10 ಲಕ್ಷ ಸಸಿಗಳ ನೆಡುವ ಕಾರ್ಯಕ್ಕೆ ಚಾಲನೆ

KannadaprabhaNewsNetwork | Published : Jun 6, 2024 12:33 AM

ಸಾರಾಂಶ

ಮಾನವನ ಸ್ವಾರ್ಥಕ್ಕೆ ಪರಿಸರ ನಾಶವಾಗುತ್ತಿದೆ. ಆದರೆ ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಹಾಗೂ ನಮ್ಮಲ್ಲಿ ಪರಿಸರದ ಬಗ್ಗೆ ಮೂಡಿರುವ ಜಾಗೃತಿ ಪರಿಣಾಮ ಪರಿಸರ ನಾಶದ ಪ್ರಮಾಣವು ಕಡಿಮೆಯಾಗಿದೆ.

ಹಳಿಯಾಳ: ಪರಿಸರ ಸಂರಕ್ಷಣೆಯು ಎಲ್ಲರ ಮೂಲ ಜವಾಬ್ದಾರಿ, ಕರ್ತವ್ಯವಾಗಿದೆ. ಪರಿಸರ ಸಂರಕ್ಷಣೆ ನಿರಂತರವಾಗಿ ನಡೆಯುತ್ತಿರಬೇಕು. ಕೇವಲ ವಿಶ್ವ ಪರಿಸರ ದಿನಕ್ಕೆ ಸೀಮಿತವಾಗಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಬುಧವಾರ ಪಟ್ಟಣದ ನೂತನ ಬಸ್ ಡಿಪೋ ಪಕ್ಕದಲ್ಲಿರುವ ಜಿ- ಪ್ಲಸ್ 2 ಬಡಾವಣೆಯಲ್ಲಿ ಅರಣ್ಯ ಇಲಾಖೆಯವರು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತಾಲೂಕಿನಲ್ಲಿ 10 ಲಕ್ಷ ಸಸಿ ನೆಡುವ ಬೃಹತ್ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ಸಂರಕ್ಷಣೆಯ ಕಾರ್ಯವು ಪವಿತ್ರವಾದ ಸೇವೆಯಾಗಿದೆ. ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದರು. ಕೊರೋನಾ ಮಹಾಮಾರಿಯ ಸಂಕಷ್ಟವು ನಮಗೆಲ್ಲರಿಗೂ ಆರೋಗ್ಯ, ಶಿಕ್ಷಣ ಹಾಗೂ ಪರಿಸರದ ಮಹತ್ವವನ್ನು ತಿಳಿಸಿದೆ. ಕೊರೋನಾ ನಂತರದ ಬದಲಾದ ಭೌಗೋಳಿಕ ಮತ್ತು ಜೈವಿಕ ಸ್ಥಿತಿಯು ನಮಗೆಲ್ಲಾ ಜೀವದ ಸಂರಕ್ಷಣೆಯಷ್ಟೇ ಪರಿಸರ ಸಂರಕ್ಷಣೆಗೆ ಆದ್ಯತೆಯನ್ನು ನೀಡಬೇಕೆಂಬುದರ ಬಗ್ಗೆ ಬದುಕಿನ ಪಾಠ ಕಲಿಸಿದೆ ಎಂದರು. ಮಾನವನ ಸ್ವಾರ್ಥಕ್ಕೆ ಪರಿಸರ ನಾಶವಾಗುತ್ತಿದೆ. ಆದರೆ ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಹಾಗೂ ನಮ್ಮಲ್ಲಿ ಪರಿಸರದ ಬಗ್ಗೆ ಮೂಡಿರುವ ಜಾಗೃತಿ ಪರಿಣಾಮ ಪರಿಸರ ನಾಶದ ಪ್ರಮಾಣವು ಕಡಿಮೆಯಾಗಿದೆ ಎಂದರು.

ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ ಕೆ.ಸಿ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿನೀತಾ ಚವ್ಹಾಣ, ಆರ್‌ಎಫ್‌ಒ ನರೇಶ ಜಿ.ವಿ., ಉಪವಲಯ ಅರಣ್ಯಾಧಿಕಾರಿ ಪರಶುರಾಮ ಹುದ್ದಾರ, ಸಿಬ್ಬಂದಿಗಳಾದ ರೇಣುಕಾ ಮಡಿವಾಳ, ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಪುರಸಭಾ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಮಾಜಿ ಉಪಾಧ್ಯಕ್ಷೆ ಸುವರ್ಣ ಮಾದರ, ಸದಸ್ಯರಾದ ಅನಿಲ ಚವ್ಹಾಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಯುವ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ, ಸತ್ಯಜಿತ ಗಿರಿ, ಅಣ್ಣಪ್ಪ ಬಂಡಿವಾಡ ಹಾಗೂ ಇತರರು ಇದ್ದರು.

ವಿವಿಧೆಡೆ ಆಚರಣೆ: ಅರಣ್ಯ ಇಲಾಖೆ ಸಹಯೋಗದಲ್ಲಿ ಪಟ್ಟಣದ ಗುತ್ತಿಗೇರಿ ಗಲ್ಲಿಯ ಬಳಿಯ ಹಿಂದೂ ರುದ್ರಭೂಮಿಯಲ್ಲಿ ಹಾಗೂ ಪಟ್ಟಣದ ವಿವಿದೆಡೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡಲಾಯಿತು.

Share this article