ಆರೋಪಿ ಶವ ಸಂಸ್ಕಾರಕ್ಕೆ ಕೊನೆಗೂ ಸಿಕ್ತು ಪರವಾನಗಿ!

KannadaprabhaNewsNetwork |  
Published : Apr 29, 2025, 12:47 AM IST
ಆರೋಪಿ ರಿತೇಶಕುಮಾರ | Kannada Prabha

ಸಾರಾಂಶ

ಏ. 13ರಂದು ರಿತೇಶಕುಮಾರ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯನ್ನು ನಿರ್ಮಾಣ ಹಂತದ ಕಟ್ಟಡದ ಶೌಚಾಲಯದೊಳಗೆ ಹತ್ಯೆ ಮಾಡಿ ಪರಾರಿಯಾಗಿದ್ದ. ಸಾರ್ವಜನಿಕರು ರೊಚ್ಚಿಗೆದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇಡೀ ಊರೆಲ್ಲ ಪ್ರತಿಭಟನೆಗಳು ನಡೆದಿದ್ದವು.

ಹುಬ್ಬಳ್ಳಿ: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ಆರೋಪಿ ರಿತೇಶಕುಮಾರ ಅಂತ್ಯಸಂಸ್ಕಾರಕ್ಕೆ ಕೊನೆಗೂ ಕೋರ್ಟ್‌ ಆದೇಶ ಹೊರಬಂದಿದೆ. ಇದರಿಂದ ಕೆಎಂಸಿಆರ್‌ಐ, ಸಿಐಡಿ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ. ಈ ನಡುವೆ ಈತನ ಮೂಲ ಯಾವುದು? ಕುಟುಂಬಸ್ಥರು ಯಾರು? ಎಂಬುದು ಮಾತ್ರ ಗೊತ್ತೆ ಆಗಿಲ್ಲ.

ಏ. 13ರಂದು ರಿತೇಶಕುಮಾರ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯನ್ನು ನಿರ್ಮಾಣ ಹಂತದ ಕಟ್ಟಡದ ಶೌಚಾಲಯದೊಳಗೆ ಹತ್ಯೆ ಮಾಡಿ ಪರಾರಿಯಾಗಿದ್ದ. ಸಾರ್ವಜನಿಕರು ರೊಚ್ಚಿಗೆದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇಡೀ ಊರೆಲ್ಲ ಪ್ರತಿಭಟನೆಗಳು ನಡೆದಿದ್ದವು.

ಇದರಿಂದ ಪೊಲೀಸರು ಒತ್ತಡಕ್ಕೆ ಮಣಿದಿದ್ದರು. ಜತೆಗೆ ಸಂಜೆ ವೇಳೆಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವುದಕ್ಕಾಗಿ ಆತ ಇದ್ದ ಶೆಡ್‌ ಬಳಿ ಕರೆದುಕೊಂಡು ಹೋಗಿದ್ದರು. ರಾಯನಾಳ ಬ್ರಿಡ್ಜ್‌ ಬಳಿ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರೂ ಈತ ಪರಾರಿಯಾಗುವ ತನ್ನ ಪ್ರಯತ್ನ ಮಾತ್ರ ಮುಂದುವರಿಸಿದ್ದ. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಈತನ ಮೇಲೆ ಗುಂಡು ಹಾರಿಸಿದ್ದರು. ಆಗ ಈತ ಸಾವಿಗೀಡಾಗಿದ್ದ.

ಈ ನಡುವೆ ಈತನ ಶವದ ಅಂತ್ಯಸಂಸ್ಕಾರ ಮಾಡಬಾರದು. ಸಾಕ್ಷ್ಯ ನಾಶವಾಗಬಹುದು ಎಂದು ಕೋರಿ ಬೆಂಗಳೂರು ಹೈಕೋರ್ಟ್‌ನಲ್ಲೇ ಒಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. ಈತನ ಮರಣೋತ್ತರ ಪರೀಕ್ಷೆ ನಡೆಸಿ ಕೋರ್ಟ್‌ ಆದೇಶಕ್ಕಾಗಿ ದಾರಿ ಕಾಯುತ್ತಾ ಕೆಎಂಸಿಆರ್‌ಐ ವೈದ್ಯರು ಹಾಗೂ ಸಿಐಡಿ ಪೊಲೀಸರು ಇರುವ ಅನಿವಾರ್ಯವಿತ್ತು.

ಈ ನಡುವೆ ಶವ ಕೊಳೆಯುತ್ತಾ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರಿಗೆ ಶವ ಡಿಕಂಪೋಸ್‌ ಆಗುತ್ತಿದೆ. ಆದಕಾರಣ ಇದನ್ನು ವಶಕ್ಕೆ ಪಡೆಯಿರಿ ಎಂದು ಪತ್ರ ಕೂಡ ಕೆಎಂಸಿಆರ್‌ಐ ಬರೆದಿತ್ತು. ಸಿಐಡಿ ಪೊಲೀಸರು ಕೂಡ ಶವದ ಸಮಾಧಿ ಮಾಡುವ ಅಗತ್ಯವಿದೆ. ಶವ ಕೊಳೆಯುತ್ತಿದೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದ್ದರು. ಎಲ್ಲವನ್ನು ವಿಚಾರಣೆ ನಡೆಸಿರುವ ಕೋರ್ಟ್‌ ಇದೀಗ ಅಂತ್ಯಸಂಸ್ಕಾರ ಮಾಡಲು ಪರವಾನಗಿ ಕೊಟ್ಟಿದೆ. ಇದರಿಂದ ಸಿಐಡಿ ಪೊಲೀಸರು, ಕೆಎಂಸಿಆರ್‌ಐ ನಿಟ್ಟಿಸಿರು ಬಿಡುವಂತಾಗಿದೆ.

ಯಾರೂ ಸಿಗಲೇ ಇಲ್ಲ: ಈತನ ಎನ್‌ಕೌಂಟರ್‌ ಆಗುವ ಮುನ್ನ ಈತ ತಾನು ಬಿಹಾರದ ಪಾಟ್ನಾದವನು ಎಂದು ಹೇಳಿಕೊಂಡಿದ್ದ. ಕಟ್ಟಡದ ಕೆಲಸ ಮಾಡುತ್ತಿದ್ದೇನೆ ಎಂದಷ್ಟೇ ಹೇಳಿದ್ದನಂತೆ. ಹೀಗಾಗಿ ಈತನ ಕುಟುಂಬಸ್ಥರ ಪತ್ತೆಗಾಗಿ ಪೊಲೀಸರು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಪೊಲೀಸರ ಎರಡ್ಮೂರು ತಂಡಗಳು ಬಿಹಾರ, ಉತ್ತರ ಪ್ರದೇಶ, ಜಾರ್ಖಾಂಡ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲೆಲ್ಲ ಸುತ್ತಾಡಿ ಬಂದಿದೆ. ಆದರೂ ಈತನ ಕುಟುಂಬಸ್ಥರ ಪತ್ತೆ ಮಾತ್ರ ಆಗಿಲ್ಲ. ಹೀಗಾಗಿ ಇದೀಗ ಸಿಐಡಿ ಪೊಲೀಸರೇ ಶವದ ಅಂತ್ಯಸಂಸ್ಕಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶವ ಅಂತ್ಯಸಂಸ್ಕಾರಕ್ಕೆ ಹೈಕೋರ್ಟ್ ಒಪ್ಪಿಗೆ

ಬೆಂಗಳೂರು:

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದು ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿರುವ ಬಿಹಾರ ಮೂಲದ ವಲಸೆ ಕಾರ್ಮಿಕ ರಿತೇಶಕುಮಾರ್‌ ಮೃತದೇಹದ ಅಂತ್ಯ ಸಂಸ್ಕಾರ ಮಾಡಲು ಹೈಕೋರ್ಟ್ ಅನುಮತಿ ನೀಡಿದೆ.

ರಿತೇಶಕುಮಾರ್‌ ಮೃತದೇಹ ಇಡೀ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿದ್ದು, ಮೃತದೇಹ ದಹನ ಮಾಡದಂತೆ ಹಾಗೂ ಶವವನ್ನು ಸಂರಕ್ಷಿಸಿ ಇಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಪಿಯುಸಿಎಲ್ ಸಂಘಟನೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯಪೀಠ ಈ ಆದೇಶ ಮಾಡಿತು. ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು ಹಾಗೂ ಎನ್‌ಕೌಂಟರ್‌ ಬಗ್ಗೆಯೂ ತನಿಖೆ ಆಗಬೇಕು ಎಂಬ ಅರ್ಜಿದಾರರ ಮನವಿ ಸೇರಿ ಇಡೀ ಪ್ರಕರಣದ ಬಗ್ಗೆ ಸಮಗ್ರ ಆದೇಶ ಹೊರಡಿಸಲಾಗುವುದು ಎಂದು ಹೇಳಿ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿತು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?