ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಕುರಿತು ದೂರುದಾರೆಯ ಪುತ್ರನಾದ ಬೆಂಗಳೂರಿನ ಬೇಗೂರು ನಿವಾಸಿ ಶಶಾಂಕ್ ಸಿಂಗ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿ, ನಗರ ಪೊಲೀಸ್ ಆಯುಕ್ತರು, ಸಿಐಡಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಪ್ರಕರಣದಲ್ಲಿ ಆರೋಪಿಯೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪ್ರತಿವಾದಿ ಮಾಡಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಅರ್ಜಿದಾರರ ಮನವಿ ಏನು?:ಪ್ರಕರಣದಲ್ಲಿ 17 ವರ್ಷದ ಸಂತ್ರಸ್ತೆಯು ನನ್ನ ಸಹೋದರಿಯಾಗಿದ್ದು, ದೂರುದಾರೆ ತಾಯಿಯಾಗಿದ್ದಾರೆ. ಸಂತ್ರಸ್ತೆಯು ತಾಯಿ ಜೊತೆಗೆ 2024ರ ಫೆ.2ರಂದು ಸಹಾಯ ಕೇಳಿಕೊಂಡು ಬೆಂಗಳೂರಿನ ಆರ್‌ಎಂವಿ 2ನೇ ಹಂತದಲ್ಲಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಹೋಗಿದ್ದರು. ಈ ವೇಳೆ ಯಡಿಯೂರಪ್ಪ ಸಂತ್ರಸ್ತೆಯನ್ನು ಕೈ ಹಿಡಿದು ಕೊಠಡಿಯೊಂದಕ್ಕೆ ಕರೆದೊಯ್ದಿದ್ದರು. ವಿಚಾರಿಸುವ ನೆಪದಲ್ಲಿ ಸಂತ್ರಸ್ತೆಯ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ಪ್ರಕರಣವನ್ನು ಸಿಬಿಐಗೆ ವಹಿಸಲು ಕೋರಿ ಏ.2ರಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಏ.29ರಂದು ರಾಜ್ಯ ಮಹಿಳಾ ಆಯೋಗ ಅವರಿಗೆ ಡಾ.ನಾಗಲಕ್ಷ್ಮಿ ಪತ್ರ ನೀಡಿ ಯಡಿಯೂರಪ್ಪ ಅವರನ್ನು ಬಂಧಿಸಲು ಕೋರಿದ್ದರು. ಮೇ 20ರಂದು ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್ ಅವರಿಗೆ ಪತ್ರ ನೀಡಿದ್ದಾರೆ. ನನಗೆ ತಿಳಿದಿರುವಂತೆ ಮಾ.26ರಂದು 25ನೇ ಎಸಿಎಂಎಂ ನ್ಯಾಯಾಲಯವು ಸಂತ್ರಸ್ತೆಯ ಸ್ವಯಂಕೃತ ಹೇಳಿಕೆ ದಾಖಲಿಸಿಕೊಂಡಿದೆ. ತನಿಖಾಧಿಕಾರಿಯು ಧ್ವನಿ ದಾಖಲೆಗೊಂಡಿದ್ದ ಮೊಬೈಲ್ ಜಪ್ತಿ ಮಾಡಿದ್ದಾರೆ. ತನಿಖಾಧಿಕಾರಿಯು ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿದ್ದು, ಅವರ ಧ್ವನಿ ಮಾದರಿಯನ್ನೂ ಸಂಗ್ರಹಿಸಿದ್ದಾರೆ. ದೂರು ದಾಖಲಾಗಿ ಎರಡು ತಿಂಗಳು ಕಳೆದರೂ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ. ಕೊನೆಪಕ್ಷ ವಿಚಾರಣೆಗೆ ಹಾಜರಾಗಲು ಸೂಚಿಸಿ ಪೋಕ್ಸೋ ಕಾಯ್ದೆ ಸೆಕ್ಷನ್ 41(ಎ) ಅಡಿಯಲ್ಲಿ ನೋಟಿಸ್ ಸಹ ನೀಡಿಲ್ಲ ಎಂದು ಆರೋಪಿಸಿದ್ದಾರೆ.