ಗದಗ: ಗ್ರಾಪಂ ನೌಕರರಿಗೆ ಕನಿಷ್ಠ ವೇತನ ₹೩೧ ಸಾವಿರ ನಿಗದಿ ಮಾಡಿ, ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಗ್ರಾಪಂ ನೌಕರರ ಸಂಘ (ಸಿ.ಐ.ಟಿ.ಯು ಸಂಯೋಜಿತ) ಜಿಲ್ಲಾ ಸಮಿತಿ ವತಿಯಿಂದ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಈ ವೇಳೆ ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಂತೂರ ಮಾತನಾಡಿ, ರಾಜ್ಯ ಸರ್ಕಾರವು ಗ್ರಾಪಂ ನೌಕರರಿಗೆ ೨೮-೭-೨೦೨೨ರಲ್ಲಿ ನಿಗದಿಪಡಿಸಿದ ಕನಿಷ್ಠ ವೇತನವನ್ನು ೨೬-೯-೨೦೨೩ ರಂದು ಕರ್ನಾಟಕ ಉಚ್ಛ ನ್ಯಾಯಾಲಯ ರದ್ದು ಮಾಡಿ, ರೆಪ್ತಕೋಶ್‌ಬ್ರೆಟ್ ಕೇಸಿನಲ್ಲಿ ಸುಪ್ರಿಂಕೋರ್ಟ್ ನಿಗದಿಪಡಿಸಿದ ಮಾರ್ಗಸೂಚಿ ಅನುಸರಿಸಿ ಕನಿಷ್ಠ ವೇತನ ನಿಗದಿಪಡಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಸಂಘವು ನ್ಯಾಯಾಲಯದ ಆದೇಶ ಜಾರಿ ಮಾಡುವಂತೆ ಹೋರಾಟ ರೂಪಿಸಿದ ಮೇಲೆ ಕಾರ್ಮಿಕ ಸಚಿವರು ಮತ್ತು ಅಧಿಕಾರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ.ಸರ್ಕಾರ ಮೀನ ಮೇಷ ಎಣಿಸದೆ ತಕ್ಷಣ ಕನಿಷ್ಠ ವೇತನ ₹೩೧ ಸಾವಿರ ನೀಡಬೇಕೆಂದು ಒತ್ತಾಯಿಸಿದರು.ರಾಜ್ಯದ ಗ್ರಾಪಂಗಳಲ್ಲಿ ಕರ ವಸೂಲಿಗಾರ, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಜವಾನ, ನೀರುಗಂಟಿ, ಸ್ವಚ್ಛತಾಗಾರರು ಇತ್ಯಾದಿ ನೌಕರರು ಗ್ರಾಪಂಗಳು ಆರಂಭವಾದ ಕಾಲದಿಂದಲೂ ಕನಿಷ್ಟ ಕೂಲಿ ಹೊರತುಪಡಿಸಿ ಬೇರೆ ಯಾವುದೇ ಸೌಲಭ್ಯವಿಲ್ಲದೆ ತಮ್ಮ ಜೀವಮಾನವೇ ದುಡಿದು ನಿವೃತ್ತಿಯಾದಾಗ ಇಳಿ ವಯಸ್ಸಿನಲ್ಲಿ ಜೀವನ ನಡೆಸುವುದಕ್ಕೆ ಬಹಳ ದುಸ್ಥರವಾಗಿರುವುದರಿಂದ ಸರ್ಕಾರವೇ ಪಿಂಚಣಿ ನೀಡಲು ಒಂದು ಆಯೋಗ ರಚನೆ ಮಾಡಿತ್ತು. ಆ ಸಮಿತಿಯು ವರದಿ ಇಲಾಖೆಗೆ ನೀಡಿದೆ. ಆ ವರದಿ ಮೇಲೆ ಸಂಘದ ಜತೆ ಚರ್ಚೆ ನಡೆದಿದ್ದರೂ ಜಾರಿಯಾಗಿಲ್ಲ ತಕ್ಷಣ ಪಿಂಚಣಿ ಜಾರಿ ಮಾಡಬೇಕು. ಇದರ ಜತೆಗೆ ಸೇವಾ ಹಿರಿತನದ ವೇತನ ಹೆಚ್ಚಳ, ಆರೋಗ್ಯ ವಿಮೆ, ಐಪಿಡಿ ಸಾಲಪ್ಪ ವರದಿಯಂತೆ ಸ್ವಚ್ಛತಾಗಾರರ ನೇಮಕ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು, ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರ ಪರವಾದ ತರಬೇಕು. ರೈತ ವಿರೋಧಿ ಕೃಷಿ ಕಾಯ್ದೆ ವಾಪಸ್ ಪಡೆಯಬೇಕು. ರೈತ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಬೇಕು. ರಸಗೊಬ್ಬರ ಒಳಗೊಂಡಂತೆ ಕೃಷಿ ಹಿಡುವಳಿಗಳಿಗೆ ಸಬ್ಸಿಡಿ ಕಡಿತಗೊಳಿಸುವ ನೀತಿ ಕೈಬಿಡುವುದು. ರೈಲ್ವೆ, ವಿದ್ಯುತ್ ಸೇರಿದಂತೆ ಎಲ್ಲ ಕ್ಷೇತ್ರವನ್ನು ಎಲ್ಲ ಸ್ವರೂಪದ ಖಾಸಗೀಕರಣ ಕೈಬಿಡಬೇಕು. ಗ್ರಾಪಂ ನೌಕರರಿಗೆ ಕನಿಷ್ಠ ವೇತನ ₹೩೧ ಸಾವಿರ ನಿಗದಿ ಮಾಡಬೇಕು. ಕನಿಷ್ಠ ಪಿಂಚಣಿ ₹ ೬ ಸಾವಿರ ನಿಗದಿಸುವುದು ಸೇರಿದಂತೆ ಇನ್ನೂ ಹಲವು ಬೇಡಿಕೆ ಈಡೇರಿಸಬೇಕೆಂದು ಮನವಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಸಂಚಾಲಕ ಮಹೇಶ ಹಿರೇಮಠ, ರುದ್ರಪ್ಪ ಕಂದಗಲ್, ಚಂದ್ರು ಉಪಾಧ್ಯಾ, ಬಸವರಾಜ ಮೇವುಂಡಿ, ಮಲ್ಲೇಶ ಪ್ಯಾಬಿ, ಈಶ್ವರ ದಮಾನಿ, ರುದ್ರಪ್ಪ ಐನಾಪೂರ, ರಮೇಶ ವಾಸನ್, ವೀರನಗೌಡ ಪಾಟೀಲ, ಮುತ್ತಣ್ಣ ಅರಹುಣಸಿ, ಬಸವರಾಜ ಅರ್ಕಸಾಲಿ, ಮಹೇಶ ಮೂಲಿಮನಿ, ಪ್ರಕಾಶ, ದೇವಪ್ಪ ಕಲಮನಿ, ಬಸಯ್ಯ ಜಂಗಮಠ, ಮರಲಿಂಗಪ್ಪ ಮುತಾರಿ, ಪ್ರಕಾಶ ನರೇಗಲ್ ಸೇರಿದಂತೆ ಜಿಲ್ಲೆಯ ಗ್ರಾಪಂ ನೌಕರರು ಉಪಸ್ಥಿತರಿದ್ದರು.