ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಏಕಾಏಕಿ ಒಳಮೀಸಲಾತಿ ವರ್ಗೀಕರಣ ಕುರಿತಾಗಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ನಡೆ ತೀವ್ರ ಖಂಡನೀಯ
ಗದಗ: ಅಸಮರ್ಥನೀಯ ಹಾಗೂ ದತ್ತಾಂಶ ಆಧರಿಸದ ಒಳಮೀಸಲಾತಿ ವರ್ಗೀಕರಣವನ್ನು ಸಚಿವ ಸಂಪುಟ ಸಭೆಯಲ್ಲಿ ತಿರಸ್ಕರಿಸುವಂತೆ ಒತ್ತಾಯಿಸಿ ಕರ್ನಾಟಕ ಸ್ವಾಭಿಮಾನಿ ಭೋವಿ ವಡ್ಡರ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಸ್ವಾಭಿಮಾನಿ ಭೋವಿ ವಡ್ಡರ ವೇದಿಕೆ ಜಿಲ್ಲಾಧ್ಯಕ್ಷ ರಾಘವೇಂದ್ರ ಶಾಂತಗಿರಿ ಮಾತನಾಡಿ, ಪಜಾ ಒಳ ಮೀಸಲಾತಿಯ (ವರ್ಗೀಕರಣ) ಸಂಬಂಧಿಸಿದಂತೆ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ಸಪ್ತಪೀಠವು ತೀರ್ಪು ನೀಡಿದ್ದು ಸರಿಯಷ್ಟೇ ಈ ಬಗ್ಗೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತಾಗಿ ಅವೈಜ್ಞಾನಿಕ, ಅತಾರ್ಕಿಕ ಹಾಗೂ ಅಸಮರ್ಥನೀಯ ದತ್ತಾಂಶ ಆಧರಿಸಿ ಒಳಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿರುವುದು ಸಾಮಾಜಿಕ ನ್ಯಾಯದ ಕಗ್ಗೊಲೆಯಾಗಿದೆ. ಕಾರಣ ಪರಿಶಿಷ್ಟ ಜಾತಿಯ 101 ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಕುರಿತಾದ ಸಮಗ್ರ ಹಾಗೂ ವಸ್ತುನಿಷ್ಟ ಅಂಕಿ-ಅಂಶಗಳ ಕುರಿತಾದ ಕೊರತೆ ಇದ್ದು, ಈ ಬಗ್ಗೆ ವೈಜ್ಞಾನಿಕ ಅಧ್ಯಯನ ಕೈಗೊಳ್ಳದೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಏಕಾಏಕಿ ಒಳಮೀಸಲಾತಿ ವರ್ಗೀಕರಣ ಕುರಿತಾಗಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ನಡೆ ತೀವ್ರ ಖಂಡನೀಯ ಎಂದರು.
ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಗಳ ನಡುವೆ ಒಳಮೀಸಲಾತಿ ಕಲ್ಪಿಸಲು ರಾಜ್ಯದಲ್ಲಿ 101 ಪರಿಶಿಷ್ಟ ಜಾತಿಗಳ ನಡುವಿನ ಮೀಸಲಾತಿ ಹಂಚಿಕೆಯ ಕುರಿತಾದ ಸಮಗ್ರ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಖಾತ್ರಿಪಡಿಸಲು ಸಮರ್ಥನೀಯ ಹಾಗೂ ವೈಜ್ಞಾನಿಕ ದತ್ತಾಂಶ ಕ್ರೋಢಿಕರಿಸಿ, ವಿಶ್ಲೇಷಿಸಿ ತಜ್ಞರ ವರದಿ ಪಡೆದು ಕೊಳ್ಳದ ಹೊರತು. ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದಂತೆ ರಾಜ್ಯದ ದಮನಿತ ಹಾಗೂ ಅವಕಾಶ ವಂಚಿತ ಭೋವಿ ವಡ್ಡರ ಸಮುದಾಯ ಸೇರಿದಂತೆ ಅಲೆಮಾರಿ, ಬಂಜಾರ ಭೋವಿ ಕೊರಮ- ಕೊರಚ-ಕೊರವ ಸಮುದಾಯಗಳ ಪರವಾಗಿ ಸರ್ಕಾರ ಒತ್ತಾಯಿಸಿದ್ದೇವೆ ಎಂದರು.
ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರವು ಏಕಾಏಕಿ ಪಜಾ ಒಳಮೀಸಲಾತಿಯ ಕುರಿತಂತೆ ಅಸಮರ್ಥನೀಯ ಹಾಗೂ ಅತಾರ್ಕಿಕ ದತ್ತಾಂಶ ಆಧರಿಸಿ ಯಾವುದೇ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಬಾರದೆಂದು ಒತ್ತಾಯಿಸಿದರು.
ಈ ವೇಳೆ ಅನಿಲ ಶಾಂತಗಿರಿ, ಸುಧೀರ ಶಾಂತಗಿರಿ, ಚಂದ್ರಕಾಂತ ಚವ್ಹಾಣ, ವಿಜಯ ಪೂಜಾರ ಸೇರಿದಂತೆ ಮುಖಂಡರು, ಯುವಕರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.