ಅಂಗನವಾಡಿ, ಶಾಲೆಗೆ ಕಟ್ಟಡ, ನಿವೇಶನ ನೀಡಲು ಮೀನಮೇಷ ಸಲ್ಲದು: ಜಿಲ್ಲಾಧಿಕಾರಿ

KannadaprabhaNewsNetwork |  
Published : Sep 07, 2025, 01:00 AM IST
6ಎಚ್‌ಪಿಟಿ1- ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಾಲಾ ಆಸ್ತಿ ನೋಂದಣಿ ಹಕ್ಕು ಬದಲಾವಣೆ, ಅಂಗನವಾಡಿ ಕಟ್ಟಡ, ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಒದಗಿಸುವ ಬಗ್ಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ ಮಾತನಾಡಿದರು. ಜಿಪಂ ಸಿಇಒ ಅಕ್ರಂ ಅಲಿ ಷಾ ಮತ್ತಿತರರಿದ್ದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ಶಾಲಾ ಆಸ್ತಿಗಳು ಸರ್ಕಾರದ ಹೆಸರಿಗೆ ನೋಂದಣಿ ಆಗದೇ ಬಾಕಿ ಇದ್ದಲ್ಲಿ, ಸ್ವಂತ ನಿವೇಶನ ಕೊರತೆ ಇದ್ದಲ್ಲಿ ಆಯಾ ತಾಲೂಕಿನ ತಹಸೀಲ್ದಾರರು, ತಾಪಂ ಇಒಗಳು ಮತ್ತು ಬಿಇಒಗಳು ಸಮನ್ವಯತೆಯಿಂದ ಶೀಘ್ರವೇ ಪರಿಶೀಲಿಸಿ ಅಭಿಯಾನ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಜಿಲ್ಲೆಯಲ್ಲಿ ಅಂಗನವಾಡಿ ಮತ್ತು ಶಾಲಾ ಆಸ್ತಿಗಳು ಸರ್ಕಾರದ ಹೆಸರಿಗೆ ನೋಂದಣಿ ಆಗದೇ ಬಾಕಿ ಇದ್ದಲ್ಲಿ, ಸ್ವಂತ ನಿವೇಶನ ಕೊರತೆ ಇದ್ದಲ್ಲಿ ಆಯಾ ತಾಲೂಕಿನ ತಹಸೀಲ್ದಾರರು, ತಾಪಂ ಇಒಗಳು ಮತ್ತು ಬಿಇಒಗಳು ಸಮನ್ವಯತೆಯಿಂದ ಶೀಘ್ರವೇ ಪರಿಶೀಲಿಸಿ ಅಭಿಯಾನ ಕೈಗೊಳ್ಳಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಾಲಾ ಆಸ್ತಿ ನೋಂದಣಿ ಹಕ್ಕು ಬದಲಾವಣೆ, ಅಂಗನವಾಡಿ ಕಟ್ಟಡ, ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಒದಗಿಸುವ ಬಗ್ಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿವೇಶನ ಲಭ್ಯವಿಲ್ಲದ ಅಂಗನವಾಡಿ ಕೇಂದ್ರಗಳು ನಗರ ವ್ಯಾಪ್ತಿಯಲ್ಲಿ 77 ಹಾಗೂ ಗ್ರಾಮೀಣ ಭಾಗದಲ್ಲಿ 14 ಕೇಂದ್ರಗಳು ಇವೆ. ಮತ್ತು ಇ-ಖಾತಾ ಬಾಕಿ ಇರುವ ಕೇಂದ್ರಗಳು ನಗರ ವ್ಯಾಪ್ತಿಯಲ್ಲಿ 175 ಗ್ರಾಮೀಣ ಭಾಗದಲ್ಲಿ 1050 ಕೇಂದ್ರಗಳು ಇವೆ. ಶಾಲಾ ಆಸ್ತಿಗಳು ಸರ್ಕಾರದ ಹೆಸರಿಗೆ ನೋಂದಣಿ ಆಗದೇ ಪ್ರಾಥಮಿಕ ಶಾಲೆಗಳು 587, ಪ್ರೌಢಶಾಲೆಗಳು 48 ಸೇರಿದಂತೆ ಒಟ್ಟು 635 ಬಾಕಿ ಇವೆ. ಇವುಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೇ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಮತ್ತು ಗ್ರಾಪಂ ಪಂಚಾಯತಿ ಅಧಿಕಾರಿಗಳು ಹತ್ತು ದಿನದೊಳಗೆ ಗರಿಷ್ಟ ಮಟ್ಟದಲ್ಲಿ ಪೂರ್ಣಗೊಳಿಸಬೇಕು ಎಂದರು.

ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಬೇಕಾದ ಅಧಿಕಾರಿಗಳು ಅಂಗನವಾಡಿಗಳ ಅಭಿವೃದ್ಧಿಗೆ ಹೆಚ್ಚಿನ ಆಸ್ಯತೆ ನೀಡಬೇಕು. ಅಂಗನವಾಡಿ ಕೇಂದ್ರಗಳು ಸುಸ್ಥಿತಿಯಲ್ಲಿದ್ದರೇ ಮಾತ್ರ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಣ ಇಲಾಖೆ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ. ನೋಂದಣಿಗೆ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಿದ್ದರೇ ಜಿಪಂ ಸಿಇಒ, ಜಿಲ್ಲಾಧಿಕಾರಿ ಕಚೇರಿಗಳಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಿಇಒ ಅಕ್ರಂ ಅಲಿ ಷಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಆಯಾ ಗ್ರಾಪಂ ಪಿಡಿಒಗಳು ಸ್ಥಳ ಪರಿಶೀಲನೆ ನಡೆಸಿ ಗ್ರಾಮಠಾಣಾ ವ್ಯಾಪ್ತಿಯಲ್ಲಿದ್ದರೇ ಅಧಿಕೃತ ನಮೂನೆಗಳನ್ನು ನೀಡಬೇಕು. ಅಂಗನವಾಡಿ ಕೇಂದ್ರಗಳಿಗೆ ನಿವೇಶನಗಳ ಅಗತ್ಯವಿದ್ದರೇ ಕೂಡಲೇ ಸ್ಥಳ ಗುರುತಿಸಿ ವರದಿ ನೀಡಬೇಕು ಎಂದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ವೇತಾ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪ, ಜಿಪಂ ಯೋಜನಾ ನಿರ್ದೇಶಕ ಜೆ.ಎಂ. ಅನ್ನದಾನ ಸ್ವಾಮಿ ಸೇರಿದಂತೆ ವಿವಿಧ ತಾಲೂಕಿನ ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ