ಹೂವಿನಹಡಗಲಿ: ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪ್ರಗತಿಗೆ ಪೂರಕವಾಗಿ, ಶೈಕ್ಷಣಿಕ ಚಟುವಟಿಕೆ ಹಮ್ಮಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ. ಪೂಜಾರ ಹೇಳಿದರು.
ಸಮಾಜ ವಿಷಯದಲ್ಲಿ ಬರುವ ಸುಲಭ ಘಟಕಗಳಿಗೆ ಹೆಚ್ಚು ಒತ್ತು ನೀಡಬೇಕು. ಪಾಸಾಗಲು ಕನಿಷ್ಠ ಅಂಕ ಗಳಿಸುವ ಹಾಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಇಸವಿಗಳನ್ನು ಸುಲಭವಾಗಿ ನೆನಪಿಡುವ ಕ್ರಮ, ನಕಾಶೆ ರಚಿಸಿ ಸ್ಥಳಗಳನ್ನು ಗುರುತಿಸುವುದು, ಒಂದು ಎರಡು ಅಂಕಗಳ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ ಎಂದರು.
ಸಮಾಜ ವಿಜ್ಞಾನ ವಿಷಯ ಶಿಕ್ಷಕರು ಪಾಸಿಂಗ್ ಪ್ಯಾಕೇಜ್ ತಯಾರಿಸುವಂತೆ ತಿಳಿಸಿದ ಅವರು, ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಿಯಾತ್ಮಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ. ಹನುಮಂತಪ್ಪ ಮಾತನಾಡಿ, ವಿದ್ಯಾರ್ಥಿಗಳು ಗೈರು ಹಾಜರಾಗದಂತೆ ಕ್ರಮ ವಹಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮುಧೋಳದ ಲಕ್ಷ್ಮಿಕಾಂತ ಮಮದಾಪುರ ಉಪಯುಕ್ತ ಮಾರ್ಗದರ್ಶನ ನೀಡಿದರು.ಶಾಲೆಯ ಮುಖ್ಯ ಶಿಕ್ಷಕ ಬಾಗಾರ ನಿಂಗಪ್ಪ, ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಎಚ್. ಮಲ್ಲಿಕಾರ್ಜುನ, ಸಹ ಶಿಕ್ಷಕರ ಸಂಘದ ನಿರ್ದೇಶಕ ಎಚ್. ಕಾಂತೇಶ, ಬನ್ನೆಪ್ಪ ಕೊಳಚಿ ಇತರರು ಉಪಸ್ಥಿತರಿದ್ದರು.
ತಾಲೂಕಿನ ಸರ್ಕಾರಿ ಅನುದಾನಿತ, ಅನುದಾನ ರಹಿತ, ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಗಳ ಸಮಾಜ ವಿಜ್ಞಾನ ವಿಷಯ ಶಿಕ್ಷಕರು ಭಾಗವಹಿಸಿದ್ದರು.