ಕನಕಪುರ: ಮನುಷ್ಯನ ದೈಹಿಕ ಆರೋಗ್ಯ ಮಾನಸಿಕ ಆರೋಗ್ಯದ ಮೇಲೆ ಅವಲಂಭಿತವಾಗಿರುತ್ತದೆ. ಹಾಗಾಗಿ ನಾವು ಮೊದಲು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೃದ್ರೋಗ ತಜ್ಞ ಡಾ.ಬಿ.ಸಿ. ಬೊಮ್ಮಯ್ಯ ತಿಳಿಸಿದರು.
ಜಗತ್ತಿಗೆ ಶಾಂತಿ ಸಂದೇಶ ಸಾರಿದ ಗೌತಮ ಬುದ್ಧರ ತತ್ವಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡರೆ ದ್ವೇಷ, ಅಸೂಯೆ ಇದ್ಯಾವುದೂ ಇರುವುದಿಲ್ಲ. ಆಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಪ್ರತಿಯೋಬ್ಬರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಮಾರ್ಗದರ್ಶನವನ್ನು ಜಗತ್ತಿಗೆ ಕೊಟ್ಟವರು ಗೌತಮ ಬುದ್ಧರು. ಹಾಗಾಗಿ ಜಗತ್ತಿನ ಬೇರೆ ಬೇರೆ ಮುಂದುವರಿದ ರಾಷ್ಟ್ರಗಳಲ್ಲಿ ಗೌತಮ ಬುದ್ಧರ ಜಯಂತಿ ಆಚರಿಸುವ ಸಂಸ್ಕೃತಿ ಬೆಳೆಸಿಕೊಂಡಿದ್ದಾರೆ. ಆದರೆ ಭಾರತದಲ್ಲಿ ಅಂತಹ ಆಚರಣೆಗಳು ನಡೆಯುವುದಿಲ್ಲ. ಗೌತಮ ಬುದ್ಧರು ಭಾರತದಲ್ಲಿ ಜನಿಸಿದರು ನಾವು ಅವರನ್ನು ನೆನೆಸಿಕೊಳ್ಳುವುದಿಲ್ಲ. ಬುದ್ಧ ಇರುವ ಜಾಗದಲ್ಲಿ ವಿಜ್ಞಾನಕ್ಕೆ ಮಾತ್ರ ಬೆಲೆ ಇರುತ್ತದೆ, ಮೌಡ್ಯಕ್ಕೆ ಬೆಲೆ ಇರುವುದಿಲ್ಲ, ಆತ್ಮಕ್ಕೆ ಬೆಲೆ ಇರುವುದಿಲ್ಲ ವ್ಯಕ್ತಿಗೆ ಬೆಲೆ ಇರುತ್ತದೆ, ಆತ್ಮ ಮತ್ತು ದೇವರ ಕಲ್ಪನೆಗಳನ್ನು ಗೌತಮ ಬುದ್ಧರು ನಿರಾಕರಿಸಿದ್ದರು. ಅದಕ್ಕಾಗಿ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು ಗೌತಮ ಬುದ್ಧರನ್ನು ಒಪ್ಪಿಕೊಂಡಿವೆ ಎಂದರು.ಗೌತಮ ಬುದ್ಧರ ಪಂಚಶೀಲ ತತ್ವಗಳನ್ನು ಅಷ್ಟಾಂಗ ಮಾರ್ಗಗಳನ್ನು ಸರಳತೆಯ ದಾರಿಗಳನ್ನ ನಾವು ಅರಿತುಕೊಳ್ಳದಿದ್ದರೆ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಸಮಾಜ ಮತ್ತು ಜೀವನ ಕೊಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಗೌತಮ ಬುದ್ಧರ ವೈಚಾರಿಕತೆ ಸಮಾಜಕ್ಕೆ ತಿಳಿಯಬೇಕು. ಆ ಹಿನ್ನೆಲೆಯಲ್ಲಿ ಪ್ರತಿವರ್ಷ ಗೌತಮ ಬುದ್ಧರ ಜಯಂತಿ ಆಚರಣೆ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕನಕಪುರ ತಾಲೂಕಿನ ಹೊನ್ನಿಗನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಂಡರು.