ಕನ್ನಡಪ್ರಭ ವಾರ್ತೆ ಬೆಂಗಳೂರು
ನಮ್ಮ ಮೆಟ್ರೋ ನೇರಳೆ ಮಾರ್ಗದ ಹೈವೋಲ್ಟೇಜ್ ಮೆಟ್ರೋ ಹಳಿಯ ವಯಡಕ್ಟ್ ಮೇಲೆ ವ್ಯಕ್ತಿಯೊಬ್ಬನ ಚಲನವಲನ ಕಂಡುಬಂದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ರೈಲು ಸಂಚಾರ ಸ್ಥಗಿತಗೊಳಿಸಿತು. ಇದರಿಂದ ಸುಮಾರು 20 ನಿಮಿಷ ರೈಲುಗಳಿಲ್ಲದೆ ಪ್ರಯಾಣಿಕರು ಪರಿತಪಿಸಬೇಕಾಯಿತು.ಮಧ್ಯಾಹ್ನ 2.50ರ ಸುಮಾರಿಗೆ ಪಟ್ಟಣಗೆರೆ- ಜ್ಞಾನಭಾರತಿ ನಿಲ್ದಾಣಗಳ ನಡುವೆ ವ್ಯಕ್ತಿಯೊಬ್ಬ ಓಡಾಡುವ ದೃಶ್ಯ ಮೆಟ್ರೋದ ವಿಚಕ್ಷಣಾ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ 3 ಗಂಟೆಯಿಂದ 3.20ರವರೆಗೆ ಮೈಸೂರು ರಸ್ತೆ ಹಾಗೂ ಚಲ್ಲಘಟ್ಟ ನಡುವೆ ಹಳಿಗಳ ವಿದ್ಯುತ್ ಪೂರೈಕೆ ನಿಲ್ಲಿಸಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಪ್ರಯಾಣಿಕರು ಮೆಟ್ರೋ ರೈಲಿಗಾಗಿ ಕಾದು ಹೈರಾಣಾದರು.
ಪ್ರತಿ 10 ನಿಮಿಷಕ್ಕೊಮ್ಮೆ ಬರಬೇಕಾದ ರೈಲು 20 ನಿಮಿಷವಾದರೂ ಬಾರದ ಹಿನ್ನೆಲೆಯಲ್ಲಿ ಕೆಂಗೇರಿ, ಪಟ್ಟಣಗೆರೆ, ನಾಯಂಡಹಳ್ಳಿ, ಕೆಂಗೇರಿ ಟರ್ಮಿನಲ್ ಸೇರಿ ವಿವಿಧ ನಿಲ್ದಾಣಗಳಲ್ಲಿ ಪ್ರಯಾಣಿಕರು ಮೆಟ್ರೋ ರೈಲಿಗಾಗಿ ಕಾದು ನಿಲ್ಲುವಂತಾಯಿತು. ಮೆಟ್ರೋ ಸಿಬ್ಬಂದಿಯನ್ನು ವಿಚಾರಣೆ ಮಾಡಿದರೆ ತಾಂತ್ರಿಕ ದೋಷ ಎಂಬ ಉತ್ತರ ನೀಡಿದರು ಎಂದು ಪ್ರಯಾಣಿಕರು ತಿಳಿಸಿದರು.ಸಿಗದ ವ್ಯಕ್ತಿ:ಕ್ಯಾಮೆರಾದಲ್ಲಿ ವ್ಯಕ್ತಿಯ ಓಡಾಟ ಕಂಡುಬಂತಾದರೂ ಪರಿಶೀಲನೆಗೆ ಮುಂದಾದ ಮೆಟ್ರೋ ಭದ್ರತಾ ಸಿಬ್ಬಂದಿಗೆ ಆತ ಸಿಗಲಿಲ್ಲ ಎಂದು ‘ಕನ್ನಡಪ್ರಭ’ಕ್ಕೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ್ ರಾವ್ ತಿಳಿಸಿದರು.
ವಯಡಕ್ಟ್ ಮೇಲೆ ವ್ಯಕ್ತಿ ನಡೆದು ಹೋಗಿರುವುದರ ಬಗ್ಗೆ ಬಿಎಂಆರ್‌ಸಿಎಲ್ ಸ್ಪಷ್ಟನೆ ಕೊಟ್ಟಿಲ್ಲ. ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ತಪಾಸಣೆ ನಡೆಸಲಾಯಿತು. ಕಳೆದ ಒಂದುವರೆ ಗಂಟೆಯಿಂದ ಅಕ್ಕಪಕ್ಕದ ಮೆಟ್ರೋ ಸ್ಟೇಷನ್‌ನಲ್ಲಿರುವ ಸಿಸಿ ಕ್ಯಾಮೆರಾ ಮತ್ತು ವಯಡಕ್ಟ್ ಬಳಿ ಇರುವ ಸಿಸಿ ಕ್ಯಾಮೆರಾ ತಪಾಸಣೆ ಮಾಡಲಾಗುತ್ತಿದೆ. ಭದ್ರತೆಗಾಗಿ ಜ್ಞಾನಭಾರತಿ ಸ್ಟೇಷನ್ ಮುಂಭಾಗ ಇರುವ ಸರ್ವೀಸ್ ರಸ್ತೆ ಕ್ಲೋಸ್ ಮಾಡಲಾಗಿದೆ. ಆದರೆ, ವಯಡಕ್ಟ್ ಮೇಲೆ ಹೋದಂತೆ ಕಂಡುಬಂದ ವ್ಯಕ್ತಿ ಯಾರೂ ಸಿಗಲಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.