ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಕೆ

KannadaprabhaNewsNetwork |  
Published : Oct 22, 2024, 12:19 AM IST
ಪೋಟೊ- ೨೧ ಎಸ್.ಎಚ್.ಟಿ. ೨ಕೆ- ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ಬೆಳೆಹಾನಿ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಜಾಪರ ವೇದಿಕೆ ತಾಲೂಕ ಘಟಕದವತಿಯಿಂದ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕಳೆದ ವರ್ಷದಲ್ಲಿ ತಾಲೂಕಿನ ಬಹುತೇಕ ರೈತರಿಗೆ ಬೆಳೆಹಾನಿ ಪರಿಹಾರ ದೊರೆತಿಲ್ಲ ಎಂದು ಕರ್ನಾಟಕ ಪ್ರಜಾಪರ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಹಸನ ತಹಸೀಲ್ದಾರ್ ಹೇಳಿದರು.

ಶಿರಹಟ್ಟಿ: ಬೆಳೆಹಾನಿ ಪರಿಹಾರಕ್ಕೆ (ಇನ್‌ಪುಟ್ ಸಬ್ಸಿಡಿ) ಆಗ್ರಹಿಸಿ ಸೋಮವಾರ ತಹಸೀಲ್ದಾರ್ ಅನಿಲ ಬಡಿಗೇರ ಅವರ ಮೂಲಕ ಸರ್ಕಾರಕ್ಕೆ ಕರ್ನಾಟಕ ಪ್ರಜಾಪರ ವೇದಿಕೆ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಜಾಪರ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಹಸನ ತಹಸೀಲ್ದಾರ್ ಮಾತನಾಡಿ, ರೈತರು ಮುಂಗಾರು ಬಿತ್ತನೆಯಲ್ಲಿ ಸಾಲ ಶೂಲ ಮಾಡಿ ಹಬ್ಬುಶೇಂಗಾ, ಮೆಕ್ಕೆಜೋಳ, ಹತ್ತಿ, ತೊಗರಿ, ಈರುಳ್ಳಿ ಬಿತ್ತನೆ ಮಾಡಿದ್ದು, ಸಧ್ಯ ಬೆಳೆಗಳು ಕಟಾವಿಗೆ ಬಂದಿವೆ. ಹಗಲು ರಾತ್ರಿ ಎನ್ನದೇ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ಫಸಲು ಕೈಗೆ ಬರುವಷ್ಟರಲ್ಲಿ ಹಾನಿಯಾಗಿದೆ. ರೈತರು ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟ ಎದುರಿಸುವಂತಾಗಿದೆ.

ಕಳೆದ ವರ್ಷದಲ್ಲಿ ತಾಲೂಕಿನ ಬಹುತೇಕ ರೈತರಿಗೆ ಬೆಳೆಹಾನಿ ಪರಿಹಾರ ದೊರೆತಿಲ್ಲ. ಈ ಯೋಜನೆಯಿಂದ ರೈತರು ಸೌಲಭ್ಯವಂಚಿತರಾಗುತ್ತಿದ್ದಾರೆ. ಸತತ ಬರಗಾಲ, ಅತಿವೃಷ್ಟಿ, ಅನಾವೃಷ್ಟಿಯಿಂದ ತತ್ತರಿಸಿರುವ ರೈತರಿಗೆ ಸರಕಾರ ಕೊಡುವ ಸೌಲಭ್ಯಗಳು ಮುಟ್ಟುತ್ತಿಲ್ಲ ಎಂದು ದೂರಿದರು.

ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್‌ಗಳನ್ನು ಸರಕಾರದ ಆದೇಶದ ಪ್ರಕಾರ ನಿಗದಿತ ಸಮಯಕ್ಕೆ ತಲುಪಿಸಿದ್ದರೂ ಸಮಯ ಮುಗಿದಿದೆ, ನಿಮಗೆ ಪರಿಹಾರ ಸಿಗುವುದಿಲ್ಲ ಎಂದು ಹೇಳುವುದು ಸಾಮಾನ್ಯವಾಗಿದೆ. ಈ ಬಾರಿಯಾದರು ಸಮಯಕ್ಕೆ ಸರಿಯಾಗಿ ಸಮೀಕ್ಷೆ ಕೈಗೊಂಡು ಶೀಘ್ರವೇ ಬೆಳೆಹಾನಿ ವಿತರಿಸಬೇಕು ಎಂದು ಮನವಿ ಮಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಮನೆಗಳು ಸೋರಲಾರಂಭಿಸಿವೆ. ಮಳೆಯಿಂದ ಅಪಾರ ಬೆಳೆಹಾನಿ, ಮನೆಗಳ ಹಾನಿಯಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಸರ್ಕಾರ ಬೆಳೆನಷ್ಟ ಪರಿಹಾರ ಹಾಗೂ ಮನೆಗಳಿಗೆ ಪರಿಹಾರ ಮಂಜೂರ ಮಾಡಬೇಕೆಂದು ಒತ್ತಾಯಿಸಿದರು.

ಕಳೆದ ೧೫-೨೦ ದಿನಗಳಿಂದ ಹಗಲು ತಪ್ಪಿದರೆ ರಾತ್ರಿ ಮಳೆ ಸುರಿಯುತ್ತಲಿದೆ. ವಿಪರೀತ ಮಳೆಯಿಂದ ರೈತ ಸಮುದಾಯ ತತ್ತರಿಸಿ ಹೋಗಿದ್ದು, ರೈತಪರ ಎಂದು ಹೇಳುತ್ತಿರುವ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ವ್ಯಾಪಕ ಮಳೆಯಿಂದಾಗಿ ಬೆಳೆ ಹಾಗೂ ಮನೆಗಳು ಹಾಳಾಗಿ ರೈತರು ಸಂಕಷ್ಟದಲ್ಲಿದ್ದಾರೆ. ತುರ್ತು ಪರಿಹಾರ ನೀಡುವಂತೆ ಮನವಿ ಮಾಡಿದರು.

ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ಮಾಡಿಸಿ ಸೂಕ್ತ ಪರಿಹಾರ ವಿತರಿಸುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದರು. ಸರ್ಕಾರದ ಪರವಾಗಿ ತಹಸೀಲ್ದಾರ್ ಅನಿಲ ಬಡಿಗೇರ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರ ಕಳುಹಿಸಿಕೊಡುವ ಭರವಸೆ ನೀಡಿದರು.

ಈ ವೇಳೆ, ಅಜ್ಜಪ್ಪ ಬಿಡವೆ, ಸುನೀಲ ಸರ್ಜಾಪೂರ, ಶಿವಾನಂದ ಸುಲ್ತಾನಪೂರ, ಸತೀಶ ನರಗುಂದ ಸೇರಿ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ