ಕುಷ್ಟಗಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮರ ನೆಟ್ಟು ಬೆಳೆಸುವ ಮೂಲಕ ಪ್ರಕೃತಿಯ ಸಮತೋಲನ ಕಾಪಾಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೋಟಿಹಾಳ ವಲಯ ಮೇಲ್ವಿಚಾರಕ ಎಸ್ ಶರಣಪ್ಪ ಹೇಳಿದರು.
ವಿಷಗಾಳಿ ನುಂಗಿ ಶುದ್ಧ ಗಾಳಿ ನೀಡುವ ಗಿಡ ಮರಗಳನ್ನು ನಾವು ಬೆಳೆಸದಿದ್ದರೆ ನಮಗೆ ಜೀವಿಸುವುದು ಕಷ್ಟ ಸಾಧ್ಯವಾಗಲಿದೆ. ಪರಿಸರ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು, ಹಸಿರು ವಾತಾವರಣ ಸೃಷ್ಟಿ ಮಾಡಲು ನಾವೆಲ್ಲರೂ ಕಂಕಣಬದ್ಧರಾಗಿ, ಇದೊಂದು ಯುದ್ಧೋಪಾದಿಯಂತೆ ದೇಶ ಸೇವೆ ಎಂದು ಭಾವಿಸಿ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ಬಸವರಾಜ ಬಾಗಲಿ ಮಾತನಾಡಿ, ಪರಿಸರ ಮಹತ್ವದ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಂಡು ಶಾಲೆ, ಮನೆ ಹಾಗೂ ಸುತ್ತಮುತ್ತಲಿನ ಪರಿಸರ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು ಮತ್ತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಪಾರ್ವತಿ ನಿಡಶೇಸಿ ಮಾತನಾಡಿದರು.ಸಂಸ್ಥೆಯಿಂದ ನೀಡಿದ ಸಸಿಗಳನ್ನು ಶಾಲಾ ಮೈದಾನದಲ್ಲಿ ನೆಟ್ಟು ಬೆಳೆಸಲು ಮಕ್ಕಳಿಗೆ ಉಸ್ತುವಾರಿ ನೀಡಿದರು.
ಶಿಕ್ಷಕ ಪ್ರಸನ್ನ ಕುಮಾರ್ ನಿರ್ವಹಿಸಿದರು. ವಿಜಯಕುಮಾರ ಬಿರಾದಾರ ಸ್ವಾಗತಿಸಿ ವಂದಿಸಿದರು.