ಹಾಸನಾಂಬೆ ಜಾತ್ರೆಯ ಲೆಕ್ಕವನ್ನು ಜನರ ಮುಂದಿಡಿ: ವಕೀಲ ಜಿ.ದೇವರಾಜೇಗೌಡ

KannadaprabhaNewsNetwork |  
Published : Oct 14, 2026, 01:30 AM IST
13ಎಚ್ಎಸ್ಎನ್13 :  | Kannada Prabha

ಸಾರಾಂಶ

೨೦೨೫ನೇ ಸಾಲಿನ ಜಾತ್ರಾ ಮಹೋತ್ಸವದ ವೆಚ್ಚಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಕೇಳಲಾಗಿದೆ. ಸುಮಾರು ಆರು ಸಾವಿರ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ. ಆದರೆ, ಅಗತ್ಯ ದಾಖಲೆಗಳನ್ನು ನೀಡುವಲ್ಲಿ ವಿಳಂಬವಾಗುತ್ತಿದೆ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಮಾಹಿತಿ ಹಕ್ಕು ಅಧಿನಿಯಮದಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ₹೧೭ ಕೋಟಿ ಖರ್ಚು ಮಾಡಿರುವ ಲೆಕ್ಕ ನೀಡಲಾಗಿದ್ದು, ಈ ದೇವಾಲಯದ ಒಟ್ಟು ಆದಾಯ, ಖರ್ಚು-ವೆಚ್ಚ, ಕಾಮಗಾರಿಗಳ ಗುತ್ತಿಗೆ ಹಾಗೂ ಖರೀದಿ ವ್ಯವಹಾರಗಳ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಹಾಗೂ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ವಕೀಲ ಜಿ. ದೇವರಾಜೇಗೌಡ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ದೇಶದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರು ದೇವಿಯ ಮೇಲೆ ಅಪಾರ ಭಕ್ತಿ ಮತ್ತು ನಂಬಿಕೆಯಿಂದ ಕಾಣಿಕೆ ಸಲ್ಲಿಸುತ್ತಿದ್ದು, ಆ ಹಣದ ಬಳಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಜಾತ್ರೆಯ ಸಂದರ್ಭದಲ್ಲಿ ವಿದ್ಯುತ್ ದೀಪಗಳ ಅಳವಡಿಕೆ, ದೇವಾಲಯದ ಸುಣ್ಣ- ಬಣ್ಣ, ಅಲಂಕಾರಿಕ ಕಾಮಗಾರಿಗಳು, ಎಲ್‌ಇಡಿ ಫಲಕಗಳ ಖರೀದಿ, ಜರ್ಮನ್ ಟೆಂಟ್‌ಗಳ ವ್ಯವಸ್ಥೆ, ಚಪ್ಪಲಿ ಸ್ಟ್ಯಾಂಡ್‌ಗಳ ನಿರ್ಮಾಣ, ಪ್ರಸಾದ ವಿತರಣೆ, ಪೊಲೀಸ್ ಸಿಬ್ಬಂದಿಯ ಊಟೋಪಚಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಲಕ್ಷಾಂತರ ರುಪಾಯಿ ವೆಚ್ಚ ಮಾಡಿರುವ ಕುರಿತು ಪ್ರಶ್ನೆಗಳು ಎದ್ದಿವೆ. ಈ ಎಲ್ಲ ಕಾಮಗಾರಿಗಳಿಗೆ ಎಷ್ಟು ಹಣ ಮಂಜೂರಾಗಿದೆ, ವಾಸ್ತವವಾಗಿ ಎಷ್ಟು ಖರ್ಚು ಮಾಡಲಾಗಿದೆ ಮತ್ತು ಪಾವತಿಗಳು ಯಾವ ಆಧಾರದ ಮೇಲೆ ನಡೆದಿವೆ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ದಾಖಲೆಗಳ ಸಹಿತ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಲಾಡು ಪ್ರಸಾದಕ್ಕೆ ₹95 ಲಕ್ಷ!:

ದೊನ್ನೆ ಪ್ರಸಾದ ವ್ಯವಸ್ಥೆಗೆ ಸುಮಾರು ₹75 ಲಕ್ಷ , ಲಾಡು ಪ್ರಸಾದಕ್ಕೆ ₹90 ರಿಂದ ₹95 ಲಕ್ಷ ಹಾಗೂ ಜರ್ಮನ್ ಟೆಂಟ್, ತಾತ್ಕಾಲಿಕ ಸೌಲಭ್ಯ ಮತ್ತು ಚಪ್ಪಲಿ ಸ್ಟ್ಯಾಂಡ್‌ಗಳಿಗೆ ಸಂಬಂಧಿಸಿದಂತೆ ಸುಮಾರು ₹೧.೦೫ ಕೋಟಿ ವೆಚ್ಚವಾಗಿರುವ ಬಗ್ಗೆ ಪರಿಶೀಲನೆ ಅಗತ್ಯವಿದೆ. ಜಾತ್ರೆಯ ಉದ್ಘಾಟನಾ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸುಮಾರು ₹೨೫ ಲಕ್ಷ ಖರ್ಚು ಮಾಡಿರುವುದಾಗಿಯೂ ಪ್ರಸ್ತಾಪಿಸಲಾಗಿದೆ. ಈ ಮೊತ್ತಗಳ ನಿಖರತೆ ಹಾಗೂ ವೆಚ್ಚದ ಸಮರ್ಪಕತೆಯನ್ನು ಮೂಲ ದಾಖಲೆಗಳ ಮೂಲಕ ಪರಿಶೀಲಿಸಬೇಕು. ಇದಲ್ಲದೆ, ವಿದ್ಯುತ್ ಉಪಕರಣಗಳು, ಎಲ್‌ಇಡಿ ಪ್ಯಾನೆಲ್‌ಗಳು, ಸ್ಕ್ಯಾನಿಂಗ್ ವ್ಯವಸ್ಥೆ ಹಾಗೂ ಇತರ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ, ಪೂರೈಕೆಯಾದ ಸಾಮಗ್ರಿಗಳ ಪ್ರಮಾಣ ಮತ್ತು ಗುಣಮಟ್ಟ, ಗುತ್ತಿಗೆದಾರರಿಗೆ ಪಾವತಿಸಿರುವ ಮೊತ್ತ ಹಾಗೂ ಬಿಲ್‌ಗಳ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಖರೀದಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಪಾಲಿಸಲಾಗಿದೆಯೇ, ಅನ್ವಯವಾಗುವ ತೆರಿಗೆಗಳನ್ನು ಕಡಿತಗೊಳಿಸಿ ಸರ್ಕಾರಕ್ಕೆ ಪಾವತಿಸಲಾಗಿದೆಯೇ ಮತ್ತು ಕಾಮಗಾರಿಗಳಿಗೆ ಲೆಕ್ಕಪರಿಶೋಧನೆ ನಡೆಸಲಾಗಿದೆಯೇ ಎಂಬುದರ ಬಗ್ಗೆಯೂ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.

೨೦೨೫ನೇ ಸಾಲಿನ ಜಾತ್ರಾ ಮಹೋತ್ಸವದ ವೆಚ್ಚಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಕೇಳಲಾಗಿದೆ. ಸುಮಾರು ಆರು ಸಾವಿರ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ. ಆದರೆ, ಅಗತ್ಯ ದಾಖಲೆಗಳನ್ನು ನೀಡುವಲ್ಲಿ ವಿಳಂಬವಾಗುತ್ತಿದೆ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದರು.

ಭಕ್ತರಿಂದ ಸಂಗ್ರಹವಾಗುವ ಕಾಣಿಕೆ, ಹುಂಡಿ ಹಣ, ಟಿಕೆಟ್ ಮಾರಾಟ ಹಾಗೂ ಗೋಲ್ಡನ್ ಪಾಸ್‌ಗಳಿಗೆ ಸಂಬಂಧಿಸಿದ ಆದಾಯದ ವಿವರಗಳನ್ನೂ ಬಹಿರಂಗಪಡಿಸಬೇಕು. ಗೋಲ್ಡನ್ ಪಾಸ್‌ಗಳ ಮುದ್ರಣ ಮತ್ತು ವಿತರಣೆ, ವಿವಿಧ ಸಾಮಗ್ರಿಗಳ ಖರೀದಿ ಹಾಗೂ ಪೂರೈಕೆದಾರರಿಗೆ ಮಾಡಿರುವ ನಗದು ಮತ್ತು ಚೆಕ್ ಪಾವತಿಗಳ ವಿವರಗಳನ್ನು ದಾಖಲಾತಿಗಳೊಂದಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.

ದೇವಿಯ ಹೆಸರಿನಲ್ಲಿ ಸಂಗ್ರಹವಾಗುವ ಹಣವನ್ನು ಧಾರ್ಮಿಕ ಕಾರ್ಯಗಳು ಹಾಗೂ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸಮರ್ಪಕವಾಗಿ ಬಳಸಬೇಕು. ಜಾತ್ರೆಯ ಹೆಸರಿನಲ್ಲಿ ನಡೆಯುವ ಪ್ರತಿಯೊಂದು ಕಾಮಗಾರಿಯೂ ನಿಯಮಾನುಸಾರ ನಡೆಯಬೇಕು. ಲೆಕ್ಕಪರಿಶೋಧನಾ ವರದಿ, ಟೆಂಡರ್ ದಾಖಲೆಗಳು, ಬಿಲ್‌ಗಳು ಮತ್ತು ಪಾವತಿ ವಿವರಗಳನ್ನು ಸಾರ್ವಜನಿಕರ ಮುಂದಿಡಬೇಕು. ದಾಖಲೆಗಳ ಪರಿಶೀಲನೆಯಲ್ಲಿ ಹಣಕಾಸಿನ ಲೋಪ ಅಥವಾ ನಿಯಮ ಉಲ್ಲಂಘನೆ ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಉನ್ನತವಾದ ತನಿಖೆ ನಡೆಸುವಂತೆ ಆಗ್ರಹಿಸಿ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ದೂರು: ಕಬ್ಬು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ಕಲಬೆರಕೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯಿಸಿ ಮನ್ಮುಲ್ ಒಕ್ಕೂಟಕ್ಕೆ ಮುತ್ತಿಗೆ