಬಾರದು. ಒಂದು ಗ್ರಾಮಕ್ಕೆ ಕೊಳವೆಬಾವಿ ತೋಡುವ ಲಾರಿ ಪ್ರವೇಶವಾದಾಗಲೇ ಅನುಮತಿ ಪಡೆದಿದ್ದಾರೆಯೇ ಎಂದು ಪರೀಕ್ಷಿಸಬೇಕು. ಒಂದು ವೇಳೆ ಕೊಳವೆಬಾವಿ ವಿಫಲವಾದರೆ ಅದನ್ನು ಸಂಪೂರ್ಣವಾಗಿ ಮುಚ್ಚುವ ಜವಾಬ್ದಾರಿ ಲಾರಿ ಮಾಲೀಕರದೇ ಆಗಿರುತ್ತದೆ. ಒಂದು ವೇಳೆ ಯಾರೂ ವಿಫಲ ಕೊಳವೆ ಬಾವಿ ಮುಚ್ಚದೇ ಅನಾಹುತಗಳು ಸಂಭವಿಸಿದರೆ ಸಂಬಂಧಿಸಿದ ವ್ಯಾಪ್ತಿಯ ಅಧಿಕಾರಿಗಳ ನೇರ ಹೊಣೆಗಾರರನ್ನಾಗಿ ಮಾಡಿ ಅವರ ತಲೆದಂಡವಾಗಲಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ. ನಾಗರಾಜು ಮಾತನಾಡಿ, 3 ರಿಂದ 4 ವಾರಗಳಿಗೆ ಆಗುವಷ್ಟು ಮೇವಿನ ಲಭ್ಯತೆ ಇದ್ದು, ಈಗಾಗಲೇ 36 ಸಾವಿರ ಮೇವಿನ ಕಿಟ್ ನೀಡಲಾಗಿದ್ದು ಮತ್ತೆ 36 ಸಾವಿರ ಕಿಟ್ ಬಂದಿದ್ದು ವಿತರಿಸಲಾಗುವುದು ಎಂದರು.ರೈತ ಮುಖಂಡರುಗಳು ಕೆಲ ಗ್ರಾಮಗಳಲ್ಲಿ ಮೇವಿನ ಕೊರತೆಯಿದೆಯೆಂದು ಹೇಳುತ್ತಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯಿರುವ ಹಳ್ಳಿಗಳಿಗೆ ಭೇಟಿ ನೀಡಿ. ಗಡಿ ಭಾಗಗಳಲ್ಲಿ ಮೇವು ಹೊರ ರಾಜ್ಯಗಳಿಗೆ ಹೋಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬಿಸಿಲಿನ ತೀವ್ರತೆ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ವ್ಯಾಪಕ ಪ್ರಚಾರ ಮಾಡಿಸಿ, ಹೊರಗಿನ ಬೀದಿ ಬದಿಯ ಆಹಾರ ಸೇವಿಸದಂತೆ ಅರಿವು ಮೂಡಿಸಿ, ಹೆಚ್ಚು ನೀರು ಕುಡಿಯುವುದು, ಹತ್ತಿ ಬಟ್ಟೆ ಧರಿಸುವಂತೆ ಮಾಹಿತಿ ನೀಡಿ. ಜನನಿಬಿಡ ಸ್ಥಳಗಳಲ್ಲಿ ಸಂಘ ಸಂಸ್ಥೆಗಳಿಂದ ನೀರಿನ ಅರವಟ್ಟಿಗೆಗಳ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿ ಎಂದು ಅವರು ಹೇಳಿದರು.ಬರ ಪರಿಸ್ಥಿತಿ ಇರುವುದರಿಂದ ಬ್ಯಾಂಕಿನವರು ಸಾಲ ವಸೂಲಾತಿಯಲ್ಲಿ ಅಮಾನವೀಯವಾಗಿ ನಡೆದುಕೊಳ್ಳಬಾರದು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು, ನಗರ ಪಾಲಿಕೆ ಆಯುಕ್ತೆ ಡಾ.ಎಂ.ಎಂ. ಮಧು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.ಮೈಸೂರಲ್ಲಿ 1 ಕಾಲರಾ ಪ್ರಕರಣ ಪತ್ತೆ
ಜಿಲ್ಲೆಯಲ್ಲಿ ಒಂದು ಕಾಲರಾ ಪ್ರಕರಣ ವರದಿಯಾಗಿದ್ದು, ಸುತ್ತಲಿನ 600 ಮನೆಗಳ ತಪಾಸಣೆ ಮಾಡಲಾಗಿದೆ ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಇರಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕುಮಾರಸ್ವಾಮಿ ತಿಳಿಸಿದರು.