ನರಗುಂದ: ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಅದನ್ನು ನಿರಂತರ ಅಧ್ಯಯನದ ಮೂಲಕ ಸಾರ್ಥಕ ಪಡಿಸಿಕೊಳ್ಳಬೇಕು. ನಿರಂತರ ಪ್ರಯತ್ನವೇ ಯಶಸ್ಸಿಗೆ ದಾರಿಯಾಗಿದೆ ಎಂದು ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ ಹೇಳಿದರು.
ಅವರು ಮಂಗಳವಾರ ಪಟ್ಟಣದ ಲಯನ್ಸ್ ಶಿಕ್ಷಣ ಸಂಸ್ಥೆಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಹೆಚ್ಚು ಅಂಕ ಗಳಿಸಿದ ಹಾಗೂ ಶಾಲೆಯಲ್ಲಿ ಶೇ. 90ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಎಸ್ಸೆಸ್ಸೆಲ್ಸಿ ಶೈಕ್ಷಣಿಕ ಜೀವನದ ಆರಂಭದ ಹಂತ. ಆರಂಭದ ಯಶಸ್ಸು ಗೆಲುವಿಗೆ ಮೂಲವಾಗಿದೆ. ಹೆಚ್ಚು ಅಂಕ ಪಡೆದು ಇದೇ ಪರಂಪರೆಯಲ್ಲಿ ಸಾಗಬೇಕು. ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳು ಮುಂದೆಯೂ ಇದೇ ಯಶಸ್ಸು ಹೊಂಬೇಕು. ಧೈರ್ಯಂ ಸರ್ವತ್ರಂ ಸಾಧನಂ ಎನ್ನುವಂತೆ ಅಂದುಕೊಂಡ ಗುರಿ ಧೈರ್ಯದಿಂದ ಸಾಧಿಸಿ ಉತ್ತಮ ವ್ಯಕ್ತಿಗಳಾಗಿ ರೂಪಿತಗೊಳ್ಳಬೇಕು. ಕಲಿತ ಸಂಸ್ಥೆಗೆ, ಕಲಿಸಿದ ಗುರುಗಳಿಗೆ, ಹೆತ್ತ ತಂದೆ ತಾಯಿಗಳಿಗೆ ಗೌರವ ತಂದಾಗ ವಿದ್ಯಾರ್ಥಿ ಜೀವನ ಸಾರ್ಥಕಗೊಳ್ಳುತ್ತದೆ. ನಮ್ಮ ಶಾಲೆಯ ವಿದ್ಯಾರ್ಥಿಗಳು ತಾಲೂಕಿನಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿರುವುದು ಶ್ಲಾಘನೀಯ. ಇದೇ ರೀತಿಯಲ್ಲಿ ಮುಂದಿನ ವರ್ಷವೂ ಉತ್ತಮ ಫಲಿತಾಂಶ ಬರಲಿ ಎಂದು ಆಶಿಸಿದರು.ನಿವೃತ್ತ ಪ್ರಾಚಾರ್ಯ ಹಾಗೂ ನಿರ್ದೇಶಕ ಸಿ.ಎಸ್.ಸಾಲೂಟಗಿಮಠ ಮಾತನಾಡಿ, ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದಂತೆ ಮುಂದೆಯೂ ಉತ್ತಮ ಅಂಕ ಗಳಿಸಬೇಕು. ಕಾಲೇಜು ಜೀವನ ನಕಾರಾತ್ಮಕ ಚಿಂತನೆಗಳಿಂದ ಕೂಡದೇ ಧನಾತ್ಮಕ ಚಿಂತನೆಗಳೊಂದಿಗೆ ಸಾಗಬೇಕು. ಎಷ್ಟೇ ಕಷ್ಟ ಬಂದರೂ ಅವುಗಳನ್ನು ಮೆಟ್ಟಿ ನಿಂತು ಗುರಿ ಮುಟ್ಟಬೇಕು. ನಮ್ಮ ಸಂಸ್ಥೆಯಲ್ಲಿ ಕಲಿತವರು ಉನ್ನತ ಹುದ್ದೆಗಳೊಂದಿಗೆ ವಿದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ರೀತಿ ಉತ್ತಮ ಭವಿಷ್ಯ ಹೊಂದುವಂತೆ ಸಲಹೆ ಮಾಡಿದರು.
ನಿರ್ದೇಶಕ ಸಿದ್ದನಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರ,ಸಂಸ್ಕೃತಿ ರೂಡಿಸಿಕೊಂಡು ಹೆಚ್ಚಿನ ಅಂಕ ಪಡೆದಿರುವುದು ಹೆಮ್ಮೆ ತಂದಿದೆ. ನಮ್ಮ ಸಂಸ್ಥೆಯ ಕೀರ್ತಿ ಹೆಚ್ಚಿದೆ. ಮುಂದಿನ ವಿದ್ಯಾರ್ಥಿ ಜೀವನದಲ್ಲೂ ಆದರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳಬೇಕೆಂದರು.ಸಮಾರಂಭದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ದಾನೇಶ್ವರಿ ರಾವೂತ್, ದ್ವಿತೀಯ ಸ್ಥಾನ ಪಡೆದ ನೇತ್ರಾ ದಳವಾಯಿ, ತೃತೀಯ ಸ್ಥಾನ ಪಡೆದ ನಿರುಪಮಾ ಚಕ್ರಸಾಲಿ, ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ಕಾವ್ಯ ಮಡಿವಾಳರ, ಶಿವಕುಮಾರ ಬಸವರಡ್ಡಿ, ಶ್ರಿನಿಕಾ ಗುಡಿಸಾಗರ, ಶಶಾಂಕಯ್ಯ ಹಿರೇಮಠ, ರಾಹುಲ್ ಗೊನ್ನಾಗರ, ಅಮೃತಲಕ್ಷ್ಮಿ ಗುಡಿಸಾಗರ, ವರುಣ ಬಡಿಗೇರ, ಸೌಮ್ಯ ನೇಸರಗಿಯವರನ್ನು ಸನ್ಮಾನ ಮಾಡಿ ಅಭಿನಂದಿಸಲಾಯಿತು.
ನಿರ್ದೇಶಕ ಡಾ. ಪ್ರಭು ನಂದಿ, ಬೋಧಕ/ಬೋಧಕೇತರ ಸಿಬ್ಬಂದಿ ಇದ್ದರು. ಮುಖ್ಯೋಪಾಧ್ಯಾಯ ಡಾ. ವೈ.ಪಿ. ಕಲ್ಲನಗೌಡರ ಸ್ವಾಗತಿಸಿದರು. ಡಾ. ಬಸವರಾಜ ಹಲಕುರ್ಕಿ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.