ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ
ಕನ್ನಡಪ್ರಭ ವಾರ್ತೆ ಕುಷ್ಟಗಿ
ಪಟ್ಟಣದ ತಾಲೂಕು ಆಸ್ಪತ್ರೆಯ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಆಸ್ಪತ್ರೆಯ ಸಹಯೋಗದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಎಲ್ಲರಿಗೂ ಕೆಲಸದ ಒತ್ತಡ, ಚಿಂತೆ, ಸಮಸ್ಯೆಗಳು ಇರುತ್ತವೆ. ಇವುಗಳು ಜೀವನದ ಒಂದು ಭಾಗಗಳಾಗಿವೆ. ಈ ಎಲ್ಲ ಕೆಲಸಗಳನ್ನು ಸಮರ್ಪಕವಾಗಿ ನಿಭಾಯಿಸಲು ಕಲಿಯಬೇಕು. ದಿನನಿತ್ಯ ಬೆಳಗ್ಗೆ ವ್ಯಾಯಾಮ, ಯೋಗ ಮಾಡಬೇಕು, ಆತ್ಮೀಯರೊಂದಿಗೆ ಮಾತನಾಡುವುದು, ಹಸಿರು ವಾತಾವರಣದಲ್ಲಿ ಕಾಲ ಕಳೆಯುವುದು, ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆ ಮಾಡಬೇಕು ಅಂದಾಗ ಮಾತ್ರ ಒತ್ತಡ ನಿಭಾಯಿಸಬಹುದಾಗಿದೆ ಎಂದರು.
ಪ್ರತಿ ತಿಂಗಳ 2ನೇ ಮಂಗಳವಾರ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು. ಜೊತೆಗೆ ಕೌನ್ಸೆಲಿಂಗ್ ಮಾಡಲಾಗುತ್ತದೆ. ಅಂತಹವರು ಆಸ್ಪತ್ರೆಗೆ ಆಗಮಿಸಿ ಸೂಕ್ತ ಚಿಕಿತ್ಸೆ ಹಾಗೂ ಮಾರ್ಗದರ್ಶನ ಪಡೆದುಕೊಳ್ಳಬೇಕು. ಮಾನಸಿಕ ಕೆಲಸದ ಒತ್ತಡದ ಸಮಯದಲ್ಲಿ ಸಮಯಪ್ರಜ್ಞೆ ಬಹಳ ಮುಖ್ಯವಾಗಿದೆ. ಮಾನಸಿಕ ಆರೋಗ್ಯಕ್ಕೆ ರಾತ್ರಿ ಆಳವಾದ ನಿದ್ದೆ, ಉತ್ತಮ ಊಟ, ಸಮತೋಲಿತ ಆಹಾರ ಸೇವಿಸಿ, ಯೋಗ, ವ್ಯಾಯಾಮ ಮತ್ತು ಧ್ಯಾನ ಮಾಡುವುದರಿಂದ ಮಾನಸಿಕ ರೋಗಗಳಿಂದ ದೂರವಿರಬಹುದು ಎಂದರು.
ಈ ಸಂದರ್ಭ ವಕೀಲರ ಸಂಘದ ಅಧ್ಯಕ್ಷ ಎಸ್.ಜಿ. ಪಾಟೀಲ, ಅಪರ ಸರ್ಕಾರಿ ವಕೀಲ ಪರಸಪ್ಪ ಗುಜಮಾಗಡಿ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಬಾಲಾಜಿ ಬಳಿಗಾರ, ನ್ಯಾಯಾಲಯದ ಸಿಬ್ಬಂದಿ ಸುನೀಲ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.