ಕನ್ನಡಪ್ರಭ ವಾರ್ತೆ ಹನೂರು ತಾಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಎಂ ಸಮುದ್ರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹನೂರು ತಾಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ದಶಕಗಳಿಂದಲೂ ಸಹ ಮೂಲಭೂತ ಸೌಲಭ್ಯಗಳಿಗೆ ಮನವಿ ಸಲ್ಲಿಸಿದ್ದರು. ಈ ಭಾಗದ ರೈತರಿಗೆ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಸ್ಪಂದಿಸದೇ ಇರುವುದರಿಂದ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಕಳೆದ ಆರು ದಿನಗಳಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ಲೋಕಸಭಾ ಚುನಾವಣೆಯನ್ನು ಸಹ ಮತ ಬಹಿಷ್ಕಾರ ಹಮ್ಮಿಕೊಂಡಿರುವುದರಿಂದ ಜಿಲ್ಲಾಮಟ್ಟದ ಅಧಿಕಾರಿಗಳು ನಿವಾಸಿಗಳ ಸಮಸ್ಯೆ ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಗುರುಪ್ರಸಾದ್ ಮಾತನಾಡಿ, ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಪಟ್ಟ ಇಲಾಖೆಗೆ ಪತ್ರ ವ್ಯವಹಾರ ಮಾಡಲಾಗಿದೆ ಜೊತೆಗೆ ಚುನಾವಣೆ ಎಂಬುದು ನಿಮ್ಮ ಹಕ್ಕು ಆದುದರಿಂದ ಮತ ಚಲಾಯಿಸಿ ಎಂದು ತಿಳಿಸಿದರು. ಇಲ್ಲಿ ಇರುವ ಸಮಸ್ಯೆಗಳ ಪಟ್ಟಿಯನ್ನು ಮಾಡಿ ಈಗಾಗಲೇ ಕಿರು ಸೇತುವೆಗಳ ಯೋಜನೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಸ್ಥಳೀಯ ಮಟ್ಟದ ಅಧಿಕಾರಿಗಳಿಂದ ಆಗುವ ಕೆಲಸ ಕೂಡಲೇ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಉಳಿದಂತೆ ಇಲ್ಲಿ ಪ್ರತಿಭಟನೆ ಮಾಡುತ್ತಿರುವ ನೀವುಗಳ ನೀಡಿರುವ ಮನವಿಯನ್ನು ಸಹ ಪುರಸ್ಕರಿಸಿ ಕ್ರಮ ಕೈಗೊಳ್ಳಲು ಬಂದಿದ್ದೇವೆ ಆದುದರಿಂದ ಈ ಭಾಗದ ರೈತರು ಜನಸಾಮಾನ್ಯರು ಪ್ರತಿಭಟನೆಯನ್ನು ಕೈ ಬಿಟ್ಟು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತೆ ಮನವೊಲಿಸಿದರು.ಬೇಡಿಕೆ ಈಡೇರದಿದ್ದರೆ ಚುನಾವಣೆ ಬಹಿಷ್ಕಾರ ಎಚ್ಚರಿಕೆ:
ಪ್ರತಿಭಟನಾಕಾರರು ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳ ಜೊತೆ ಮಾತನಾಡಿ ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಟ್ಯಾಂಕರ್ ಗಳಲ್ಲಿ ನೀರಿನ ಸರಬರಾಜು ಮಾಡುವಂತೆ ಜೊತೆಗೆ ಚರಂಡಿಗಳ ಸ್ವಚ್ಛತೆ ಮತ್ತು ಇಲ್ಲಿನ ರೈತರ ಜಮೀನುಗಳು ಪೌತಿ ಖಾತೆ ಆಗದೆ ರೈತರು ಸರ್ಕಾರಿ ಸೌಲತ್ತು ಪಡೆಯಲು ಆಗದೆ ದಿನನಿತ್ಯ ಕಂದಾಯ ಇಲಾಖೆಗೆ ಸುತ್ತುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಗುರುಪ್ರಸಾದ್ ಚುನಾವಣಾ ಮುನ್ನವೇ ಕಂದಾಯ ಅದಾಲತ್ ಹಮ್ಮಿಕೊಳ್ಳುವ ಮೂಲಕ ಗ್ರಾಮದ ರೈತರ ಜಮೀನುಗಳ ಪೌತಿಖಾತೆಯನ್ನು ಮಾಡಿಕೊಡುವ ಬಗ್ಗೆ ರೈತರಿಗೆ ಭರವಸೆ ನೀಡಿದರು. ಇದಕ್ಕೆ ರೈತರು ಸಹ ಸ್ಪಂದಿಸಿದ್ದು ಚುನಾವಣೆ ಮುನ್ನ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮತ್ತೆ ಹನೂರು ಹಾಗೂ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿಯೇ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದರು.ಇದೇ ಸಂದರ್ಭದಲ್ಲಿ ಹನೂರು ಪೊಲೀಸ್ ಇನ್ಸ್‌ಪೆಕ್ಟರ್ ಶಶಿಕುಮಾರ್ ತಾಪಂ ಸಹಾಯಕ ನಿರ್ದೇಶಕ ರವೀಂದ್ರ, ಪಂಚಾಯತ್ ರಾಜ್ ಇಲಾಖೆ ಸಹಾಯಕ ಎಂಜಿನಿಯರ್ ಮಂಜುನಾಥ್, ಆರ್ ಐ ಮಾದೇಶ್ ,ವಿ ಎ ಪುನೀತ್, ಗ್ರಾಪಂ ಕಾರ್ಯದರ್ಶಿ ದೊರೆಸ್ವಾಮಿ ಹಾಗೂ ರೈತ ಮುಖಂಡರಾದ ರಾಜು, ಶಿವಪ್ಪ, ಎಂಟಿ ದೊಡ್ಡಿ ಶ್ರೀನಿವಾಸ್, ಬಿಎಂ ಸಮುದ್ರ ಮೈಕಲ್ ಮಾದೇವ, ಸಿದ್ದರಾಜು ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.