ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮಾ ಪರಿಹಾರ ಪಡೆಯಲು 9 ಈರುಳ್ಳಿ ಸಸಿ ನೆಟ್ಟಿರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕೇವಲ 5 ಟೊಮೊಟೊ ಸಸಿ ಹಾಕಿರುವ ಪ್ರಕರಣ ಪತ್ತೆಯಾಗಿದೆ. ಇದರಿಂದ ಈ ಯೋಜನೆ ಅಕ್ರಮ ಬಗೆದಷ್ಟು ಹೊರಬರುತ್ತಿದೆ.
ಕುಷ್ಟಗಿ ತಾಲೂಕಿನ ಹನುಮನಾಳ ಹೋಬಳಿಯಲ್ಲಿ ನಡೆದಿರುವ ಅಕ್ರಮಗಳನ್ನು ಪತ್ತೆ ಹಚ್ಚುತ್ತಿದ್ದಂತೆ ಇದರ ಜಾಡು ವಿಸ್ತಾರವಾಗುತ್ತಿದೆ. 9 ಈರುಳ್ಳಿ ಸಸಿ ನೆಟ್ಟು ಲಕ್ಷ ಲಕ್ಷ ಪರಿಹಾರ ಪಡೆದಿದ್ದರೆ, ಇತ್ತ 5 ಟೊಮೆಟೊ ಸಸಿ ನೆಟ್ಟು ಪರಿಹಾರಕ್ಕಾಗಿ ಫೋಟೋ ಅಪ್ಲೋಡ್ ಮಾಡಿದ್ದಾರೆ. ಆದರೆ, 2023-24ರ ಹಿಂಗಾರು ಬೆಳೆಯಲ್ಲಿ ಟೊಮೆಟೊ ಬೆಳೆ ನಷ್ಟದ ಪ್ರಮಾಣವನ್ನು ಅಳೆಯುವಾಗ ಕಡಿಮೆ ತೋರಿಸಿದ್ದರಿಂದ ಪರಿಹಾರ ಧಕ್ಕಿಸಿಕೊಳ್ಳಲು ಆಗಿಲ್ಲ. ಆದರೆ, ವಾಸ್ತವದಲ್ಲಿ 2023-24ರಲ್ಲಿ ಟೊಮೆಟೋ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಬೆಳೆದವರ ಸಂಖ್ಯೆ ಕಡಿಮೆ ಇರುವುದರಿಂದ ಅಕ್ರಮ ನಡೆಸಲು ಆಗಿಲ್ಲ. ಹೀಗಾಗಿ ಪರಿಹಾರ ಪಡೆಯಲು ಆಗಿಲ್ಲ. ಆದರೆ, ಈ ಗ್ಯಾಂಗ್ ಈರುಳ್ಳಿ ಬೆಳೆಯಲ್ಲಿ ಮಾತ್ರ ಗೋಲ್‌ಮಾಲ್ ಮಾಡಿದೆ. ಹೀಗಾಗಿ, ಇತರೆ ಯಾವ ಬೆಳೆಗೂ ಹಾನಿಯಾಗಿದ್ದರೂ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ. ಇದರಿಂದ ಅರ್ಹ ರೈತರು, ನಷ್ಟ ಅನುಭಿಸಿದವರಿಗೆ ಪರಿಹಾರ ದೊರಕಿಲ್ಲ.ವಿಮಾ ಪರಿಹಾರದ ಅಕ್ರಮದಲ್ಲಿ ತೊಡಗಿರುವ ಗ್ಯಾಂಗ್, ಬಿತ್ತನೆ ಮಾಡಿದ ಬೆಳೆ ನಂತರ ಬಲಾಯಿಸುವ ಹಂತದಲ್ಲಿಯೇ ಬೆಳೆ ವಿಮೆ ಪಾವತಿಸುತ್ತಾರೆ. ರೈತರು ಯಾವುದೇ ಬೆಳೆ ಹಾಕಿರಲಿ. ಇವರು ಮಾತ್ರ ತಾವು ಯಾವ ಬೆಳೆಗೆ ವಿಮಾ ಪರಿಹಾರ ಪಡೆಯಬಹುದು ಎನ್ನುವುದನ್ನು ಲೆಕ್ಕಹಾಕಿಯೇ ಪಾವತಿಸುತ್ತಾರೆ ಮತ್ತು ಬಂದ ಪರಿಹಾರ ರೈತರ ಖಾತೆಗೆ ಜಮೆಯಾಗದಂತೆ ತಾವೇ ನೀಡಿದ ಖಾತೆಗೆ ಜಮೆಯಾಗುವಂತೆ ಮಾಡಿಕೊಂಡಿದ್ದಾರೆ.
ಕ್ರಿಮಿನಲ್ ಕೇಸ್:ಬೆಳೆ ವಿಮೆ ಪರಿಹಾರದಲ್ಲಿ ನಡೆದಿರುವ ಅಕ್ರಮ ಕುರಿತು ಕನ್ನಡಪ್ರಭ ಸರಣಿ ವರದಿ ಪ್ರಕಟಿಸಿದ್ದರಿಂದ ಎಚ್ಚೆತ್ತುಕೊಂಡು ಕೃಷಿ ಇಲಾಖೆ ಮೇಲಾಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ವಿಚಕ್ಷಣ ದಳಕ್ಕೆ ತಕ್ಷಣ, ಈ ವರೆಗೆ ಬಂದಿರುವ ಪ್ರಕರಣ ಹಾಗೂ ಪಾಳು ಬಿದ್ದ ಭೂಮಿಯಲ್ಲಿ ವಿಮೆ ತುಂಬಿ ಪರಿಹಾರ ಪಡೆದವರ ವಿರುದ್ಧ ಕ್ರಿಮನಿಲ್ ಕೇಸ್ ದಾಖಲಿಸಲು ಸೂಚಿಸಿದೆ.
ಗುತ್ತಿಗೆ ನೀಡುವ ರೈತರು:ವಿಮಾ ಪರಿಹಾರ ಪಡೆಯಲು ರೈತರು ತಮ್ಮ ಭೂಮಿಯನ್ನು ಗುತ್ತಿಗೆ ನೀಡಿರುವುದು ಬೆಳಕಿಗೆ ಬಂದಿದೆ. ತಮ್ಮ ಬ್ಯಾಂಕ್ ಖಾತೆ ವಿವರ, ಮೊಬೈಲ್ ಸಂಖ್ಯೆ ಹಾಗೂ ಪಹಣಿಯನ್ನು ಇಂತಿಷ್ಟು ಹಣಕ್ಕೆ ಎಂದು ಗುತ್ತಿಗೆ ನೀಡಿದ್ದಾರೆ. ಈ ಮೂಲಕವೇ ಬೆಳೆ ವಿಮೆ ಪಾವತಿ ಪರಿಹಾರ ಪಡೆದುಕೊಂಡಿದ್ದಾರೆ ಎಂಬ ಅಘಾತಕಾರಿ ಅಂಶ ಪತ್ತೆಯಾಗಿದೆ. ಹನುಮನಾಳ ಮಾತ್ರವಲ್ಲದೆ ರಾಜ್ಯಾದ್ಯಂತ ಈ ದಂಧೆ ನಡೆಯುತ್ತಿದೆ ಎಂದು ಹೆಸರೇಳದ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.