ಕಾಟ ಕೊಡುವ ಪೇಟೆ ವರಾಹ: ಕ್ರಮಕ್ಕೆ ಸಾರ್ವಜನಿಕರ ಆಗ್ರಹ

KannadaprabhaNewsNetwork |  
Published : Aug 10, 2025, 01:34 AM IST
೮ಎಸ್.ಆರ್.ಎಸ್೨ (ಇಲ್ಲಿನ ಟಿಪ್ಪುನಗರದ ಸಾಕು ಹಂದಿಗಳ ಹಿಂಡು) | Kannada Prabha

ಸಾರಾಂಶ

ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಯದಿಂದ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಶಿರಸಿ: ನಗರದಲ್ಲಿ ಸಾಕು ಹಂದಿಗಳ ಕಾಟದಿಂದ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಯದಿಂದ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಕೂಡಲೇ ನಗರಸಭೆ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಂದಿ ಸಾಕಾಣಿಕೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಬನವಾಸಿ ರಸ್ತೆಯ ಟಿಪ್ಪುನಗರದಲ್ಲಿ ಕಳೆದ ಒಂದು ತಿಂಗಳಿನಿಂದ ಹಂದಿಗಳ ಹಾವಳಿ ವಿಪರೀತವಾಗಿದೆ. ಎಲ್ಲಿ ನೋಡಿದರೂ ಕೊಳಚೆ ಜಾಸ್ತಿಯಾಗುತ್ತಿದೆ. ಅನೇಕ ರೋಗಗಳಿಗೆ ದಾರಿಯಾಗಿ, ಸೊಳ್ಳೆಗಳ ಕಾಟವೂ ಹೆಚ್ಚಾಗ ತೊಡಗಿದೆ. ಪಾದಚಾರಿಗಳು ಮತ್ತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಬೆಳಿಗ್ಗೆಯಿಂದಲೇ ರಸ್ತೆಗಿಳಿಯುವ ಹಂದಿಗಳು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿವೆ. ಟಿಪ್ಪುನಗರದಲ್ಲಿ ಸುಮಾರು ೪ ಸಾವಿರ ವಿದ್ಯಾಥಿಗಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕಾರ್ಯ ನಿರ್ವಹಿಸುತ್ತಿವೆ. ರಸ್ತೆಯಲ್ಲಿ ಪ್ರತಿನಿತ್ಯ ಸಾವಿವಾರು ವಿದ್ಯಾರ್ಥಿಗಳು ಓಡಾಡುವ ರಸ್ತೆಯಲ್ಲಿ ಹಂದಿಗಳು ಗುಂಪು ಗುಂಪಾಗಿ ಓಡಾಡಿ ಭಯ ಹುಟ್ಟಿಸುತ್ತಿವೆ.

ಕಳೆದ ಒಂದು ವಾರದಿಂದ ಜ್ವರ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಇದರ ಹಿನ್ನೆಲೆ ನಗರ ಪ್ರದೇಶದಲ್ಲಿ ಶುಚಿತ್ವ ಕಾಪಾಡುವುದು ಅತ್ಯಗತ್ಯವಾಗಿದೆ. ಗಟಾರದಲ್ಲಿ ಬಿದ್ದಿರುವ ತ್ಯಾಜ್ಯವನ್ನು ಚೆಲ್ಲಾಪಿಲ್ಲಿಯಾಗಿ ಮಾಡುವುದರ ಜತೆ ಗಲೀಜು ಹೆಚ್ಚಾಗಲು ಕಾರಣವಾಗಿದೆ. ಕೂಡಲೇ ನಗರಸಭೆ ಹಂದಿಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಶಾಲಾ ಆವರಣ ಹಂದಿಗಳ ಆವಾಸ ತಾಣ:

ಗುಂಪು ಗುಂಪಾಗಿ ಶಾಲಾ ಆವರಣಕ್ಕೆ ಲಗ್ಗೆ ಇಡುವ ಹಂದಿಗಳು ಶಾಲಾ ಪರಿಸರವನ್ನು ಗಬ್ಬು ನಾರುವಂತೆ ಮಾಡುತ್ತಿವೆ. ಶಾಲೆಯ ಪರಿಸರವು ಹಂದಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಶಾಲೆಯಲ್ಲಿ ಮಕ್ಕಳು ಭಯದಿಂದ ಓಡಾಡಬೇಕಾಗಿದೆ. ಸಂಬಂಧಿಸಿವರಿಗೆ ಮಾಹಿತಿ ನೀಡಿದರೂ ಹಂದಿಗಳ ಹಾವಳಿ ಕಡಿಮೆಯಾಗಿಲ್ಲ. ಹಂದಿಗಳನ್ನು ಬೇಕಾಬಿಟ್ಟಿಯಾಗಿ ಅಲೆದಾಡಲು ಬಿಡದೇ ನಗರದ ಹೊರವಲಯದಲ್ಲಿ ಅವುಗಳನ್ನು ಸಾಕಲು ಪರ್ಯಾಯ ವ್ಯವಸ್ಥೆ ಮಾಡಬೇಕು. ಶಾಲಾ ಪರಿಸರದಲ್ಲಿ ಹಂದಿಗಳ ಹಾವಳಿ ಹೀಗೆ ಮುಂದುವರಿದರೆ ನಗರಸಭೆಗೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದೇವೆ ಎಂದು ಪಾಲಕರು ಎಚ್ಚರಿಕೆ ನೀಡಿದ್ದಾರೆ.

ಸಾವಿರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಓಡಾಡುವ ರಸ್ತೆಯಲ್ಲಿ ಹಂದಿಗಳೇ ತುಂಬಿರುತ್ತವೆ. ಕೆಲ ಸಮಯ ವಿದ್ಯಾರ್ಥಿಗಳ ಮೇಲೆಯೂ ಹಂದಿಗಳು ದಾಳಿ ನಡೆಸಿವೆ. ಟಿಪ್ಪುನಗರದ ಪ್ರಾಥಮಿಕ ಶಾಲಾ ಆವಾರದಲ್ಲಿ ಇತ್ತೀಚೆಗೆ ಹಂದಿಯೊಂದು ಸತ್ತು ಕೊಳೆತು ಗಬ್ಬು ನಾರುತ್ತಿತ್ತು. ಅದನ್ನು ತೆರವುಗೊಳಿಸುವಂತೆ ಹಂದಿ ಸಾಕಾಣಿಕೆದಾರರಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪಂಚಾಯತ ವತಿಯಿಂದ ತೆರವುಗೊಳಿಸಿ, ಮಣ್ಣು ಮಾಡಲಾಗಿದೆ. ಸಾಕು ಹಂದಿಗಳ ಕಾಟದಿಂದ ಟಿಪ್ಪುನಗರದ ಜನತೆ ಬೇಸತ್ತು ಹೋಗಿದ್ದಾರೆ. ಈ ಪ್ರದೇಶಕ್ಕೆ ಹಂದಿಗಳನ್ನು ಅಲೆದಾಡಲು ಬಿಡಬೇಡಿ ಎಂದು ವಿನಂತಿಸಿದರೂ ಸ್ಪಂದಿಸುತ್ತಿಲ್ಲ. ಈ ಪ್ರದೇಶ ಹಂದಿಗಳಿಂದ ಮುಕ್ತಿ ಮಾಡಬೇಕು. ಇಲ್ಲವಾದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಜತೆ ಸ್ಥಳೀಯರು ಪ್ರತಿಭಟನೆ ಮಾಡಲು ಸ್ಥಳೀಯರು ನಿರ್ಧರಿಸಿದ್ದಾರೆ ಎಂದು ಕುಳವೆ ಗ್ರಾಪಂ ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

PREV

Recommended Stories

ಸರ್ಕಾರಿ ನೌಕರರ ಸೊಸೈಟಿಗೆ 50.58 ಲಕ್ಷ ಲಾಭ
ಡಿಸಿಸಿ ಬ್ಯಾಂಕ್‌ಗೆ ಅಣ್ಣಾಸಾಹೇಬ್ ಜೊಲ್ಲೆ ಆಯ್ಕೆ ನಿಶ್ಚಿತ