ಕನ್ನಡಪ್ರಭ ವಾರ್ತೆ ಪುತ್ತೂರು ದೇವಸ್ಥಾನವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಳೆದ ಸುಮಾರು ೧೫೦ ವರ್ಷಗಳಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿನ ದೇವಳದ ಜಾಗದಲ್ಲಿರುವ ಮನೆಗಳ ನೆಲಸಮಕ್ಕೆ ಯೋಜನೆ ರೂಪಿಸಲಾಗುತ್ತಿದೆ. ದೇವಸ್ಥಾನ ಅಭಿವೃದ್ಧಿಗೆ ಮನೆ ಬಿಟ್ಟು ಕೊಡಿ ಎಂಬ ಪುತ್ತೂರು ಶಾಸಕ ಅಶೋಕ್ ರೈ ನೀಡಿರುವ ಹೇಳಿಕೆ ಪುತ್ತೂರಿನಲ್ಲಿ ಪರ ಮತ್ತು ವಿರೋಧದ ಚರ್ಚೆಗೆ ಕಾರಣವಾಗಿದೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗವು ಸುಮಾರು 18 ಎಕರೆ ಭೂಮಿಯನ್ನು ಹೊಂದಿದೆ. ಈ ಪೈಕಿ ರಸ್ತೆ ಬದಿಯಲ್ಲಿ ಮಹಿಳಾ ಠಾಣೆ ಸೇರಿದಂತೆ ಏಳೆಂಟು ಮನೆಗಳನ್ನು ದೇವರ ಚಾಕರಿ ಮಾಡುವವರಿಗೆ ನೀಡಲಾಗಿದೆ. ಇದೀಗ ಅವುಗಳನ್ನು ತೆರವುಗೊಳಿಸಿ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗಿದ್ದು, ಮನೆಯನ್ನು ಬಿಟ್ಟು ಕೊಡದಿದ್ದಲ್ಲಿ ಮನೆ ನೆಲಸಮ ಮಾಡಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೀಡಿರುವ ಹೇಳಿಕೆ ದೇವಸ್ಥಾನದ ಜಾಗ ಅನುಭೋಗಿಗಳ ವಿರೋಧಕ್ಕೆ ಕಾರಣವಾಗಿದೆ.
ದೇವಸ್ಥಾನದ ಸೇವೆ ಮಾಡುವವರಿಗಾಗಿ ದೇವಸ್ಥಾನದ ವತಿಯಿಂದ ಮನೆ ನೀಡಲಾಗಿದೆ. ಈಗಲೂ ದೇವಸ್ಥಾನದ ಕೆಲಸವನ್ನು ಮಾಡುತ್ತಿರುವ ಕುಟುಂಬಗಳನ್ನು ಏಕಾಏಕಿ ಶಾಸಕರು ಮನೆ ಬಿಟ್ಟು ತೆರಳುವಂತೆ ನೀಡಿರುವ ತೀರ್ಮಾನವನ್ನು ಬದಲಿಸಬೇಕು. ಅನುಭೋಗಾರರೊಂದಿಗೆ ಯಾವುದೇ ಮಾತುಕತೆ ನಡೆಸದೆ ನೆಲಸಮದ ತೀರ್ಮಾನಕ್ಕೆ ಬಂದಿರುವುದು ಸರಿಯಲ್ಲ. ಸೂಕ್ತ ಪರಿಹಾರ ದೊರೆತಲ್ಲಿ ಬಿಟ್ಟು ಕೊಡಲು ಎಲ್ಲಾ ಕುಂಟುಂಬಗಳು ನಿರ್ಧಾರ ಮಾಡಿದೆ.ದೇವಸ್ಥಾನವನ್ನು ರಸ್ತೆಗೆ ಕಾಣುವಂತೆ ಮಾಡುವ ನಿಟ್ಟಿನಲ್ಲಿ ದೇವಳದ ಮುಂಭಾಗದಲ್ಲಿರುವ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಳಾಂತರಗೊಳಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ನಗರದಲ್ಲಿ ಜಮೀನು ಕಾದಿರಿಸಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಇದರೊಂದಿಗೆ ದೇವಸ್ಥಾನದ ಎದುರಿನ ಅಂಗಡಿ ಮತ್ತು ಮನೆಗಳನ್ನು ನೆಲಸಲಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ.