ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್‌ ವಿಸ್ತರಣೆಗೆ ಅಸ್ತು

KannadaprabhaNewsNetwork | Published : Oct 11, 2023 12:45 AM

ಸಾರಾಂಶ

ಹುಬ್ಬಳ್ಳಿ ಟರ್ಮಿನಲ್‌ ವಿಸ್ತರಣೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, 2024ರ ಜನವರಿಯಲ್ಲಿ ಹೊಸ ಟರ್ಮಿನಲ್ ಕಟ್ಟಡ ಕಾಮಗಾರಿ ಆರಂಭವಾಗಲಿದೆ. 2026ರ ವೇಳೆಗೆ ಹೊಸ ನಿಲ್ದಾಣ ಸಿದ್ಧವಾಗುವ ಸಾಧ್ಯತೆ ಇದೆ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜನರಿಗೆ ಇದು ಸಿಹಿ ಸುದ್ದಿ. ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್‌ ವಿಸ್ತರಣೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಎರಡ್ಮೂರು ವರ್ಷದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಇಲ್ಲಿನ ವಿಮಾನ ನಿಲ್ದಾಣ ವಿಸ್ತರಣೆಯಾಗುವ ನಿರೀಕ್ಷೆಯಿದೆ.

ಕೆಲವು ತಿಂಗಳ ಹಿಂದೆಯಷ್ಟೇ ಕೇಂದ್ರ ಸರಕಾರ ₹260.23 ಕೋಟಿ ವೆಚ್ಚದಲ್ಲಿ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿತ್ತು. ಇದೀಗ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಹೊಸ ಟರ್ಮಿನಲ್ ನೀಲನಕ್ಷೆ ತಯಾರಿಸಿ, ದೇಶಿಯ ವಿಮಾನ ಸೇವೆಗಾಗಿ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. 2024ರ ಜನವರಿಯಲ್ಲಿ ಹೊಸ ಟರ್ಮಿನಲ್ ಕಟ್ಟಡ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ. ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿದರೆ, 2026ರ ವೇಳೆಗೆ ಹುಬ್ಬಳ್ಳಿ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟದ ನಿಲ್ದಾಣವಾಗಿ ರೂಪಗೊಳ್ಳಲಿದೆ.

ಸಾಮರ್ಥ್ಯ ಹೆಚ್ಚಳ:

ಹಳೆಯ ಟರ್ಮಿನಲ್ ಪಕ್ಕದಲ್ಲಿ ಹೊಸ ಟರ್ಮಿನಲ್ ನಿರ್ಮಿಸಲಾಗುವುದು. ಹೊಸ ಟರ್ಮಿನಲ್ 20 ಸಾವಿರ ಚದರ ಮೀಟರ್ (ನೆಲ ಮತ್ತು ಮೊದಲ ಮಹಡಿ) ವಿಸ್ತೀರ್ಣವಿರಲಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಸಮಯದಲ್ಲಿ ಸುಮಾರು 2400 (1200 ಆಗಮನ, 1200 ನಿರ್ಗಮನ) ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಲಿದೆ. ಈಗಿನ ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್ ಪ್ರಯಾಣಿಕರ ದಟ್ಟಣೆ ಸಮಯದಲ್ಲಿ 300 ಪ್ರಯಾಣಿಕರ ನಿರ್ವಹಣೆ ವ್ಯವಸ್ಥೆಯಿದೆ. ವಿಸ್ತರಣೆ ಬಳಿಕ ಈಗಿರುವ ಸಾಮರ್ಥ್ಯ ಎಂಟು ಪಟ್ಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.

ಸೌಲಭ್ಯಗಳು:

ನೂತನ ಟರ್ಮಿನಲ್‌ನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ಸೌಲಭ್ಯಗಳಿರಲಿವೆ. ನೆಲ ಮಹಡಿಯಲ್ಲಿ ಸುರಕ್ಷತಾ ತಪಾಸಣೆಯ ಚೆಕ್ ಇನ್ ಪ್ರದೇಶ, ಲಗೇಜ್ ಪರೀಕ್ಷಣಾ ಪ್ರದೇಶ, ಆಹಾರ ಮತ್ತು ತಂಪು ಪಾನೀಯಗಳ ಮಳಿಗೆ ನಿರ್ಮಿಸಲಾಗುತ್ತದೆ. ಮೊದಲ ಮಹಡಿಯಲ್ಲಿ ಸುರಕ್ಷತಾ ತಪಾಸಣಾ ಪ್ರದೇಶ, ಏರ್ ಸೈಡ್ ಕಾರಿಡಾರ್, ರಿಟೇಲ್ ಅಂಗಡಿ, ಧೂಮಪಾನ ಕೋಣೆ, ಪ್ರಾರ್ಥನಾ ಕೋಣೆ, ರೆಸ್ಟೋರೆಂಟ್, ಗ್ರೀನ್ ಕೋರ್ಟ್‌ ಯಾರ್ಡ್ ಹಾಗೂ ಶೌಚಾಲಯ ಇರಲಿದೆ. ನೆಲ ಮಹಡಿಯಿಂದ ಮೊದಲ ಮಹಡಿಗೆ ಪ್ರಯಾಣಿಕರು ಬರಲು ಅನುಕೂಲವಾಗುವಂತೆ ಎಸ್ಕಲೇಟರ್, ಲಿಫ್ಟ್ ವ್ಯವಸ್ಥೆ ಇರಲಿದೆ.

ಪಾರ್ಕಿಂಗ್ ವ್ಯವಸ್ಥೆ

ಪಾರ್ಕಿಂಗ್‌ನಲ್ಲಿ ಸುಮಾರು 500 ಕಾರು, 10 ಬಸ್, 100 ಟ್ಯಾಕ್ಸಿ, 100 ಬೈಕ್ ಮತ್ತು ಸಿಬ್ಬಂದಿ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಇರುವಂತೆ ಯೋಜನೆ ಸಿದ್ಧಪಡಿಸಲಾಗಿದೆ. ಹೊಸ ಟರ್ಮಿನಲ್‌ ಉದ್ಘಾಟನೆಗೊಂಡ ಬಳಿಕ ದೇಶದ ವಿವಿಧ ನಗರಗಳಿಂದ ಮಹಾನಗರಕ್ಕೆ ಸಂಪರ್ಕ ಕಲ್ಪಿಸುವಲ್ಲಿ ವಿಮಾನ ನಿಲ್ದಾಣ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸುತ್ತಾರೆ.

ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣದ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬರುವ ಹಾಗೂ ಹೋಗುವ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗುವ ನಿರೀಕ್ಷೆ ಇದೆ ಎಂದಿದ್ದಾರೆ.

Share this article