ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ದೈಹಿಕ ಆರೋಗ್ಯ ತಪಾಸಣೆ ಪೂರಕ: ದುರುಗಪ್ಪ

KannadaprabhaNewsNetwork | Published : Nov 16, 2024 12:37 AM

ಸಾರಾಂಶ

ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅವರ ದೈಹಿಕ ಆರೋಗ್ಯ ವೈದ್ಯಕೀಯ ತಪಾಸಣಾ ಶಿಬಿರಗಳು ಸಹಕಾರಿ ಆಗಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ ಅಭಿಪ್ರಾಯಪಟ್ಟರು.

- ದೊಗ್ಗಳ್ಳಿ ಪಿಎಂಶ್ರೀ ಶಾಲೆಯಲ್ಲಿ ಮಕ್ಕಳ ದಿನಾಚರಣೆ - - - ಹರಿಹರ: ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅವರ ದೈಹಿಕ ಆರೋಗ್ಯ ವೈದ್ಯಕೀಯ ತಪಾಸಣಾ ಶಿಬಿರಗಳು ಸಹಕಾರಿ ಆಗಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ ಅಭಿಪ್ರಾಯಪಟ್ಟರು.

ತಾಲೂಕಿನ ದೊಗ್ಗಳ್ಳಿಯ ಪಿಎಂಶ್ರೀ ಶಾಲೆಯಲ್ಲಿ ಗುರುವಾರ ನಡೆದ ಆರೋಗ್ಯ ತಪಾಸಣೆ ಮತ್ತು ಮಕ್ಕಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ ಯೋಜನೆ ಭಾಗವಾಗಿ ಪ್ರತಿ ಮಗುವಿನ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ ಎಂದರು.

ಮಕ್ಕಳ ದಿನಾಚರಣೆಯಂದೇ ಮಕ್ಕಳ ಆರೋಗ್ಯ ತಪಾಸಣೆ ನಡೆಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು ಮಕ್ಕಳ ದೈಹಿಕ ಆರೋಗ್ಯ ಮತ್ತು ಶೈಕ್ಷಣಿಕ ಪ್ರಗತಿಗೆ ಇಂಥಹ ಅನೇಕ ಯೋಜನೆ ರೂಪಿಸಿದ್ದರು ಎಂದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಚಂದ್ರಪ್ಪ ಮಾತನಾಡಿ, ದೊಗ್ಗಳ್ಳಿ ಶಾಲೆಗೆ ಪಿಎಂಶ್ರೀ ಯೋಜನೆ ಹರಿಹರ ತಾಲೂಕಿನಲ್ಲೇ ಪ್ರಥಮವಾಗಿ ಲಭಿಸಿದೆ. ಈ ಯೋಜನೆಯಿಂದ ಮೂಲಸೌಲಭ್ಯಗಳು ದೊರಕಲಿವೆ. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಇದರಿಂದ ಅನುಕೂಲ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯೋಪಾಧ್ಯಾಯ ಎಚ್.ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ವೈದ್ಯ ವಿಶ್ವನಾಥ ಮತ್ತವರ ತಂಡ ಶಾಲೆಯ 170ಕ್ಕೂ ಹೆಚ್ಚು ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು.

ಹಿರಿಯ ಶಿಕ್ಷಕ ಆರ್ ರುದ್ರಪ್ಪ, ಕೆ.ಸುಶೀಲಮ್ಮ, ಸಬಿಯಾ ಪರ್ವಿನ್, ಬಿ.ಟಿ. ಶರತ್ ಬಾಬು, ಪುಷ್ಪಾವತಿ, ಶಿಲ್ಪಾ ಹಾಗೂ ಸಿಬ್ಬಂದಿ ಸಿ.ಜ್ಯೋತಿ, ಮಂಜಮ್ಮ, ನೇತ್ರಾವತಿ, ನಾಗಮ್ಮ ಉಪಸ್ಥಿತರಿದ್ದರು.

- - - -15ಎಚ್‍ಆರ್‍ಆರ್01:

ದೊಗ್ಗಳ್ಳಿಯ ಪಿಎಂಶ್ರೀ ಶಾಲೆಯಲ್ಲಿ ಆರೋಗ್ಯ ತಪಾಸಣೆ ಮತ್ತು ಮಕ್ಕಳ ದಿನ ಕಾರ್ಯಕ್ರಮವನ್ನು ಬಿಇಒ ಡಿ.ದುರುಗಪ್ಪ ಉದ್ಘಾಟಿಸಿದರು.

Share this article