ವಿದ್ಯಾರ್ಥಿಗಳ, ಸಾರ್ವಜನಿಕರ ಬೇಸರ । ಶೀಘ್ರ ಆರಂಭಗೊಳ್ಳಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರಬಿ.ರಾಮಪ್ರಸಾದ್ ಗಾಂಧಿ
ಕಳೆದ ಒಂದು ವರ್ಷದ ಹಿಂದೆ ಹರಪನಹಳ್ಳಿ ಪಟ್ಟಣದಲ್ಲಿ ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಅಧೀನದಲ್ಲಿ ಉದ್ಘಾಟನೆಗೊಂಡಿದ್ದ ನೂತನ ಸ್ನಾತಕೋತ್ತರ ಅಧ್ಯಯನ ಕೇಂದ್ರ ಈವರೆಗೂ ಆರಂಭಗೊಂಡಿಲ್ಲ. ಇದು ವಿದ್ಯಾರ್ಥಿಗಳ, ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.
ಪಟ್ಟಣದ ಹೊಸಪೇಟೆ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿಗದಿತ ಸ್ಥಳದಲ್ಲಿ ಕಳೆದ ವರ್ಷ ಫೆ.29 ರಂದು ಸ್ಥಳೀಯ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹಾಗೂ ಅಂದಿನ ವಿವಿಯ ಕುಲಪತಿ ಪ್ರೊ. ಅನಂತ ಎಲ್. ಝಂಡೇಕರ್ ಮತ್ತು ಸಿಂಡಿಕೇಟ್ ಸದಸ್ಯರು ಪಿಜಿ ಸೆಂಟರ್ ಕಾರ್ಯಾಲಯ ಉದ್ಘಾಟಿಸಿದ್ದರು.ಇನ್ನು ನಾಲ್ಕು ದಿವಸಕ್ಕೆ ಬರೊಬ್ಬರಿ ಪಿಜಿ ಸೆಂಟರ್ ಉದ್ಘಾಟನೆಗೊಂಡು ಒಂದು ವರ್ಷ ಪೂರೈಸಲಿದೆ. ಆದರೆ ಇನ್ನೂ ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಿಸದೆ ಕಾರ್ಯಾಲಯಕ್ಕೆ ಬೀಗ ಹಾಕಲಾಗಿದೆ.
ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ಬಿಟ್ಟರೆ ಸಂಡೂರಿನಲ್ಲಿ ಮಾತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಿವೆ. ಅದರಲ್ಲೂ ಸಂಡೂರಿನಲ್ಲಿ ಇಲ್ಲದ ವಿಷಯಗಳನ್ನು ಹರಪನಹಳ್ಳಿಯಲ್ಲಿ ತೆರೆಯಲು ಯೋಜನೆ ರೂಪಿಸಲಾಗಿದೆ.
ಆದರೆ ಸ್ನಾತಕೋತ್ಸರ ಅಧ್ಯಯನ ಕೇಂದ್ರ ಆರಂಭ ವಿಳಂಬವಾಗುತ್ತಿರುವುದರಿಂದ ಸ್ನಾತಕೋತ್ತರ ಶಿಕ್ಷಣ ಪಡೆಯುವ ನಿರೀಕ್ಷೆ ಹೊಂದಿದ ತಾಲೂಕಿನ ಬಡವಿದ್ಯಾರ್ಥಿಗಳಿಗೆ ಅತ್ಯಂತ ನಿರಾಸೆ ಆಗಿದೆ.
ಹಣಕಾಸು ಇಲಾಖೆಯವರು ಹರಪನಹಳ್ಳಿಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಗತ್ಯತೆ ಇದೆಯೇ, ಅಗತ್ಯ ಕಟ್ಟಡವಿದೆಯಾ ಸೇರಿದಂತೆ ಮೂರು ಅಂಶಗಳ ವರದಿಯನ್ನು ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯಕ್ಕೆ ಕೇಳಿದ್ದಾರೆ ಎಂದು ವಿವಿ ಮೂಲಗಳು ತಿಳಿಸಿವೆ.
ಹರಪನಹಳ್ಳಿಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆರೆಯಲು ಈಗಾಗಲೇ ವಿವಿ ಹಾಗೂ ಉನ್ನತ ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿದೆ. ಹಣಕಾಸು ಇಲಾಖೆ ಅನುಮತಿ ಬಾಕಿ ಇದೆ. ಶೀಘ್ರ ಹಣಕಾಸು ಇಲಾಖೆ ಒಪ್ಪಿಗೆ ನೀಡುವ ನಿರೀಕ್ಷೆ ಇದೆ ಎಂದು ಶಾಸಕಿ ಎಂ.ಪಿ. ಲತಾಮಲ್ಲಿಕಾರ್ಜುನ ತಿಳಿಸಿದ್ದಾರೆ.