ನಗರದ ಅತಿದೊಡ್ಡ ಫ್ಲೈಓವರ್ ನಿರ್ಮಾಣಕ್ಕೆ ಪ್ಲಾನ್‌

KannadaprabhaNewsNetwork |  
Published : Aug 20, 2026, 04:00 AM IST
ಸಾಂದರ್ಭಿಕ ಚಿತ್ರ | Kannada Prabha

ಸಾರಾಂಶ

ನಗರದ ಕೇಂದ್ರ ಭಾಗದಲ್ಲಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ರಾಜಧಾನಿಯ ಅತಿದೊಡ್ಡ ತುಮಕೂರು ರಸ್ತೆಯಿಂದ ಹಳೇ ಮದ್ರಾಸ್ ರಸ್ತೆಯನ್ನು ನೇರವಾಗಿ ಸಂಪರ್ಕಿಸುವ 28 ಕಿ.ಮೀ ಉದ್ದದ ‘ಶುಲ್ಕ ಸಹಿತ’ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ ಸ್ಮೈಲ್) ಯೋಜನೆ ರೂಪಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಕೇಂದ್ರ ಭಾಗದಲ್ಲಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ರಾಜಧಾನಿಯ ಅತಿದೊಡ್ಡ ತುಮಕೂರು ರಸ್ತೆಯಿಂದ ಹಳೇ ಮದ್ರಾಸ್ ರಸ್ತೆಯನ್ನು ನೇರವಾಗಿ ಸಂಪರ್ಕಿಸುವ 28 ಕಿ.ಮೀ ಉದ್ದದ ‘ಶುಲ್ಕ ಸಹಿತ’ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ ಸ್ಮೈಲ್) ಯೋಜನೆ ರೂಪಿಸಿದೆ.

ಸರ್ಕಾರ-ಖಾಸಗಿ ಸಹಭಾಗಿತ್ವದಲ್ಲಿ ‘ನಿರ್ಮಾಣ, ಮಾಲೀಕತ್ವ, ನಿರ್ವಹಣೆ ಮತ್ತು ವರ್ಗಾವಣೆ’ (ಬಿಒಒಟಿ) ಮಾದರಿಯಲ್ಲಿ ಮೂರುವರೆ ಸಾವಿರ ಕೋಟಿ ರು. ವೆಚ್ಚದ ಈ ಯೋಜನೆಗೆ ಶೇ.40ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸಲಿದೆ. ಉಳಿದ ಶೇ.60ರಷ್ಟು ಹಣವನ್ನು ಗುತ್ತಿಗೆದಾರ ಸಂಸ್ಥೆ ಭರಿಸುತ್ತದೆ. ಯೋಜನೆ ಪೂರ್ಣಗೊಂಡ ನಂತರ 30 ವರ್ಷಗಳ ಕಾಲ ಬಳಕೆದಾರರ ಶುಲ್ಕವನ್ನು ಗುತ್ತಿಗೆದಾರ ಸಂಸ್ಥೆ ಸಂಗ್ರಹಿಸುತ್ತದೆ. ಸಂಚರಿಸುವ ವಾಹನಗಳಿಗೆ ಎಷ್ಟು ಶುಲ್ಕ ವಿಧಿಸಬೇಕು ಎನ್ನುವುದನ್ನು ಸರ್ಕಾರವೇ ತೀರ್ಮಾನಿಸುತ್ತದೆ ಎಂದು ಬಿ ಸ್ಮೈಲ್ ನಿರ್ದೇಶಕ ಪ್ರಹ್ಲಾಲ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಮೂಲ ಯೋಜನೆಯಂತೆ ಕಾರಿಡಾರ್ ಅನ್ನು 30 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಯಶವಂತಪುರ ಫ್ಲೈಓವರ್‌ ಬಳಿಯಿಂದ ಆರಂಭವಾಗುವ 4 ಪಥಗಳ ಎಲಿವೇಟೆಡ್ ಕಾರಿಡಾರ್‌ಗೆ 12 ಕಡೆ ಪ್ರವೇಶ ಮತ್ತು ನಿರ್ಗಮನ ಪಾಯಿಂಟ್‌ಗಳಿರುತ್ತವೆ. ವಾಹನಗಳು ಈ ಎಲ್ಲ ಪಾಯಿಂಟ್‌ಗಳ ಮೂಲಕ ಕಾರಿಡಾರ್ ಪ್ರವೇಶಿಸಬಹುದು ಮತ್ತು ನಿರ್ಗಮಿಸಬಹುದು. ವಾಹನಗಳು ಗರಿಷ್ಠ 60 ರಿಂದ 80 ಕಿ.ಮೀ ವೇಗದಲ್ಲಿ ಸಂಚರಿಸುವಂತೆ ರಸ್ತೆಯನ್ನು ವಿನ್ಯಾಸಗೊಳಿಸಲಾಗುತ್ತದೆ.

ಸಂಚಾರ ದಟ್ಟಣೆ ಕಡಿತ: ಕಾರಿಡಾರ್ ನಿರ್ಮಾಣದಿಂದ ನಗರದ ಕೇಂದ್ರ ಭಾಗದಲ್ಲಿನ ವಾಹನಗಳ ಸಂಚಾರಕ್ಕೆ ವೇಗ ಸಿಗಲಿದೆ. ಹಲವು ಜಂಕ್ಷನ್‌ಗಳನ್ನು ದಾಟಿಕೊಂಡು ಹೋಗುವ ಕಾರಣ ವಾಹನಗಳ ಸಂಚಾರ ಸುಗಮವಾಗಲಿದೆ. ವಾಹನ ಸಂಚಾರ ದಟ್ಟಣೆ ಬಹುವಾಗಿ ಕಡಿಮೆಯಾಗುತ್ತದೆ.ಎಲಿವೇಟೆಡ್ ಕಾರಿಡಾರ್‌ನಲ್ಲಿ ಸಂಚರಿಸಲು ಇಷ್ಟವಿಲ್ಲದ ವಾಹನ ಸವಾರರು ಎಂದಿನಂತೆ ಲಭ್ಯವಿರುವ ರಸ್ತೆಗಳಲ್ಲಿ ಸಂಚರಿಸಬಹುದಾಗಿದೆ ಎಂದು ಬಿ ಸ್ಮೈಲ್ ಅಧಿಕಾರಿಗಳು ಹೇಳುತ್ತಾರೆ.

ಸಮಯ 90 ರಿಂದ 28 ನಿಮಿಷಕ್ಕೆ ಇಳಿಕೆ

ಹಾಲಿ ತುಮಕೂರು ರಸ್ತೆ ಯಶವಂತಪುರ ಫ್ಲೈಓವರ್‌ನಿಂದ ಕೆ.ಆರ್. ಪುರ ಸಿಗ್ನಲ್‌ ಬಳಿಯ ಹೂವಿನ ಮಾರುಕಟ್ಟೆ ದಾಟಲು ವಾಹನಗಳಿಗೆ ಹಾಲಿ 90 ನಿಮಿಷ ಬೇಕಾಗುತ್ತಿದೆ. ನಗರದ ಮಧ್ಯಭಾಗದ ಮೂಲಕ ಹಾದು ಹೋಗಬೇಕು ಅಥವಾ ಅಥವಾ ರಿಂಗ್ ರಸ್ತೆಯಲ್ಲಿ ಸಂಚರಿಸಬೇಕು. ಈ ಎರಡಕ್ಕೆ ಪರ್ಯಾಯವಾಗಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗುವುದರಿಂದ ತಡೆರಹಿತವಾಗಿ 28 ರಿಂದ 30 ನಿಮಿಷಗಳಲ್ಲಿ ತಲುಪಬಹುದಾಗಿದೆ.

ಕಾರಿಡಾರ್ ಮಾರ್ಗ

ಯಶವಂತಪುರ ಫ್ಲೈಓವರ್ ಸರ್ಕಲ್, ಐಐಎಸ್ಸಿ, ಮೇಕ್ರಿ ಸರ್ಕಲ್, ಜಯಮಹಲ್, ಸೇಂಟ್ ಜಾನ್ಸ್ ಚರ್ಚ್ ರಸ್ತೆ, ಹಲಸೂರು ಕೆರೆ ಮೂಲಕ ಹಳೇ ಮದ್ರಾಸ್ ರಸ್ತೆಯನ್ನು ಸಂಪರ್ಕಿಸಿ, ಅಲ್ಲಿಂದ ಕೆ.ಆರ್.ಪುರ ಸಿಗ್ನಲ್ ನಂತರ ಕಾರಿಡಾರ್ ಮುಕ್ತಾಯವಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರವಾಹ ಮುನ್ನೆಚ್ಚರಿಕೆ: ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿ
ಶಿಶಿಕ್ಷು ತರಬೇತಿಗೆ ಅರ್ಜಿ