ಸಾಹಸ ಕ್ರೀಡೆ ‘ಜಿಪ್‌ ಲೈನ್‌’ ನಿರ್ಮಿಸಲು ಯೋಜನೆ

KannadaprabhaNewsNetwork | Published : Jul 28, 2024 2:08 AM

ಸಾರಾಂಶ

ಬೆಲ್ಟ್ ಹಾಕಿಕೊಂಡು ನೇತಾಡುತ್ತಾ ತಂತಿಯಲ್ಲಿ ಜಾರುವ (ಜಿಪ್‌ ಲೈನ್‌) ಸಾಹಸಮಯ ಕ್ರೀಡೆಗಳು ಸದ್ಯ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲ, ಇದು ಕಾರ್ಯರೂಪಕ್ಕೆ ಬಂದರೆ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಅನುಮಾನವಿಲ್ಲ. ಸುಮಾರು ೫೦೦ ಮೀಟರ್ ಉದ್ದ ಜಿಪ್‌ಲೈನ್‌ ಇರಲಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪ್ರವಾಸಿಗರನ್ನು ಹಾಗೂ ಯುವ ಜನತೆಯನ್ನು ಆಕರ್ಷಿಸಲು ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಅರಣ್ಯ ಪ್ರದೇಶಗಳಲ್ಲಿ ಇಲಾಖೆಯು ಹಲವಾರು ಯೋಜನೆಗಳನ್ನು ರೂಪಿಸಿದೆ. ತಾಲೂಕಿನ ಯರಗೋಳ್ ಬಳಿ ವೃಕ್ಷೋದ್ಯಾನದಲ್ಲಿ ಹಾಗೂ ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಜಿಪ್ ಲೈನ್ ನಿರ್ಮಿಸಲು ಮುಂದಾಗಿದೆ.ಬೆಲ್ಟ್ ಹಾಕಿಕೊಂಡು ನೇತಾಡುತ್ತಾ ತಂತಿಯಲ್ಲಿ ಜಾರುವ (ಜಿಪ್‌ ಲೈನ್‌) ಸಾಹಸಮಯ ಕ್ರೀಡೆಗಳು ಸದ್ಯ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲ, ಇದು ಕಾರ್ಯರೂಪಕ್ಕೆ ಬಂದರೆ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಅನುಮಾನವಿಲ್ಲ. ಸುಮಾರು ೫೦೦ ಮೀಟರ್ ಉದ್ದ ಜಿಪ್‌ಲೈನ್‌ ಇರಲಿದೆ. ಈಗಾಗಲೇ ಈ ಯೋಜನೆಗೆ ೭೫ ಲಕ್ಷ ರು.ಗಳ ಅನುದಾನ ಬಿಡುಗಡೆಯಾಗಿದೆ.

ಜಿಪ್‌ಲೈನ್‌ಗೆ ಜಾಗ ಗುರುತು

ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಯೋಜನೆಯನ್ನು ರೂಪಿಸಿದ್ದು ಈ ಕಾರ್ಯಕ್ಕೆ ಅನುದಾನ ಸಹ ಸಿದ್ದವಿದೆ. ತಾಲೂಕಿನ ಯರಗೋಳ್ ಡ್ಯಾಂ ಬಳಿ ವೃಕ್ಷೋದ್ಯಾನದಲ್ಲಿ ೩೫ಲಕ್ಷ ವೆಚ್ಚದಲ್ಲಿ ಜಿಪ್ ಲೈನ್ ಹಾಗೂ ಅಂತರಗಂಗೆ ಬೆಟ್ಟದಲ್ಲಿ ಚಾರಣ (ಟ್ರಕ್ಕಿಂಗ್) ದೇವಾಲಯ ಬಳಿಯಿಂದ ಬೆಟ್ಟದ ತುದಿವರೆಗೆ ಜಿಪ್ ಲೈನ್ ಅಳವಡಿಸಲು ಜಾಗ ನಿಗದಿಪಡಿಸಲಾಗಿದೆ.

ಅರಣ್ಯ ಇಲಾಖೆಯ ಯೋಜನೆ

ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುವಂತೆ ಇರುವ ಪ್ರದೇಶಗಳನ್ನು ಗುರುತಿಸಿ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆ ಗಮನಕ್ಕೆ ತರಲಾಗಿದೆ. ಪ್ರವಾಸಿಗರು ಬಂದರೆ ಕೇವಲ ಯರಗೋಳ್ ಡ್ಯಾಂ ವೀಕ್ಷಣೆ ಮಾಡಿಕೊಂಡು ಹೋಗುತ್ತಾರೆ. ಹೀಗಾಗಿ ಅರಣ್ಯ ಇಲಾಖೆಯಿಂದ ವಿವಿಧ ಯೋಜನೆ ರೂಪಿಸಲಾಗಿದೆ. ಇದಲ್ಲದೆ ಜಿಲ್ಲೆಯ ವಿವಿಧ ನಾಲ್ಕೈದು ಸ್ಥಳಗಳಲ್ಲಿ ಪ್ರವಾಸಿ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಕುಡಕೊಂಡಲು ತಿಳಿಸಿದ್ದಾರೆ.

ಅರಣ್ಯ ಇಲಾಖೆಯಿಂದ ಚಿಣ್ಣರಿಗೆ ವನ ದರ್ಶನ ಎಂಬ ಯೋಜನೆ ಇದೆ. ಆದರೆ ಜಿಲ್ಲೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಬೇರೆ ಕಡೆ ಕರೆದುಕೊಂಡು ಹೋಗುತ್ತಿದ್ದೇವೆ, ಅರಣ್ಯದಲ್ಲೆ ರಾತ್ರಿ ವಾಸ್ತವ್ಯ ಹೂಡಿಸುವ ಚಟುವಟಿಕೆಗಳಲ್ಲಿ ಈ ಯೋಜನೆಯಡಿ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಜಲ ಸಾಹಸ ಕ್ರೀಡೆ ವ್ಯವಸ್ಥೆ

ಯರಗೋಳ್ ಹಿನ್ನೀರಲ್ಲಿ ಜಲ ಸಾಹಸ ಕ್ರೀಡೆ ವ್ಯವಸ್ಥೆ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಜಿಲ್ಲೆಯಲ್ಲಿ ನೇಚರ್ ಕ್ಯಾಂಪ್ ಎಲ್ಲೂ ಇಲ್ಲ. ಈ ನಿಟ್ಟಿನಲ್ಲಿ ಕಾಮಸಮುದ್ರ ಅರಣ್ಯ ಇಲಾಖೆ ಜಾಗದಲ್ಲಿ ನೇಚರ್ ಕ್ಯಾಂಪ್ ಟ್ರಕ್ಕಿಂಗ್ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಜಿಲ್ಲೆಗೆ ಪ್ರವಾಸಿಗರು ಚಾರಣ ಪ್ರೆಮೀಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅವರನ್ನು ಸೆಳೆಯಲು ನೇಚರ್ ಕ್ಯಾಂಪ್ ಮಾಡಿ ವಾಸ್ತವ್ಯ ವ್ಯವಸ್ಥೆ ಮಾಡಿ ಟೆಂಟ್ ವ್ಯವಸ್ಥೆಯನ್ನೂ ಮಾಡಲು ಇಲಾಖೆ ಮುಂದಾಗಿದೆ ಎಂದರು.ಬೂದಿಕೋಟೆ ಅಭಿವೃದ್ಧಿ

ಇದರ ಜೊತೆಗೆ ಪ್ರವಾಸೋದ್ಯಮ ಇಲಾಖೆ ಬೂದಿಕೋಟೆಯಲ್ಲಿರುವ ಟಿಪ್ಪು ಸುಲ್ತಾನ್ ತಂದೆ ಹೈದರಾಲಿ ಜನ್ಮಸ್ಥಳ ಅಭಿವೃದ್ದಿಪಡಿಸಿ ಪ್ರವಾಸಿ ತಾಣವಾಗಿ ಮಾಡಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಸರ್ಕಾರಕ್ಕೂ ಆದಾಯ ಬರಲಿದೆ ಎಂಬುದು ಸ್ಥಳೀಯರ ವಾದವಾಗಿದೆ.

Share this article