ಕೆ.ಆರ್.ಪೇಟೆ ಪಟ್ಟಣದೆಲ್ಲೆಡೆ ತ್ಯಾಜ್ಯಗಳ ರಾಶಿ; ಕ್ರಮ ಕೈಗೊಳ್ಳದ ಅಧಿಕಾರಿಗಳು

KannadaprabhaNewsNetwork |  
Published : Aug 03, 2025, 11:45 PM IST
3ಕೆಎಂಎನ್ ಡಿ22 | Kannada Prabha

ಸಾರಾಂಶ

ಕೆ.ಆರ್.ಪೇಟೆ ಪಟ್ಟಣದಾದ್ಯಂತ ಎಲ್ಲೆಡೆ ತ್ಯಾಜ್ಯಗಳ ರಾಶಿ ಹೆಚ್ಚಾಗಿದ್ದು, ಸ್ವಚ್ಛತೆಗೆ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪಟ್ಟಣಕ್ಕೆ ಪ್ರವೇಶ ನೀಡುತ್ತಿದ್ದಂತೆ ವಾಹನ ಸವಾರರಿಗೆ ತ್ಯಾಜ್ಯದ ದುರ್ವಾಸನೆ ಹಾಗೂ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ನಿರುಪಯುಕ್ತ ವಸ್ತುಗಳು ಸ್ವಾಗತ ಕೋರುತ್ತಿವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದಾದ್ಯಂತ ಎಲ್ಲೆಡೆ ತ್ಯಾಜ್ಯಗಳ ರಾಶಿ ಹೆಚ್ಚಾಗಿದ್ದು, ಸ್ವಚ್ಛತೆಗೆ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಪಟ್ಟಣಕ್ಕೆ ಪ್ರವೇಶ ನೀಡುತ್ತಿದ್ದಂತೆ ವಾಹನ ಸವಾರರಿಗೆ ತ್ಯಾಜ್ಯದ ದುರ್ವಾಸನೆ ಹಾಗೂ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ನಿರುಪಯುಕ್ತ ವಸ್ತುಗಳು ಸ್ವಾಗತ ಕೋರುತ್ತಿವೆ. ದೇವೀರಮ್ಮಣ್ಣಿ ಕೆರೆ ಏರಿ ಹಾಗೂ ಮೈಸೂರು- ಚನ್ನರಾಯಪಟ್ಟಣ ಮುಖ್ಯ ರಸ್ತೆಯ ಕಾಗುಂಡಿ ಹಳ್ಳದ ಬಳಿ ಮುಖ್ಯ ರಸ್ತೆಯ ಅಕ್ಕಪಕ್ಕದ ಜಾಗ ತ್ಯಾಜ್ಯಗಳ ತಾಣವಾಗಿ ಮಾರ್ಪಟ್ಟಿದ್ದರೂ ಪುರಸಭಾ ಅಧಿಕಾರಿಗಳು ಕಂಡು ಕಾಣದಂತೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದ ಹಳೆಯ ಮನೆಗಳನ್ನು ಕೆಡವಿದ ಮಣ್ಣು, ಕಲ್ಲುಗಳು, ಹೆಂಚು, ಕಲ್ನಾರು ಶೀಟುಗಳು, ಹದಿತೆಗೆಯುವಾಗ ಸಿಗುವ ದಪ್ಪ ಕಲ್ಲುಗಳು, ಕೊಳೆತ ತರಕಾರಿ, ಕೋಳಿ ತ್ಯಾಜ್ಯ, ಹಳೆಯ ಬಟ್ಟೆಗಳ ಗಂಟು, ಹಳೆಯ ಸಿಮೆಂಟ್ ಚೀಲಗಳು, ಪ್ಲಾಸ್ಟಿಕ್ ಸಾಮಗ್ರಿಗಳು ಹೋಟೆಲ್ ತ್ಯಾಜ್ಯಗಳು ಸೇರಿದಂತೆ ಹಲವಾರು ನಿರುಪಯುಕ್ತ ವಸ್ತುಗಳನ್ನು ಸಾಲು ಸಾಲಾಗಿ ತಂದು ಸುರಿಯಲಾಗಿದೆ.

ಈ ಬಗ್ಗೆ ಪುರಸಭೆ ಯಾವೊಬ್ಬ ಅಧಿಕಾರಿಯೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪ್ರತಿದಿನ ಸಾವಿರಾರು ಸಂಖ್ಯೆ ವಾಹನಗಳು ಈ ಎರಡೂ ರಸ್ತೆಯಲ್ಲಿ ಚಲಿಸುವ ಕಾರಣ ತ್ಯಾಜ್ಯ ನೋಡುಗರಿಗೆ ಅಸಹ್ಯ ಹುಟ್ಟಿಸುವಂತಿದೆ.

ವಿದ್ಯುತ್ ದೀಪ ಹಾಗೂ ತಡೆಗೋಡೆ ಅಳವಡಿಸಿ:

ಪಟ್ಟಣದ ದೇವೀರಮ್ಮಣ್ಣಿ ಕೆರೆ ಏರಿ ಒಂದು ಕಿಲೋ ಮೀಟರ್ ಉದ್ದವಿದ್ದು, ರಾತ್ರಿ ವೇಳೆಯಲ್ಲಿ ಸಂಚರಿಸಲು ಬೀದಿ ದೀಪಗಳಿಲ್ಲ. ರಾತ್ರಿ ವೇಳೆ ಕಗ್ಗತ್ತಲಿನಲ್ಲಿ ವಾಹನ ಸವಾರರು ಚಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಬದಿಗೆ ತಡೆಗೋಡೆ ಇದ್ದು ಇನ್ನೊಂದು ಬದಿಗೆ ತಡೆಗೋಡೆಯೇ ಇಲ್ಲ. ಇದರಿಂದ ಅಪಘಾತಗಳು ಸಂಭವಿಸಿ ಸಾವುನೋವು ಉಂಟಾಗಿವೆ. ಇದರ ಬಗ್ಗೆಯೂ ಕ್ರಮ ಕೈಗೊಂಡಿಲ್ಲ.

ಕೂಡಲೇ ಪುರಸಭಾ ಮುಖ್ಯಾಧಿಕಾರಿ ಅಥವಾ ಸಂಬಂಧಿಸಿದವರಿಗೆ ಶಾಸಕ ಎಚ್.ಟಿ.ಮಂಜು ಸೂಚನೆ ನೀಡಿ ದೇವೀರಮ್ಮಣ್ಣಿ ಕೆರೆಯ ಏರಿ ಹಾಗೂ ಮೈಸೂರು ಚನ್ನರಾಯಪಟ್ಟಣ ಮುಖ್ಯರಸ್ತೆಯ ಕಾಗುಂಡಿ ಹಳ್ಳದ ಬಳಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಮುಂದಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...