ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಬಿದರೆಗುಡಿ ಕಾವಲಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸ್ಯ ಸಂತೆ ವಿಶೇಷ ಕಾರ್ಯಕ್ರಮವನ್ನು ರೈತರ ಸಮೃದ್ಧಿಗೆ ಹಸಿರು ಹೆಜ್ಜೆ ಎಂಬ ಘೋಷವಾಕ್ಯದೊಂದಿಗೆ ಉದ್ಘಾಟಿಸಲಾಯಿತು. ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ದೊರಕಿತ್ತು ರೈತರು, ವಿದ್ಯಾರ್ಥಿಗಳು, ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.ಕಾರ್ಯಕ್ರಮವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ.ವೈ.ಎನ್.ಶಿವಲಿಂಗಯ್ಯ ಉದ್ಘಾಟಿಸಿ ಮಾತನಾಡಿ, ತೋಟಗಾರಿಕೆ ಕೃಷಿಯ ಪೂರಕ ಶಾಖೆಯಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಇದು ಪ್ರಮುಖ ಪಾತ್ರವಹಿಸುತ್ತದೆ. ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ರೈತರು ಹಣ್ಣು, ಹೂ ಹಾಗೂ ತರಕಾರಿ ಬೆಳೆಗಳ ಬೆಳೆತನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇಂತಹ ತೋಟಗಾರಿಕಾ ಮೇಳಗಳು ರೈತರಿಗೆ ಹೊಸ ತಂತ್ರಜ್ಞಾನಗಳು ಹಾಗೂ ಮಾರಾಟದ ಅವಕಾಶಗಳನ್ನು ಪರಿಚಯಿಸುತ್ತವೆ ಎಂದರು.ಕೃಷಿಕ ಸಮಾಜದ ಅಧ್ಯಕ್ಷ ಎಂ.ಎಸ್. ಯೋಗೀಶ್ ಮಾತನಾಡಿ, ಈ ಮೇಳವು ರೈತರ ಉತ್ಪಾದನಾ ವೈವಿಧ್ಯತೆಯನ್ನು ಪ್ರದರ್ಶಿಸಲು ಮತ್ತು ಸ್ಥಳೀಯ ಮಾರುಕಟ್ಟೆ ಸಂಪರ್ಕವನ್ನು ಬಲಪಡಿಸಲು ಉತ್ತಮ ವೇದಿಕೆಯಾಗಲಿದೆ ಎಂದರು.ಕೃಷಿಕ ಸಮಾಜದ ಖಜಾಂಚಿ ನಟರಾಜು ಮಾತನಾಡಿ, ಹೂ, ಹಣ್ಣು, ತರಕಾರಿ ಹಾಗೂ ಪೂರಕ ವಲಯಗಳಾದ ಮಶ್ರೂಮ್ ಉತ್ಪಾದನೆ, ಜೇನು ಸಾಕಾಣಿಕೆ, ಜೈವಿಕ ಪರಿಕರಗಳ ತಯಾರಿಕೆ ಮುಂತಾದವು ರೈತರ ಆದಾಯವನ್ನು ಹೆಚ್ಚಿಸಲು ಸಹಾಯಕವಾಗಿವೆ. ಇಂತಹ ಮೇಳಗಳು ಹೊಸ ಮಾರುಕಟ್ಟೆ ಸಂಪರ್ಕ ನಿರ್ಮಿಸಿ ರೈತರ ಆರ್ಥಿಕ ಸ್ಥಿರತೆಯನ್ನು ಬಲಪಡಿಸುತ್ತವೆ ಎಂದರು.ಕೃಷಿಕಾ ಸಮಾಜದ ಸದಸ್ಯ ಸಂಗಮೇಶ್ ಮಾತನಾಡಿ ತೋಟಗಾರಿಕೆ ಕ್ಷೇತ್ರವು ರೈತರಿಗೆ ಹೆಚ್ಚುವರಿ ಆದಾಯದ ಮೂಲವಾಗಿದ್ದು, ಹಣ್ಣು, ಹೂ, ತರಕಾರಿ ಬೆಳೆಗಳ ಜೊತೆಗೆ ಪೂರಕ ವಲಯಗಳಲ್ಲಿ ತೊಡಗುವ ಮೂಲಕ ರೈತರು ತಮ್ಮ ಆದಾಯವನ್ನು ಬಹುಪಟ್ಟು ಹೆಚ್ಚಿಸಬಹುದು. ಉತ್ತಮ ತಳಿಗಳು, ನವೀನ ತಂತ್ರಜ್ಞಾನ ಹಾಗೂ ಮೌಲ್ಯವರ್ಧನೆ ಚಟುವಟಿಕೆಗಳ ಅಳವಡಿಕೆಯಿಂದ ಗ್ರಾಮೀಣ ಆರ್ಥಿಕತೆ ಬಲಪಡುತ್ತದೆ ಎಂದರು.ಈ ಸಂದರ್ಭದಲ್ಲಿ ತಿಪಟೂರು ಕೃಷಿ ವಿಜ್ಞಾನ ಕೇಂದ್ರದಿಂದ ತಯಾರಿಸಲಾದ ಟ್ರೈಕೊಡರ್ಮಾ ಸೂಡೋಮೋನಾಸ್ ಹಾಗೂ ಇನ್ನಿತರ ಜೀವಾಣು ಉತ್ಪನ್ನಗಳನ್ನು ಕಲ್ಪಾಸ್ತ್ರ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಅನಾವರಣಗೊಳಿಸಲಾಯಿತು.ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಅಧ್ಯಕ್ಷತೆ ವಹಿದ್ದರು. ಕಾರ್ಯಕ್ರಮದಲ್ಲಿ ತಿಪಟೂರು ಹಾಲು ಒಕ್ಕೂಟದ ನಿರ್ದೇಶಕ ಪ್ರಕಾಶ್, ಕೃಷಿಕ ಸಮಾಜದ ಯೋಗಾನಂದ ಮೂರ್ತಿ, ಡಾ. ಮಧುಸೂದನ್, ಡಾ.ರುದ್ರಸ್ವಾಮಿ, ಡಾ. ನವೀನ್, ಡಾ. ದೀಪ, ಕೆವಿಕೆ ಮುಖ್ಯಸ್ಥ ಡಾ. ಶಂಕರ್ ಸೇರಿದಂತೆ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಕೆವಿಕೆ ವಿಜ್ಞಾನಿಗಳು ಭಾಗವಹಿಸಿದ್ದರು.ಫೋಟೋ 29-ಟಿಪಿಟಿ೧ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸ್ಯ ಸಂತೆ ಉದ್ಘಾಟಿಸಿದ ಕೃಷಿ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕರಾದ ಡಾ.ವೈ.ಎನ್.ಶಿವಲಿಂಗಯ್ಯ ಮತ್ತಿತರರು.